ಕೃಷಿಗೆ ಸಿಗಲಿ ಮನ್ನಣೆ; ಕೃಷಿ ಬೆಲೆ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆ..

Editorial
Published on

ಕೃಷಿರಂಗ ಎದುರಿಸುತ್ತಿರುವ ವರ್ತಮಾನದ ಸಮಸ್ಯೆ, ರೈತರ ಸಂಕಷ್ಟಗಳನ್ನು ಬಗೆಹರಿಸಬೇಕು. ಮುಖ್ಯವಾಗಿ, ಕೃಷಿಯನ್ನು ನಷ್ಟದ ಕೂಪದಿಂದ ಮೇಲೆತ್ತಬೇಕು, ರೈತರ ಆದಾಯ ಹೆಚ್ಚಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಮತ್ತೊಂದೆಡೆ, ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದಾರೆ. ಈ ಬಗ್ಗೆ ಇಂದು (ಬುಧವಾರ) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೂ ಈ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆಯಾದರೂ, ರಾಜ್ಯ ಸರ್ಕಾರ ಕೇಂದ್ರದ ಸೂಚನೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅಕಾಲಿಕ ಮಳೆ ರೈತರ ಬೆಳೆಗಳನ್ನು ಆಪೋಶನ ಪಡೆದುಕೊಂಡಿದೆ. ಪರಿಹಾರದ ನಿರೀಕ್ಷೆಯಲ್ಲಿರುವ ಕೃಷಿಕರು ಹಿಂಗಾರು ಬೆಳೆಗಳು ಕೂಡ ಕೈಕೊಟ್ಟಿರುವುದರಿಂದ ಮುಂದೇನು ಎಂದು ಚಿಂತಾಕ್ರಾಂತರಾಗಿದ್ದಾರೆ.

ಈ ನಡುವೆ ಕೃಷಿ ಬೆಳವಣಿಗೆಗೆ ಮತ್ತು ರೈತರ ಸಂಕಷ್ಟ ನಿವಾರಣೆಗೆ ಪೂರಕವಾಗಬಲ್ಲ ವರದಿಯನ್ನು ಕೃಷಿ ಬೆಲೆ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ. ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಹಲವು ಪ್ರಮುಖ ಶಿಫಾರಸುಗಳನ್ನು ಇದು ಒಳಗೊಂಡಿದ್ದು, ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದು ಕುತೂಹಲಕರ. ಕೃಷಿ ಯಂತ್ರಗಳ ಖರೀದಿಗೆ ಸಣ್ಣ ರೈತರಿಗೆ ಶೇಕಡ 90, ಮಧ್ಯಮ ರೈತರಿಗೆ ಶೇ.75 ಮತ್ತು ದೊಡ್ಡ ರೈತರಿಗೆ ಶೇ.50 ರಿಯಾಯಿತಿ ನೀಡಬೇಕು. ಪಶು ಸಂಗೋಪನೆ, ಕುಕ್ಕುಟೋದ್ಯಮ ಮುಂತಾದವುಗಳಿಗೆ ಹೆಚ್ಚಿನ ಪೋ›ತ್ಸಾಹ ನೀಡಿ ಕೊಟ್ಟಿಗೆ ಗೊಬ್ಬರದ ಲಭ್ಯತೆ ಹೆಚ್ಚಿಸಬೇಕು. ರಾಜ್ಯದ ಅಣೆಕಟ್ಟುಗಳ ವ್ಯಾಪ್ತಿಯಲ್ಲಿ ಇರುವ ನಾಲೆಗಳನ್ನು ಆಧುನೀಕರಿಸಿ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಹೊಸ ಕೆರೆಗಳನ್ನು ನಿರ್ವಿುಸಬೇಕು ಮತ್ತು ಈಗಾಗಲೇ ಇರುವ ಕೆರೆಗಳನ್ನು ಆಧುನೀಕರಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ರೈತರು ಕೃಷಿ ಆದಾಯವನ್ನಷ್ಟೇ ನೆಚ್ಚಿಕೊಳ್ಳುತ್ತಿರುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ, ಕೃಷಿ ಆದಾಯದ ಜತೆಗೆ ಹೈನುಗಾರಿಕೆ, ಕೋಳಿಸಾಕಣೆ, ಕುರಿ/ಮೇಕೆಸಾಕಣೆ, ಮೀನುಗಾರಿಕೆ, ಜೇನುಕೃಷಿ, ರೇಷ್ಮೆಕೃಷಿ ಮಾಡಲು ಮತ್ತು ಹಣ್ಣಿನ ಬೆಳೆಗಳು, ಅರಣ್ಯ ಬೆಳೆಗಳು, ತೋಟದ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡುವಂತೆಯೂ ಹೇಳಲಾಗಿದೆ.

ಕೃಷಿ ಬೆಲೆ ಆಯೋಗ ಪ್ರಮುಖ ವಿಷಯಗಳ ಬಗ್ಗೆ ಸಮಗ್ರವಾಗಿ ವರದಿ ಸಲ್ಲಿಸಿದೆ ಎಂಬುದೇನೋ ನಿಜ. ಆದರೆ, ಎಲ್ಲ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ ಅಂತೇನಲ್ಲ. ಬೊಕ್ಕಸದ ಸ್ಥಿತಿ ಸೇರಿ ಅದಕ್ಕೆ ಹಲವು ಕಾರಣಗಳು. ಆದರೆ, ಸರಳ ಅನುಷ್ಠಾನಕ್ಕೆ ಸಾಧ್ಯವಾಗುವಂಥ, ಆ ಮೂಲಕ ಸುಧಾರಣೆಗೆ ಪ್ರೇರೇಪಿಸುವಂಥ ಹಲವು ಅಂಶಗಳನ್ನು ವರದಿ ಒಳಗೊಂಡಿದ್ದು, ಅವುಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು. ವರದಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಜಾರಿ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಇಂಥ ಆಯೋಗಗಳ ಪ್ರಯತ್ನ, ವರದಿಗಳೆಲ್ಲ ವ್ಯರ್ಥ ಕಸರತ್ತಾಗಿಯೇ ಉಳಿದುಬಿಡುತ್ತದೆ ಎಂಬ ಎಚ್ಚರಿಕೆಯೂ ಅಗತ್ಯ. ಕರ್ನಾಟಕದಲ್ಲಿ ಕೃಷಿ ಸುಧಾರಣೆಗೆ ವ್ಯಾಪಕ ಅವಕಾಶಗಳಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕೊರತೆಗಳನ್ನು ನಿವಾರಿಸಿಕೊಳ್ಳುವುದು ಮತ್ತು ರೈತರಲ್ಲಿ ಆತ್ಮಸ್ಥೈರ್ಯ ತುಂಬುವುದು ಆದ್ಯತೆಯಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net