ಸಂಪಾದಕೀಯ | ಸ್ಪಷ್ಟಸಂದೇಶ ರವಾನೆ; ಕರ್ನಾಟಕ ತೋರಿದ ಒಗ್ಗಟ್ಟು ಶ್ಲಾಘನೀಯ

Editorial
Published on

ಕುಡಿಯುವ ನೀರಿನ ಉದ್ದೇಶಕ್ಕಾಗಿ ಕರ್ನಾಟಕ ನಿರ್ವಿುಸಲು ಹೊರಟಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ವಿಧಾನಸಭೆ ನಿರ್ಣಯ ಅಂಗೀಕರಿಸುವ ಮೂಲಕ, ವಿವಾದವನ್ನು ಜೀವಂತವಾಗಿ ಇರಿಸಲು ಯತ್ನಿಸಿದೆ. ಅಲ್ಲದೆ, ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡುತ್ತಿರುವುದು ಸ್ಪಷ್ಟವಾಗಿದೆ. ತಮಿಳುನಾಡಿನ ಈ ಕ್ಯಾತೆಯ ವಿರುದ್ಧ ಮಂಗಳವಾರ ಕರ್ನಾಟಕ ವಿಧಾನಸಭೆ ಒಗ್ಗಟ್ಟು ಪ್ರದರ್ಶಿಸಿ, ತಕ್ಕ ಪ್ರತ್ಯುತ್ತರ ನೀಡಿದೆ. ‘ರಾಜಕೀಯಕ್ಕಿಂತ ನಾಡಿನ ಜನರ ಹಿತ ಮುಖ್ಯ. ನಮ್ಮ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದ ವಿಷಯದಲ್ಲಿ ನಾವೆಲ್ಲ ಒಂದೇ’ ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಒಂದೇ ಸ್ವರದಲ್ಲಿ ಹೇಳುವ ಮೂಲಕ, ತಮಿಳುನಾಡಿಗೆ ಸ್ಪಷ್ಟಸಂದೇಶ ರವಾನಿಸಿದ್ದಾರೆ. ‘ಮೇಕೆದಾಟು ಯೋಜನೆ ಅನುಷ್ಠಾನ ಮಾಡಿಯೇ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ನಿರ್ಣಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೂರೂ ಪಕ್ಷದ ಪ್ರಮುಖ ನಾಯಕರು, ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲಿ ಇಂದು (ಬುಧವಾರ) ಖಂಡನಾ ನಿರ್ಣಯ ಕೈಗೊಳ್ಳಲಿದ್ದಾರೆ.

ಪ್ರಸಕ್ತ ಯೋಜನೆಗೆ ತಮಿಳುನಾಡಿನ ನೆಲ-ಜಲ ಯಾವುದೂ ಬಳಕೆಯಾಗುತ್ತಿಲ್ಲ. ಕರ್ನಾಟಕ ತನ್ನ ಪಾಲಿನ ನೀರಿನಲ್ಲಿ ಜಲಾಶಯ ನಿರ್ಮಾಣ ಮಾಡಲು ಮುಂದಾಗಿದೆ. ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಿದೆ. ಇಲ್ಲಿಯೂ, ರಾಜಕೀಯವನ್ನು ಬದಿಗಿರಿಸಿ, ಯೋಜನೆ ಅನುಷ್ಠಾನಕ್ಕೆ ಪೂರಕ ನಿರ್ಣಯ, ಕ್ರಮಗಳನ್ನು ಕೈಗೊಳ್ಳಬೇಕು. ಒಂದುವೇಳೆ, ಜಲವಿವಾದಗಳು ಕೋರ್ಟು ಮೆಟ್ಟಿಲು ಹತ್ತಿದರೆ ಬಗೆಹರಿಯಲು ದಶಕಗಳೇ ಬೇಕು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಮುಖ್ಯವಾಗಿ, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ನಷ್ಟವಿಲ್ಲ. ಆದರೂ, ಅದು ವಿರೋಧ, ಆಕ್ಷೇಪ ತೋರುತ್ತಿರುವುದು ಸೂಕ್ತವಲ್ಲ. ಇಂಥ ವಿವಾದಗಳು ರಾಜ್ಯ ರಾಜ್ಯಗಳ ನಡುವೆ ಸೌಹಾರ್ದದ ನೆಲೆಯಲ್ಲಿ ಇತ್ಯರ್ಥಗೊಳ್ಳಬೇಕು. ಗೊಂದಲ, ಅನುಮಾನಗಳಿದ್ದರೆ ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅದನ್ನು ಬಿಟ್ಟು ಸಂಘರ್ಷದ ಹಾದಿ ತುಳಿಯಬಾರದು. ಮೇಕೆದಾಟು ಯೋಜನೆ ವಿಷಯದಲ್ಲಿ ತಮಿಳುನಾಡು ಆ ವಿವೇಚನೆ ಪ್ರದರ್ಶಿಸಲಿ, ರಾಜ್ಯ ಸರ್ಕಾರ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇರಿಸಲಿ. ಇಂಥ ಜಲವಿವಾದಗಳನ್ನು ನಿಗದಿತ ಕಾಲಮಿತಿಯೊಳಗೆ ಬಗೆಹರಿಸಲು ಕೇಂದ್ರವು ಸೂಕ್ತ ವ್ಯವಸ್ಥೆ ರೂಪಿಸಬೇಕು. ಪಂಜಾಬ್-ಹರಿಯಾಣ, ಆಂಧ್ರಪ್ರದೇಶ-ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ನಡುವೆ ಜಲವಿವಾದಗಳಿವೆ. ಇವು ದೀರ್ಘಾವಧಿಯಾಗಿ ಮಾರ್ಪಟ್ಟರೆ ಕೃಷಿ, ನೀರಾವರಿ ಸೇರಿ ಹಲವು ರಂಗಗಳಿಗೆ ನಷ್ಟ. ಅದನ್ನು ತಪ್ಪಿಸಲು ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net