

ಕರೊನಾ ಸೋಂಕು ಮತ್ತು ಆ ಸಂಬಂಧಿತ ಲಾಕ್ಡೌನ್ ನೀಡಿದ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಈಗ ಅಕಾಲಿಕ ಮಳೆ, ಪ್ರವಾಹಸದೃಶ ಸ್ಥಿತಿ ಸೃಷ್ಟಿಯಾಗಿದೆ. ಈ ಸರಣಿ ಸಂಕಷ್ಟಗಳು ಶ್ರಮಜೀವಿಗಳ ಬದುಕಿಗೆ ದೊಡ್ಡ ಆಘಾತ ನೀಡಿವೆ. ನಮ್ಮಲ್ಲಿ ಅದೆಷ್ಟೋ ಜನ ಸ್ವಾಭಿಮಾನದಿಂದ ಬದುಕಲು ಸಣ್ಣಪುಟ್ಟ ವ್ಯಾಪಾರದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಬೀದಿ ಬದಿ ವ್ಯಾಪಾರ ಆರ್ಥಿಕ ಚಟುವಟಿಕೆಗಳನ್ನೂ ತೀವ್ರಗೊಳಿಸುತ್ತದೆ. ಆದರೆ, ಕರೊನಾ ಸಂಕಟ, ಈಗಿನ ಮಳೆ ಸೃಷ್ಟಿಸಿರುವ ಅವಾಂತರದ ಪರಿಣಾಮ ರಸ್ತೆವ್ಯಾಪಾರಿಗಳು ದಿಕ್ಕುತೋಚದಂತಾಗಿದ್ದಾರೆ. ವಿಪರ್ಯಾಸವೆಂದರೆ, ಇವರಿಗಾಗಿ ಸರ್ಕಾರ ರೂಪಿಸಿದ್ದ ಯೋಜನೆಗಳು ಸರಿಯಾಗಿ ಜಾರಿಯಾಗಿಲ್ಲ. ನೈಜ ಫಲಾನುಭವಿಗಳೇ ವಂಚಿತರಾಗಿರುವುದು ಒಂದೆಡೆಯಾದರೆ, ಈ ವ್ಯಾಪಾರಿಗಳಿಗೆ 50 ಸಾವಿರ ರೂಪಾಯಿವರೆಗಿನ ಸಾಲಸೌಲಭ್ಯ ಕಲ್ಪಿಸುವ ಸರ್ಕಾರದ ‘ಬಡವರ ಬಂಧು’ ಯೋಜನೆ ನಿಂತುಹೋಗಿದೆ. ಪಿಎಂ ಸ್ವನಿಧಿ ಯೋಜನೆಯ ಲಾಭ ಸರಿಯಾಗಿ ಸಿಗುತ್ತಿಲ್ಲ. ಕರೊನಾ ಹೊತ್ತಲ್ಲಿ ಘೋಷಿಸಲಾದ ಪರಿಹಾರದ ಮೊತ್ತವೂ ಬಹುತೇಕ ಸಣ್ಣ ವ್ಯಾಪಾರಿಗಳಿಗೆ ತಲುಪಿಲ್ಲ. ಹೀಗಿರುವಾಗ ಸಮಸ್ಯೆಯನ್ನು ಬಗೆಹರಿಸುವವರು ಯಾರು, ಘೋಷಿಸಿದ ಯೋಜನೆಗಳು, ಸೌಲಭ್ಯಗಳು ಜಾರಿಯಾಗದಿದ್ದರೆ ನ್ಯಾಯ ಯಾರಿಗೆ ಕೇಳೋಣ? ಎಂಬ ಬೀದಿ ಬದಿ ವ್ಯಾಪಾರಿಗಳ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ.
ಕರ್ನಾಟಕದಲ್ಲಿ ಅಂದಾಜು ಐದು ಲಕ್ಷ, ಈ ಪೈಕಿ ಬೆಂಗಳೂರಿನಲ್ಲೇ ಮೂರೂವರೆ ಲಕ್ಷ ರಸ್ತೆವ್ಯಾಪಾರಿಗಳಿದ್ದಾರೆ. ಸೋಂಕಿನ ಭಯ, ಮಳೆಯ ಕಾರಣ ಜನರು ಖರೀದಿಗೆ ಹೊರಬರುತ್ತಿಲ್ಲ. ಆನ್ಲೈನ್ ವಹಿವಾಟು ಕೂಡ ಹೆಚ್ಚಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಮಳೆ-ಚಳಿಯಲ್ಲಿ ಕುಳಿತರೂ ವ್ಯಾಪಾರ ಇಲ್ಲದಂತಾಗಿದೆ. ಇವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ ಅಂತೇನಲ್ಲ. ಆದರೆ, ಎಷ್ಟೋ ಕಡೆ ಪೊಲೀಸರ ಕಿರುಕುಳ, ಸ್ಥಳೀಯ ಪುಢಾರಿಗಳಿಂದ ಹಣಕ್ಕಾಗಿ ಬೇಡಿಕೆ, ದುಬಾರಿ ಬಡ್ಡಿದರದ ಸಾಲ ಹೀಗೆ ಸರಣಿ ಸಂಕಷ್ಟಗಳಿಂದ ಇವರನ್ನು ಪಾರು ಮಾಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಬ್ಯಾಂಕುಗಳು ಇಂಥವರಿಗೆ ಸಾಲ ನೀಡುವುದಿಲ್ಲ, ಬಡ್ಡಿಕೋರರ ಕಿರುಕುಳ ತಪು್ಪವುದಿಲ್ಲ. ಇವರ ಕುಟುಂಬಗಳಿಗೆ ಆಹಾರಭದ್ರತೆಯೂ ಇಲ್ಲ, ವೈದ್ಯಕೀಯ ಸೌಲಭ್ಯಗಳೂ ಇಲ್ಲ.
ಹಲವು ಕ್ಷೇತ್ರಗಳ ಬೆಂಬಲಕ್ಕೆ ನಿಂತ ಸರ್ಕಾರ ಈ ಬಡಜನರ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದಾದರೂ ಏಕೆ ಎಂಬುದು ಅರ್ಥವಾಗದ ಸಂಗತಿ. ಅವರು ಕನಿಷ್ಠ ಘನತೆಯ ಬದುಕನ್ನಾದರೂ ಕಟ್ಟಿಕೊಳ್ಳಲು ನೆರವಾಗಬೇಕಿದೆ. ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಕಂಡು, ಸೂಕ್ತ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಿದೆ. ಶ್ರಮಜೀವಿಗಳ ಬೆವರುಹನಿಯ ಮೌಲ್ಯವನ್ನು ಅರಿಯಬೇಕಿದೆ. ಇಂಥ ಕಷ್ಟಕಾಲದಲ್ಲಿ ಇವರ ಬದುಕನ್ನು ಕಟ್ಟಿಕೊಡುವುದು ಸರ್ಕಾರದ ಆದ್ಯತೆಯಾಗಬೇಕು. ಸ್ಥಗಿತಗೊಂಡಿರುವ ಯೋಜನೆಗಳನ್ನು ಮತ್ತೆ ಆರಂಭಿಸುವ ಮೂಲಕ ರಸ್ತೆವ್ಯಾಪಾರಿಗಳಲ್ಲಿ ವಿಶ್ವಾಸ ತುಂಬುವ ಜತೆಗೆ, ಸಂಕಷ್ಟದಿಂದ ಹೊರಬರಲು ಹೊಸ ದಾರಿಗಳನ್ನು ಮಾಡಿಕೊಡಬೇಕು.