ಸಂಪಾದಕೀಯ | ಕಟ್ಟುನಿಟ್ಟು ಕಾಯ್ದೆ ಅಗತ್ಯ; ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಅಂಕುಶ

Editorial
Published on

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಕಾನೂನುಬಾಹಿರ ಹಾಗೂ ಪ್ರಚೋದನಾತ್ಮಕ ವಿಷಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳಾದ ಟ್ವೀಟರ್, ಫೇಸ್​ಬುಕ್, ಗೂಗಲ್, ಯುಟ್ಯೂಬ್ ಮುಂತಾದವುಗಳಲ್ಲಿ ಪ್ರಕಟವಾಗುವ ಪ್ರಚೋದನಾತ್ಮಕ ವಿಷಯಗಳನ್ನು ಸರ್ಕಾರದ ತಪಾಸಣೆಗೆ ಒಳಪಡಿಸುವುದು ಈ ಕಾಯ್ದೆ ತಿದ್ದುಪಡಿಯಿಂದ ಕಡ್ಡಾಯವಾಗಲಿದೆ. ಮೂರನೇ ಪಕ್ಷವಾಗಿರುವ ಕಾರಣ, ಇಂತಹ ಅಕ್ರಮ ಹಾಗೂ ಪ್ರಚೋದನಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸದ್ಯ ವಿನಾಯಿತಿ ಸಿಗುತ್ತಿದೆ. ಆದರೆ, ಪ್ರಸ್ತಾವಿತ ತಿದ್ದುಪಡಿ ಜಾರಿಗೊಂಡರೆ ಈ ವಿನಾಯಿತಿ ಲಭ್ಯವಾಗದು. ಅಂದರೆ, ವಿವಾದಾತ್ಮಕ ವಿಷಯಗಳು ಪ್ರಕಟವಾದರೆ ಸೋಷಿಯಲ್ ಮೀಡಿಯಾ ಸಂಸ್ಥೆಯನ್ನು ಅದಕ್ಕೆ ಹೊಣೆಗಾರನಾಗಿ ಮಾಡುವ ಸೂಚನೆಗಳು ಐಟಿ ಕಾಯ್ದೆ ತಿದ್ದುಪಡಿಯಲ್ಲಿವೆ. ಇದಲ್ಲದೆ, ವಿವಿಧ ರೀತಿಯ ಉಲ್ಲಂಘನೆಗಳ ಕಾರಣಕ್ಕಾಗಿ ಬಳಕೆದಾರರ ಖಾತೆಯನ್ನು ಅಮಾನತು ಮಾಡುವ, ಕಪು್ಪಪಟ್ಟಿಗೆ ಸೇರಿಸುವ ಹಾಗೂ ತೆಗೆದುಹಾಕುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಕಂಪನಿಗಳಿಗಿರುವ ಅಧಿಕಾರವನ್ನು ಕೂಡ ಈ ತಿದ್ದುಪಡಿಯು ರದ್ದುಗೊಳಿಸುವ ಸಾಧ್ಯತೆಯೂ ಇದೆ.

ಜೂನ್ ತಿಂಗಳಲ್ಲಿ ಹೊಸ ಐಟಿ ನಿಯಮದ ಕರಡು ಸಿದ್ಧವಾಗಿದ್ದು, ಸರ್ಕಾರದ ಒಪ್ಪಿಗೆಯೊಂದೇ ಬಾಕಿ ಇದೆ. ಸಾಮಾಜಿಕ ಮಾಧ್ಯಮಗಳ ಮುಕ್ತ ವೇದಿಕೆಗಳಲ್ಲಿ ಯಾವುದೇ ವಿಷಯದ ಬಗೆಗೆ ಮನತೋಚಿದಂತೆ, ಲಂಗುಲಗಾಮಿಲ್ಲದೆ ಪ್ರಕಟ ಮಾಡಬಹುದು ಎಂಬಂತಹ ಪರಿಸ್ಥಿತಿ ಇದೆ. ವಿಶ್ವಾಸಾರ್ಹತೆ ನಿರೀಕ್ಷಿಸುವುದಂತೂ ಕಷ್ಟಕರ. ಇಲ್ಲಿ ಪ್ರಕಟಗೊಂಡ ಅನೇಕ ವಿಷಯಗಳು ವಿವಾದಕ್ಕೆ ಕಾರಣವಾಗಿ ಹಿಂಸಾಚಾರ ಭುಗಿಲೆದ್ದ ನಿದರ್ಶನಗಳಿವೆ; ಧಾರ್ವಿುಕ ವಿಷಯಗಳಿಗೆ ಸಂಬಂಧಿಸಿದಂತೆ ಕೊಲೆಯಲ್ಲೂ ಪರ್ಯವಸಾನವಾದ ಪ್ರಕರಣಗಳು ಕೂಡ ಇತ್ತೀಚೆಗೆ ಜರುಗಿವೆ. ಇಂಟರ್​ನೆಟ್ ಸಂಪರ್ಕವು ದೇಶದ ಮೂಲೆ ಮೂಲೆಗೂ ಪಸರಿಸುತ್ತಿದೆ. ಸದ್ಯ ಇಂಟರ್​ನೆಟ್ ಬಳಕೆದಾರರ ಸಂಖ್ಯೆ 60 ಕೋಟಿಗೂ ಅಧಿಕವಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರು 46 ಕೋಟಿಗೂ ಅಧಿಕ ಎಂದು ಅಂಕಿ-ಅಂಶಗಳು ಹೇಳುತ್ತವೆ. ಇಷ್ಟೊಂದು ಬೃಹತ್ ಬಳಕೆದಾರರ ಮೇಲೆ ನಿಗಾ ವಹಿಸುವುದು ವಾಸ್ತವದಲ್ಲಿ ಬಹುತೇಕ ಅಸಾಧ್ಯ.

ಆದರೆ, ವಿವಾದ ತಲೆದೋರಿದಾಗ, ಪ್ರಚೋದನಾತ್ಮಕ ಸಂಗತಿಗಳು ಬೆಳಕಿಗೆ ಬಂದಾಗ, ಅಂತಹ ಅಂಶಗಳನ್ನು ತೆಗೆದುಹಾಕಲು ಸರ್ಕಾರ ಸೂಚನೆ ನೀಡಿದಾಗಲೂ ಸೋಷಿಯಲ್ ಮೀಡಿಯಾ ಕಂಪನಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವುದು ಇತ್ತೀಚಿನ ಕೆಲ ಪ್ರಕರಣಗಳಲ್ಲಿ ವ್ಯಕ್ತವಾಗಿದೆ. ಪಕ್ಷಪಾತ ಧೋರಣೆ ಇರುವ ವಿಷಯಗಳನ್ನು ತೆಗೆದುಹಾಕಬೇಕೆಂಬ ಸರ್ಕಾರದ ಸೂಚನೆಗಳನ್ನೂ ಅವು ಪಾಲಿಸಿಲ್ಲ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ, ಐಟಿ ಕಾಯ್ದೆಯ 79ನೇ ಸೆಕ್ಷನ್ ಪ್ರಕಾರ, ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ವಿಷಯಗಳಿಗೆ ಸಂಬಂಧಿಸಿದಂತೆ ಕಂಪನಿಗಳು ಹೊಂದಿರುವ ರಕ್ಷಣೆಯನ್ನು ಸಡಿಲಗೊಳಿಸುವ ಮತ್ತು ಸಾಮಾಜಿಕವಾಗಿ ಕೆಡಕುಂಟು ಮಾಡುವ ವಿಷಯಗಳನ್ನು ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸುವ ಕಾನೂನು ರಚಿಸಲು ಸರ್ಕಾರ ಹೆಜ್ಜೆ ಇಟ್ಟಿರುವುದು ಸೂಕ್ತವಾಗಿದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಯೂ ಸರ್ಕಾರದ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net