ಸಿಹಿ ಸಂಗತಿ: ಇಂಧನ ಕ್ಷೇತ್ರದಲ್ಲಿ ಲಾಭ ಕಂಡುಕೊಂಡ ಸಕ್ಕರೆ ಉದ್ಯಮ

Editorial
Published on

ಕಬ್ಬಿನಿಂದ ಸಕ್ಕರೆ ತಯಾರಿಸುವಾಗ ಹೊರಹೊಮ್ಮುವ ಉಪಉತ್ಪನ್ನವಾದ ಎಥೆನಾಲ್ ಉತ್ಪಾದನೆ ಭಾರತದಲ್ಲಿ ಕಳೆದ 9 ವರ್ಷಗಳಲ್ಲಿ 10 ಪಟ್ಟು ಅಧಿಕವಾಗಿದೆ. ಕಳೆದ ಆರು ವರ್ಷಗಳಲ್ಲಿ ಸಕ್ಕರೆ ರಫ್ತು ಪ್ರಮಾಣದಲ್ಲಿ 20 ಪಟ್ಟು ಹೆಚ್ಚಳವಾಗಿದೆ. ಇದರಿಂದಾಗಿ, ಭಾರತದ ಸಕ್ಕರೆ ಕಾರ್ಖಾನೆಗಳು ಲಾಭದ ಹಾದಿಯಲ್ಲಿ ಸಾಗಿ ಸ್ವಾವಲಂಬಿಯಾಗಲು ಸಾಧ್ಯವಾಗಿದ್ದಲ್ಲದೆ, ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಯನ್ನು ತ್ವರಿತವಾಗಿ ಮಾಡಲು ನೆರವಾಗಿದೆ. ದೇಶದಲ್ಲಿನ ಒಟ್ಟಾರೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಬಾಕಿ ಮೊತ್ತ 2020-21ನೇ ಸಾಲಿನ ಶೇ. 0.1 ಮತ್ತು 2021-22ನೇ ಸಾಲಿನಲ್ಲಿ ಶೇ. 2ರಷ್ಟು ಮಾತ್ರ ಇದೆ ಎಂದು ಸರ್ಕಾರಿ ಅಂಕಿ-ಅಂಶಗಳು ಸೂಚಿಸುತ್ತಿರುವುದು ಸಿಹಿ ಸಂಗತಿಯೇ ಎನ್ನಬಹುದಾಗಿದೆ.

2020-21ನೇ ಹಂಗಾಮಿಗೆ ಕಬ್ಬು ರೈತರಿಗೆ ಪಾವತಿಸಬೇಕಾದ 93,075 ಕೋಟಿ ರೂಪಾಯಿಗಳ ಪೈಕಿ ಕಾರ್ಖಾನೆಯವರು 92,987 ಕೋಟಿ ರೂಪಾಯಿ ಪಾವತಿಸಿದ್ದು, ಬಾಕಿ 88 ಕೋಟಿ ರೂಪಾಯಿ ಮಾತ್ರ ಉಳಿದಿದೆ. 2021-22ರಲ್ಲಿ ರೈತರಿಗೆ 1.16 ಲಕ್ಷ ಕೋಟಿ ರೂಪಾಯಿ ಪಾವತಿಯಾಗಿದ್ದು, 2,310 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಭಿನ್ನವಾಗಿತ್ತು. ಹಲವು ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸುತ್ತಿದ್ದವು; ಕೆಲವೊಂದು ಬಾಗಿಲು ಮುಚ್ಚುವಂತಾಗಿತ್ತು. ಬಾಕಿ ಪಾವತಿಗೆ ಆಗ್ರಹಿಸಿ ಬೆಳೆಗಾರರ ಪ್ರತಿಭಟನೆಗಳು ಸಹಜವಾಗಿದ್ದವು.

ಕಬ್ಬಿನ ರಸದಿಂದ ಎಥೆನಾಲ್ ತಯಾರಿಕೆಗೆ ಪ್ರೋತ್ಸಾಹ, ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ ನಿಗದಿ, ಹೆಚ್ಚುವರಿ ಸಕ್ಕರೆ ರಫ್ತಿಗೆ ಅವಕಾಶ ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಂಡಿರುವುದು ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರಿಗೆ ಲಾಭದಾಯಕ ಪರಿಣಾಮಗಳನ್ನುಂಟು ಮಾಡಿದೆ. ಎಥೆನಾಲ್ ಉಪಉತ್ಪನ್ನವು ಸಕ್ಕರೆ ಕೈಗಾರಿಕೆ ವಲಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ ಎಂಬುದನ್ನು 2014ರಿಂದ ತೈಲ ಕಂಪನಿಗಳಿಗೆ ಎಥೆನಾಲ್ ಮಾರಾಟದಿಂದ ಸಕ್ಕರೆ ಕಾರ್ಖಾನೆಗಳು ಗಳಿಸಿರುವ 77,000 ಕೋಟಿ ರೂ.ಗಳ ಮೊತ್ತವೇ ಸೂಚಿಸುತ್ತದೆ. ಎಥೆನಾಲ್ ಉತ್ಪಾದನೆ 2013-14 ಮತ್ತು 2021-22ರ ನಡುವಿನ ಅವಧಿಯಲ್ಲಿ 38 ಕೋಟಿ ಲೀಟರ್​ಗಳಿಂದ 408 ಕೋಟಿ ಲೀಟರ್​ಗಳಿಗೆ ಏರಿಕೆಯಾಗಿದೆ. ಈ ಮೂಲಕ ಸಕ್ಕರೆ ಉದ್ಯಮವು ಇಂಧನ ಕ್ಷೇತ್ರವಾಗಿಯೂ ಪರಿವರ್ತನೆಯಾಗಿದೆ. ಕರ್ನಾಟಕ ಸರ್ಕಾರವು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಎಥೆನಾಲ್​ನಿಂದ ಸಕ್ಕರೆ ಕಾರ್ಖಾನೆಗಳು ಗಳಿಸುವ ಲಾಭದಲ್ಲಿ ಕಬ್ಬು ಬೆಳೆಗಾರರಿಗೆ ಪಾಲು ನೀಡಲು ಆದೇಶ ಹೊರಡಿಸಿದೆ.

ಪ್ರಸ್ತುತ ಭಾರತದಲ್ಲಿ ಪೆಟ್ರೋಲ್​ನಲ್ಲಿ ಶೇ. 10ರಷ್ಟು ಎಥೆನಾಲ್ ಮಿಶ್ರಣ ಮಾಡಿ ಬಳಸಲಾಗುತ್ತಿದೆ. ಇದರಿಂದ ವಾರ್ಷಿಕವಾಗಿ 40,000 ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ. ಬರುವ ಏಪ್ರಿಲ್​ನಿಂದ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಶೇ. 20ಕ್ಕೆ ಏರಿಸಲಾಗುತ್ತಿದ್ದು, 2025ರ ಹೊತ್ತಿಗೆ ಶೇ. 25ಕ್ಕೆ ಹೆಚಿ ್ಚ ಸುವ ಗುರಿಯಿದೆ. ಎಥೆನಾಲ್ ನವೀಕರಿಸಬಹುದಾದ ಇಂಧನ. ಪ್ರಸ್ತುತ ಬೆಲೆಯೂ ಪೆಟ್ರೋಲ್​ಗಿಂತ ಕಡಿಮೆಯಾಗಿದ್ದು, ಲೀಟರ್​ಗೆ ಅಂದಾಜು 65 ರೂ. ಇದೆ. ಎಥೆನಾಲ್​ನಂತಹ ಉಪಉತ್ಪನ್ನ ಮೂಲಕವೇ ಸಕ್ಕರೆ ರಂಗ ಪ್ರಗತಿ ಸಾಧಿಸಿರುವುದು ಇತರ ಕೃಷಿ ಉತ್ಪನ್ನಗಳಿಗೂ ಪ್ರೇರಣೆಯಾಗಬೇಕಿದೆ. ಜೋಳದಿಂದಲೂ ಎಥೆನಾಲ್ ತಯಾರಿಸಬಹುದಾಗಿದೆ. ಔಷಧ ತಯಾರಿಕೆಯಲ್ಲಿ ಕೃಷಿ ಉತ್ಪನ್ನ ಬಳಕೆಗೆ ಅವಕಾಶವಿದೆ. ಇಂತಹ ಸಾಧ್ಯತೆಗಳತ್ತ ಸರ್ಕಾರಗಳು ಹಾಗೂ ಆಯಾ ಉದ್ಯಮದವರು ಗಮನ ನೀಡುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net