

ಕೃಷಿಕ್ಷೇತ್ರ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗೊತ್ತಿರುವಂಥದ್ದೇ. ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದು, ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಕೊರತೆ, ಆಗಾಗ ಕಾಡುವ ಪ್ರಾಕೃತಿಕ ವಿಕೋಪಗಳು, ಹೀಗೆ ಸರಣಿ ಸಂಕಷ್ಟಗಳ ಪರಿಣಾಮ ಹೊಸಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿದೆ. ಸಾಂಪ್ರದಾಯಿಕ ಕೃಷಿ ವಿಧಾನ ಮಣ್ಣಿನ ಫಲವತ್ತತೆಗೆ ಗಮನ ನೀಡುತ್ತಿತ್ತು. ಆದರೆ, ಇಳುವರಿ ಹೆಚ್ಚಾಗಬೇಕು ಎಂಬ ಧಾವಂತದಲ್ಲಿ ಕಳೆದ ಕೆಲ ದಶಕಗಳಲ್ಲಿ ರಾಸಾಯನಿಕಗಳ ಬಳಕೆ ಮೀತಿಮೀರಿದೆ. ಈ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುವುದು ಅಪಾಯಕಾರಿ ಎಂದು ಆಗಾಗ ಕೃಷಿತಜ್ಞರು ಎಚ್ಚರಿಕೆ ನೀಡುತ್ತ ಬಂದಿದ್ದರೂ, ಆ ಕಡೆ ಜಾಣಕಿವುಡು ತೋರಲಾಯಿತು. ರೈತರ ಆರೋಗ್ಯದ ಮೇಲೆ, ಜನಸಾಮಾನ್ಯರ ಆರೋಗ್ಯದ ಮೇಲೆ ಇದರಿಂದ ದುಷ್ಪರಿಣಾಮಗಳು ಕಾಣಿಸಿಕೊಂಡಾಗ ಸಾವಯವ ಕೃಷಿ ಮಾದರಿಯತ್ತ ಒಲವು ಬೆಳೆಯಿತು. ಆದರೆ, ಈ ವಿಧಾನದಲ್ಲಿ ಇಳುವರಿ ಕಡಿಮೆ, ಬೆಳೆ ಕೈಗೆ ಬರಲು ಹೆಚ್ಚು ದಿನ ಕಾಯಬೇಕು ಎಂಬೆಲ್ಲ ಸಂಗತಿಗಳು ಚರ್ಚೆಗೆ ಬಂದು, ರಾಸಾಯನಿಕಗಳ ಬಳಕೆಗೆ ಕಡಿವಾಣ ಇಲ್ಲದಂತಾಯಿತು.
ಭೂಮಿಯ ಸಾರವನ್ನೇ ಕಸಿದುಕೊಂಡರೆ ಪರಿಸ್ಥಿತಿ ಎಷ್ಟು ಘೋರವಾಗುತ್ತದೆ ಎಂಬುದಕ್ಕೆ ಸದ್ಯದ ವಿದ್ಯಮಾನಗಳು ಸಾಕ್ಷಿ. ರಾಜ್ಯದಲ್ಲಿ ಒಂದು ಲಕ್ಷ ಎಕರೆಗೂ ಅಧಿಕ ಭೂಮಿ ಬರಡಾಗಿದ್ದು, ಈ ಪ್ರಮಾಣ ಕೋಲಾರದಲ್ಲಿ ಅಧಿಕ. ನಂತರದ ಸ್ಥಾನದಲ್ಲಿ ಬಳ್ಳಾರಿ, ರಾಯಚೂರು, ದಾವಣಗೆರೆ, ಬೆಳಗಾವಿ ಇವೆ. ನೀರಾವರಿ ಪ್ರದೇಶ, ವಾಣಿಜ್ಯ ಬೆಳೆ ಹೆಚ್ಚು ಬೆಳೆಯುವ ಕೆಲವು ಜಿಲ್ಲೆಗಳಲ್ಲಿ ಬೆಳೆವಾರು ಶಿಫಾರಸು ಪ್ರಮಾಣ ಮೀರಿ ಕ್ರಿಮಿನಾಶಕ, ರಸಗೊಬ್ಬರ ಬಳಕೆಯಿಂದ ಜಮೀನು ಬರಡಾಗಿದೆ. ಬೆಂಗಳೂರಿನಲ್ಲಿರುವ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಕೃಷಿ ಇಲಾಖೆ ಈ ಮಾಹಿತಿ ಪಡೆದುಕೊಂಡಿದೆ. ಈ ಪ್ರಮಾಣದಲ್ಲಿ ಭೂಮಿ ಬರಡಾದರೆ ಕೃಷಿ ಮತ್ತೊಂದು ಆಪತ್ತನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ತಜ್ಞರು.
ಅಧ್ಯಯನ ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಇದಕ್ಕೆ ಕಾರಣ, ರಾಸಾಯನಿಕಯುಕ್ತ ಆಹಾರಪದಾರ್ಥಗಳ ಸೇವನೆ. ಕ್ಯಾನ್ಸರ್ ಮಾತ್ರವಲ್ಲ ಇತರ ಕಾಯಿಲೆಗಳೂ ಹರಡುತ್ತಿವೆ. ಈ ನಡುವೆ ಸಾವಯವ ಮತ್ತು ನೈಸರ್ಗಿಕ ಕೃಷಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಮಾಧಾನಕರ ಸಂಗತಿ. 2021ರ ಅಂತ್ಯಕ್ಕೆ ಸಾವಯವ ಕೃಷಿ ಐದು ಲಕ್ಷ ಎಕರೆಗೆ ವಿಸ್ತರಣೆಯಾಗಿದೆ. ಆದರೆ, ಮತ್ತೊಂದೆಡೆ, ರಾಸಾಯನಿಕಗಳ ಬಳಕೆಯೂ ತಗ್ಗುತ್ತಿಲ್ಲ ಎಂಬುದು ವಿಪರ್ಯಾಸ. ಕೃಷಿ ಜಮೀನಿಗೆ ಸಾವಯವ ಅಂಶಗಳನ್ನು ಹೆಚ್ಚೆಚ್ಚು ಸೇರಿಸಲು, ರಾಸಾಯನಿಕಮುಕ್ತ ಕೃಷಿಗೆ ಸಂಕಲ್ಪ ತೊಡಲು ಇದು ಸಕಾಲ. ರೈತರೂ, ಜನಸಾಮಾನ್ಯರೂ ಎಚ್ಚೆತ್ತುಕೊಳ್ಳಬೇಕಿದೆ. ಭೂಮಿ ಬರಡಾಗುವ ಪ್ರಮಾಣ ಇದೇ ಮಾದರಿಯಲ್ಲಿ ಮುಂದುವರಿದರೆ ಹಲವು ಆಯಾಮದ ಸಂಕಷ್ಟಗಳು ಎದುರಾಗುತ್ತವೆ. ಕೃಷಿಯಲ್ಲಿ ಹೊಸ ಚಿಂತನೆ, ಹೊಸ ವಿಧಾನ ಅನುಷ್ಠಾನಕ್ಕೆ ತರಲು, ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳು ನಡೆಯಬೇಕು.