

ಸುಪ್ರೀಂ ಕೋರ್ಟ್ ಕಲಾಪದಲ್ಲಿ ಬುಧವಾರ ಮಹತ್ವದ ಸಂಗತಿಗಳು ಕಂಡುಬಂದವು. 1990ರಿಂದ 1996ರವರೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ವ್ಯಾಪಕ ಚುನಾವಣೆ ಸುಧಾರಣೆಗಳನ್ನು ಜಾರಿಗೆ ತಂದ ದಿವಂಗತ ಟಿ.ಎನ್. ಶೇಷನ್ ಅವರಂತಹ ಮುಖ್ಯ ಚುನಾವಣಾ ಆಯುಕ್ತರನ್ನು ನಾವು ಬಯಸುತ್ತೇವೆ ಎಂದು ಹೇಳಿರುವ ಕೋರ್ಟ್, ಚುನಾವಣೆ ಆಯುಕ್ತರ ನೇಮಕಾತಿಯಲ್ಲಿ ಈಗ ಕೈಚಳಕ ನಡೆಯುತ್ತಿದೆಯೇ ಎಂದು ಪ್ರಶ್ನಿಸಿರುವುದು ನೇಮಕಾತಿಯಲ್ಲಿ ಈಗ ಎಲ್ಲವೂ ಸರಿಯಿಲ್ಲವೇ ಎಂದು ಅನುಮಾನಪಡುವಂತಾಗಿದೆ. ಚುನಾವಣಾ ಆಯುಕ್ತರ ನೇಮಕ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಂತಿಮವಾಗಿ ಯಾವ ನಿರ್ಣಯ ಹೊರಬೀಳುವುದೆಂದು ಕಾದುನೋಡಬೇಕಿದೆ.
ಇದೇ ವೇಳೆ ಮಹತ್ವದ ಕ್ರಮವೊಂದನ್ನು ಘೋಷಿಸುವ ಮೂಲಕ ಸವೋಚ್ಚ ನ್ಯಾಯಾಲಯ ತ್ವರಿತ ನ್ಯಾಯದಾನದ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಿಟ್ಟಿದೆ. ಅಪರಾಧ, ನೇರ-ಪರೋಕ್ಷ ತೆರಿಗೆ, ಭೂ ಸ್ವಾಧೀನ ಮತ್ತು ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯಾಧಿಕರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಾಲ್ಕು ವಿಶೇಷ ಪೀಠಗಳನ್ನು ಇನ್ನು ಹೊಂದಲಿದೆ. ಮುಂದಿನ ವಾರದಿಂದಲೇ ಈ ವಿಷಯಗಳಿಗೆ ಸಂಬಂಧಿಸಿದ ಪೀಠಗಳು ಕಾರ್ಯನಿರ್ವಹಣೆ ಮಾಡಲಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರಕಟಿಸಿರುವುದು ಮಹತ್ವದ ಕ್ರಮವಾಗಿದೆ. ಸುಪ್ರೀಂ ಕೋರ್ಟ್ನ ಪ್ರತಿ ಪೀಠವು ಪ್ರತಿದಿನ ವರ್ಗಾವಣೆಗೊಂಡ 10 ಪ್ರಕರಣಗಳು ಮತ್ತು 10 ಜಾಮೀನು ಪ್ರಕರಣಗಳ ವಿಚಾರಣೆ ಕೈಗೊಳ್ಳುವ ಮೂಲಕ ಚಳಿಗಾಲದ ರಜಾವಧಿ ಮೊದಲು ಎಲ್ಲ ಪ್ರಕರಣಗಳನ್ನು ವಿಲೇವಾರಿಯಾಗುವಂತೆ ಕಾರ್ಯನಿರ್ವಹಿಸಬೇಕೆಂದು ಕಳೆದ ವಾರವಷ್ಟೇ ನ್ಯಾ. ಚಂದ್ರಚೂಡ ಸೂಚಿಸಿದ್ದು ಕೂಡ ಗಮನಾರ್ಹವಾಗಿದೆ.
ಇನ್ನು ಈ ತಿಂಗಳ ಆರಂಭದಲ್ಲಿ ನಿವೃತ್ತರಾದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ತ್ವರಿತ ನ್ಯಾಯದಾನದ ಪ್ರತಿಪಾದಕ ಎಂದೇ ಹೆಸರು ಮಾಡಿದವರು. ಮುಖ್ಯ ನ್ಯಾಯಮೂರ್ತಿಯಾಗಿ ಅವರು ಕಾರ್ಯನಿರ್ವಹಿಸಿದ್ದು ಕೇವಲ 74 ದಿನಗಳಾದರೂ ದೀರ್ಘಕಾಲಿನ ಪರಿಣಾಮಗಳುಳ್ಳ ಅನೇಕ ಮಹತ್ವದ ಕ್ರಮಗಳನ್ನು ಈ ಅಲ್ಪ ಸಮಯದಲ್ಲೇ ಅವರು ಕೈಗೊಂಡಿರುವುದು ಶ್ಲಾಘನೆಗೆ ಪಾತ್ರವಾಗಿದೆ. 2019ರ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34ಕ್ಕೆ ಏರಿಸಿದ್ದರೂ ಬಾಕಿ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಹೆಚ್ಚುತ್ತಲೇ ಸಾಗಿತ್ತು. ನ್ಯಾ. ಲಲಿತ್ ನೇತೃತ್ವದಲ್ಲಿ ಕಾರ್ಯನಿರ್ವಹಣೆ ಸಂದರ್ಭದಲ್ಲಿ ಈ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿ ಸಾಗಿದ್ದು ವಿಶೇಷ. 2022ರ ಸೆಪ್ಟೆಂಬರ್ 1 ರಂದು 70,310 ಪ್ರಕರಣಗಳಿದ್ದರೆ, ಅಕ್ಟೋಬರ್ 1ರಂದು ಈ ಸಂಖ್ಯೆ 69,461ಕ್ಕೆ ತಗ್ಗಿತು. ಪ್ರಕರಣಗಳ ಪಟ್ಟಿ ಮಾಡುವಲ್ಲಿ ತ್ವರಿತಗತಿ ಹಾಗೂ ಪಾರದರ್ಶಕತೆಯನ್ನು ತಂದದ್ದು ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆ ನೀಡಿತು. ಈಗ ನೂತನ ಮುಖ್ಯ ನ್ಯಾಯಮೂರ್ತಿಗಳು ನಾಲ್ಕು ವಿಶೇಷ ಪೀಠಗಳನ್ನು ರಚಿಸಲು ಮುಂದಾಗಿರುವುದು ಕೂಡ ತ್ವರಿತ ನ್ಯಾಯದಾನದ ಆಲೋಚನೆಯ ಮುಂದುವರಿದ ಭಾಗವೇ ಆಗಿದೆ. ಇದೇ ರೀತಿಯ ಸುಧಾರಣೆಗಳು ಮುಂದುವರಿದರೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ತಗ್ಗಿ ಕಕ್ಷಿದಾರರಿಗೆ ಅನುಕೂಲವಾಗಲಿದೆ.