ಮಾದಕ ದ್ರವ್ಯ ಜಾಲದ ಕರಾಳತೆ; ಬೇರುಸಹಿತ ಕಿತ್ತೊಗೆಯಬೇಕು..

Editorial
Published on

ದುಶ್ಚಟಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಬಲವಾದ ಪೆಟ್ಟು ನೀಡುತ್ತವೆ. ಅದರಲ್ಲೂ ಯುವಸಮೂಹ ಮಾದಕ ದ್ರವ್ಯದ ಚಟಕ್ಕೆ ದಾಸರಾಗುತ್ತಿರುವುದು ತೀವ್ರ ಕಳವಳದ ವಿಚಾರ. ಕೆಲ ವರ್ಷಗಳ ಹಿಂದೆ ಅತಿ ಸಿರಿವಂತ ವರ್ಗದ ಕೆಲ ಯುವಕರು ಶೋಕಿಗಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ನಿದರ್ಶನಗಳು ಕಂಡುಬರುತ್ತಿದ್ದವು. ಈಗ ಪರಿಸ್ಥಿತಿ ಹಾಗಿಲ್ಲ. ಮಧ್ಯಮವರ್ಗದ, ಗ್ರಾಮೀಣ ಪ್ರದೇಶದ ಯುವಕರು ಕೂಡ ಈ ಚಟಕ್ಕೆ ಗುರಿಯಾಗುತ್ತಿದ್ದಾರೆ. ಮಾದಕ ದ್ರವ್ಯದ ಸುಲಭ ಲಭ್ಯತೆಯೇ ಇದಕ್ಕೆ ಕಾರಣ. ಈ ಸಾಮಾಜಿಕ ಪಿಡುಗಿನ ವಿರುದ್ಧ ಹಲವು ಆಯಾಮಗಳಲ್ಲಿ ಹೋರಾಟ ನಡೆಯುತ್ತಿದೆ. ಅದರಲ್ಲೂ, ತನಿಖಾ ಸಂಸ್ಥೆಗಳು, ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿಯೇ ಡ್ರಗ್ಸ್ ಹಾವಳಿ ವಿರುದ್ಧ ಹೋರಾಡುತ್ತಿವೆ. ಎನ್​ಸಿಬಿ ಕಳೆದ 12 ತಿಂಗಳಲ್ಲಿ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿರುವುದು ಇದಕ್ಕೆ ನಿದರ್ಶನ. ಮಾತ್ರವಲ್ಲ, ಈ ಕರಾಳ ದಂಧೆಯ ಹಲವು ಮುಖಗಳನ್ನು ಪತ್ತೆ ಹಚ್ಚುವಲ್ಲಿಯೂ ತನಿಖಾ ಸಂಸ್ಥೆಗಳು ಯಶಸ್ವಿಯಾಗಿವೆ.

ಬೆಂಗಳೂರು ಮಾರ್ಗವಾಗಿ ಕತಾರ್ ಹಾಗೂ ಶ್ರೀಲಂಕಾ ಸೇರಿ ಇನ್ನಿತರ ದೇಶಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಎನ್​ಸಿಬಿ ಪತ್ತೆ ಹಚ್ಚಿದೆ. ಮಾದಕ ದ್ರವ್ಯದ ದಂಧೆ ವ್ಯಾಪಕವಾಗಿ ಆವರಿಸಿಕೊಂಡಿರುವುದಕ್ಕೆ ಇದು ಸಾಕ್ಷಿ. ಮತ್ತೊಂದು ಬೆಳವಣಿಗೆಯಲ್ಲಿ ತಾಲಿಬಾನಿಗಳ ಡ್ರಗ್ಸ್ ದಂಧೆಯೂ ಬಯಲಾಗಿದೆ. ಅಫ್ಘಾನಿಸ್ತಾನದಿಂದ ಆಸ್ಟ್ರೇಲಿಯಾ ಸೇರಿ ಹಲವು ದೇಶಗಳಿಗೆ ಮಾದಕ ದ್ರವ್ಯ ಕಳ್ಳಸಾಗಾಟ ಮಾಡಲು ತಾಲಿಬಾನಿಗಳು ಬೆಂಗಳೂರು, ಹೈದರಾಬಾದ್ ಸಹಿತ ಭಾರತದ ಹಲವು ನಗರಗಳನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇತ್ತೀಚಿನ ಹಲವು ಕಳ್ಳಸಾಗಣೆ ಪ್ರಕರಣಗಳ ಬಗ್ಗೆ ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್​ಐ) ನಡೆಸಿದ ತನಿಖೆ ವೇಳೆ ತಾಲಿಬಾನ್ ಸಂಘಟನೆಯ ಕುಕೃತ್ಯ ಬಯಲಾಗಿದೆ. ಸಮೃದ್ಧತೆಗೆ ಹೆಸರಾಗಿದ್ದ ಪಂಜಾಬ್ ರಾಜ್ಯ ಈಗ ಡ್ರಗ್ಸ್​ನ ಹಾವಳಿಯಿಂದ ತತ್ತರಿಸಿದ್ದು, ಅದರಿಂದ ಹೊರಬರಲು ನಾನಾ ಮಾರ್ಗಗಳನ್ನು ಪ್ರಯೋಗಿಸುತ್ತಿದೆ. ಅಲ್ಲಿನ ಯುವಕರು ಈ ದುಶ್ಚಟದಿಂದ ನೈತಿಕವಾಗಿ, ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಪಾಕಿಸ್ತಾನದಿಂದ ಪಂಜಾಬ್, ಜಮ್ಮು-ಕಾಶ್ಮೀರ ಸೇರಿ ಹಲವೆಡೆ ಮಾದಕ ದ್ರವ್ಯ ಕಳ್ಳಸಾಗಣೆ ಮೂಲಕ ಬಂದು ತಲುಪುತ್ತಿದೆ. ಈಗ ತಾಲಿಬಾನಿಗಳ ಜಾಲ ಬಯಲಾಗಿದ್ದು, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿಕೊಂಡಿರುವುದು ಆತಂಕಕಾರಿ ವಿಚಾರ.

‘ಈಗ ಪತ್ತೆಯಾಗಿರುವುದು ಸಾಗರದಲ್ಲಿನ ಒಂದು ಹನಿಯಷ್ಟೇ. ಇನ್ನೂ ಅಪಾರ ಪ್ರಮಾಣದ ದಂಧೆ ನಡೆದಿದೆ’ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಮಾದಕ ದ್ರವ್ಯ ಕಳ್ಳಸಾಗಣೆ ತಡೆಯಲು ಮತ್ತು ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿರುವ ಇಂಥ ಜಾಲಗಳನ್ನು ಸದೆಬಡಿಯಲು ಪೊಲೀಸ್ ವಿಭಾಗ ಮತ್ತು ತನಿಖಾ ಸಂಸ್ಥೆಗಳು ವೃತ್ತಿಪರತೆ, ದಕ್ಷತೆಯಿಂದ ಕೆಲಸ ಮಾಡುತ್ತಿವೆ. ಆದರೆ, ಈ ಅಂತಾರಾಷ್ಟ್ರೀಯ ಮಟ್ಟದ ಜಾಲಗಳನ್ನು ಬೇರುಸಮೇತ ಕಿತ್ತೊಗೆದಾಗ ಮಾತ್ರ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಸಾಧ್ಯ. ಇಂಥ ಚಟಗಳಿಂದ ದೂರವಿರುವಂತೆ ಯುವಸಮೂಹದಲ್ಲಿ ಮತ್ತಷ್ಟು ಅರಿವು ತುಂಬುವ ನಿಟ್ಟಿನಲ್ಲೂ ಜಾಗೃತಿ ಅಭಿಯಾನಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net