

ಕರೊನಾ ನಂತರದ ದಿನಗಳು ಆರ್ಥಿಕ ರಂಗದಲ್ಲಿ ಭರವಸೆ ಮೂಡಿಸಿರುವುದು ನಿಜಕ್ಕೂ ಮಹತ್ವದ ಬೆಳವಣಿಗೆ. ಏಕೆಂದರೆ, ಲಾಕ್ಡೌನ್ ಅವಧಿಯಲ್ಲಿ ಆರ್ಥಿಕತೆ ನೆಲಕಚ್ಚಿದ ಪರಿಯನ್ನು, ವಿವಿಧ ಕ್ಷೇತ್ರಗಳು ಅನುಭವಿಸಿದ ನಷ್ಟವನ್ನು ನೋಡಿದಾಗ ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ಎಷ್ಟು ವರ್ಷಗಳು ಬೇಕಾಗಬಹುದೋ ಎಂಬ ಆತಂಕದ ಪ್ರಶ್ನೆ ಮೂಡಿತ್ತು. ಹಲವು ತಿಂಗಳುಗಳ ಕಾಲ ವ್ಯಾಪಾರ-ವಹಿವಾಟು ಸ್ತಬ್ಧಗೊಂಡಿದ್ದರಿಂದ ಆದ ನಷ್ಟ ಅಷ್ಟಿಷ್ಟಲ್ಲ. ಆದರೆ, ಲಾಕ್ಡೌನ್ ತೆರವಿನ ಬಳಿಕ ಈ ಕಾಮೋಡ ಕರಗುತ್ತಿದ್ದು, ಬಹುತೇಕ ಎಲ್ಲ ವಲಯಗಳಲ್ಲೂ ಅರ್ಥಿಕ ಚೇತರಿಕೆ ಕಾಣಿಸಿಕೊಂಡಿದೆ. ಈ ಉತ್ಸಾಹ ಷೇರುಪೇಟೆಯಲ್ಲೂ ಕಾಣಿಸಿಕೊಂಡಿರುವುದು ಗಮನಾರ್ಹ. ಇಂಥ ಮಹಾಮಾರಿ ಆವರಿಸಿಕೊಂಡ ಸಂದರ್ಭಗಳಲ್ಲಿ ಅಥವಾ ಇತರ ಕಠಿಣ ಬಿಕ್ಕಟ್ಟುಗಳ ಸಂದರ್ಭದಲ್ಲಿ ಆರ್ಥಿಕತೆ ಒಮ್ಮೆ ಇಳಿಕೆ ಕಂಡು, ಮತ್ತೆ ಏರಿಕೆಯತ್ತ ಸಾಗುತ್ತದೆ. ಹಾಗಾಗಿ, ತುಂಬ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವಿಶ್ವಾಸ ಮೂಡಿಸಿತ್ತು. ಈಗಿನ ಬೆಳವಣಿಗೆಗಳು ಆರ್ಬಿಐ ಅಂದಾಜಿಗೆ ಪುಷ್ಟಿ ಕೊಡುವಂತಿವೆ.
ಗುರುವಾರ ಭಾರತೀಯ ಷೇರುಪೇಟೆ ಹೊಸ ದಾಖಲೆ ಸೃಷ್ಟಿಸಿತು. ಸೆನ್ಸೆಕ್ಸ್ 50 ಸಾವಿರ ಗಡಿ ಮುಟ್ಟಿದ್ದು, ಸಾರ್ವಕಾಲಿಕ ಎತ್ತರ ದಾಖಲಿಸಿದೆ. ವಹಿವಾಟಿನ ಅಂತ್ಯದ ವೇಳೆಗೆ 167 ಅಂಕ ಕುಸಿತ ಕಂಡ ಸೆನ್ಸೆಕ್ಸ್ 49,624ರಲ್ಲಿ ಸ್ಥಿರಗೊಂಡಿತು. ನಿಫ್ಟಿ 14,644.70 ಅಂಶಗಳಲ್ಲಿ ವಹಿವಾಟು ಮುಗಿಸಿತು. ಅಮೆರಿಕ ಅಧ್ಯಕ್ಷರಾಗಿ ಬುಧವಾರ ಜೋ ಬೈಡೆನ್ ಪ್ರಮಾಣ ವಚನ ಸ್ವೀಕರಿಸಿದ್ದು, ಅವರು ಆರ್ಥಿಕತೆಗೆ ಹೆಚ್ಚು ಉತ್ತೇಜನ ನೀಡುವ ಸಾಧ್ಯತೆ ಇರುವ ಕಾರಣ ವಿಶ್ವದ ಬಹುತೇಕ ಮಾರುಕಟ್ಟೆಗಳಲ್ಲಿ ಏರಿಕೆ ಕಂಡುಬಂದಿದೆ. ಅದರ ಪರಿಣಾಮ ಇಲ್ಲೂ ಆಗಿದೆ. ಅಲ್ಲದೆ, ಇತ್ತೀಚೆಗೆ ಬಿಡುಗಡೆಯಾಗಿರುವ ಭಾರತದ ಪ್ರಮುಖ ಕಂಪನಿಗಳ ತ್ರೖೆಮಾಸಿಕ ವರದಿಯಲ್ಲಿ ಉತ್ತಮ ಲಾಭ ಕಂಡುಬಂದಿದ್ದು, ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ. ವಿದೇಶಿ ಹೂಡಿಕೆದಾರರು ನಿರಂತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಣ ಹೂಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಕೆಲವೇ ದಿನಗಳಲ್ಲಿ (ಫೆಬ್ರವರಿ 1) ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಆರ್ಥಿಕತೆ ಮೇಲೆತ್ತಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳು ಷೇರುಪೇಟೆಯ ಉತ್ಸಾಹ ಹೆಚ್ಚಿಸಿವೆ.
ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ಉತ್ತಮವಾಗಿ ಇರಲಿದ್ದು, ಹೂಡಿಕೆಯೂ ಸಾಕಷ್ಟು ಪ್ರಮಾಣದಲ್ಲಿ ಹರಿದುಬರಲಿದೆ. ಬಜೆಟ್ನ ಘೋಷಣೆಗಳು ಕೂಡ ಷೇರುಪೇಟೆಯನ್ನು ಪ್ರಭಾವಿಸಲಿವೆ. ಆದರೆ, ಸೆನ್ಸೆಕ್ಸ್ ಏರಿಕೆಯಿಂದ ಇಡೀ ಆರ್ಥಿಕತೆ ಎದುರುಗಿನ ಸವಾಲು ಕೊನೆಗೊಂಡಿದೆ ಎಂದರ್ಥವಲ್ಲ. ಕರೊನಾ ಕಾರಣದಿಂದ ನೆಲಕಚ್ಚಿದ ಸಾಕಷ್ಟು ವಲಯಗಳು ಇನ್ನೂ ಚೇತರಿಸಿಕೊಳ್ಳಬೇಕಿದೆ. ಆರ್ಥಿಕ ಬೆಳವಣಿಗೆಯ ಲಾಭ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಬೇಕಿದೆ. ಆ ನಿಟ್ಟಿನಲ್ಲಿ ಬೆಲೆಏರಿಕೆಗೆ ಆ ಮೂಲಕ ಹಣದುಬ್ಬಕ್ಕೆ ಕಡಿವಾಣ ಹಾಕಬೇಕಿದೆ. ಒಟ್ಟಾರೆ, ಮುಂದಿನ ದಿನಗಳು ನಿರೀಕ್ಷೆ ಮೂಡಿಸಿದ್ದು, ಆರ್ಥಿಕತೆ ಏರಗತಿಯನ್ನು ಕಾಯ್ದುಕೊಳ್ಳಲಿ.