

ಇಂದು ಎಂಟನೇ ಅಂತಾರಾಷ್ಟ್ರಿಯ ಯೋಗ ದಿನ. ಭಾರತದ ಪ್ರಾಚೀನ ಪರಂಪರೆ ಹಾಗೂ ಜೀವನಶೈಲಿಗೆ ಜಗತ್ತಿನಾದ್ಯಂತ ದೊರೆತಿರುವ ಮಾನ್ಯತೆ ಹಾಗೂ ಗೌರವವನ್ನು ಸಂಭ್ರಮಿಸುವ ದಿನ. 2014ರ ಸೆಪ್ಟೆಂಬರ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾಪ ಮುಂದಿಟ್ಟರು. ಇದಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿತು. 2015ರ ಜೂನ್ 21ರಂದು ಪ್ರಥಮ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಯಿತು.
ಯೋಗವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ದೈಹಿಕ- ಮಾನಸಿಕ ಆರೋಗ್ಯದ ಒಂದು ಅದ್ಭುತ ಕ್ರಮ. ವೇದ ಸಾಹಿತ್ಯದಲ್ಲಿ, ಪೌರಾಣಿಕ ಕಥೆಗಳಲ್ಲಿ, ಭಾರತೀಯ ಧರ್ಮಗ್ರಂಥಗಳಲ್ಲಿ ಯೋಗದ ಉಲ್ಲೇಖವಿದೆ. ಸಹಸ್ರಾರು ವರ್ಷಗಳಿಂದ ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸವನ್ನು ಜೀವನಶೈಲಿಯಾಗಿ ರೂಪಿಸಿಕೊಂಡ ವಿಶಿಷ್ಟ ಇತಿಹಾಸವಿದೆ. ಯೋಗದ ವಿವಿಧ ಆಸನಗಳನ್ನು ದೇಹದ ಒಂದು ಅಥವಾ ಹೆಚ್ಚಿನ ಭಾಗಗಳಿಗೆ ವ್ಯಾಯಾಮ ಆಗುವ ರೀತಿಯಲ್ಲಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಯೋಗವನ್ನು ಸರಿಯಾದ ರೀತಿಯಲ್ಲಿ ಮತ್ತು ನಿರ್ದಿಷ್ಟ ಅನುಕ್ರಮದಲ್ಲಿ ಅಭ್ಯಸಿಸಬೇಕಾಗುತ್ತದೆ. ಹೀಗಾಗಿ, ಪರಿಣತ ಗುರುಗಳ, ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದು ಸೂಕ್ತ. ಭಾರತದ ಯೋಗ ಗುರುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇದ್ದು, ವಿದೇಶಗಳಲ್ಲಿ ಶಿಕ್ಷಕರಾಗಿ ಸಾಕಷ್ಟು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಪ್ರವಾಸೋದ್ಯಮ ಬೆಳಗವಣಿಗೂ ಯೋಗ ಕೊಡುಗೆ ನೀಡುತ್ತಿದೆ. ರೆಸಾರ್ಟ್, ಪಂಚತಾರಾ ಹೋಟೆಲ್ಗಳಲ್ಲಿ ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇದು ವಿದೇಶಿ ಪ್ರವಾಸಿಗರನ್ನು ಸೆಳೆಯಲು ಅನುಕೂಲಕರವಾಗಿ ಪರಿಣಮಿಸಿದೆ. ಭಾರತದ ಸರ್ಕಾರದ ಆಯುಷ್ ಇಲಾಖೆಯು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಯಾವ ರೀತಿಯ ಯೋಗಾಸನಗಳನ್ನು ಮಾಡಬೇಕೆಂಬುದನ್ನು ವಿವರಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಗಮನಾರ್ಹ.
ಹಿಂದು ಪರಂಪರೆಯಲ್ಲಿ ವಿಕಸಿತಗೊಂಡಿದ್ದರೂ ಯೋಗವು ಯಾವುದೇ ಧರ್ಮಕ್ಕೆ ಸೀಮಿತಗೊಳ್ಳದೆ ಜಗತ್ತಿನಾದ್ಯಂತ ಮಾನ್ಯತೆ ಪಡೆದ ಆರೋಗ್ಯಕಾರಿ ಜೀವನ ಕ್ರಮವಾಗಿದೆ. ಭಾರತದಲ್ಲಿ ದೊಡ್ಡ ಸಂಖ್ಯೆಯ ಜನರು ಆರೋಗ್ಯಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತವು ಜಗತ್ತಿನ ಮಧುಮೇಹ ರಾಜಧಾನಿಯಾಗಿದೆ. ವಿಶ್ವದಲ್ಲೇ ಅತಿಹೆಚ್ಚು ಕ್ಷಯ ರೋಗಿಗಳು ಇಲ್ಲೇ ಇದ್ದಾರೆ. ಆರೋಗ್ಯಪೂರ್ಣ, ಒತ್ತಡಮುಕ್ತ ಜೀವನ ಸಾಗಿಸುವ ನಿಟ್ಟಿನಲ್ಲಿ ಯೋಗಾಭ್ಯಾಸವು ನೆರವಾಗಬಲ್ಲದು. 71 ವರ್ಷ ವಯಸ್ಸಿನ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಯೋಗದ ರಾಯಭಾರಿಯಾಗಿ ರೂಪುಗೊಂಡಿದ್ದಾರೆ. ಈ ಬಾರಿಯ ಯೋಗ ದಿನದ ಆಚರಣೆಗೆ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ಆಯ್ದುಕೊಂಡು ಪ್ರಧಾನಿ ಪಾಲ್ಗೊಳ್ಳುತ್ತಿರುವುದು ಕರ್ನಾಟಕದಲ್ಲಿ ಯೋಗವನ್ನು ಪ್ರಚುರಪಡಿಸಲು ಅನುಕೂಲವಾಗಬಹುದಾಗಿದೆ. ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದರಲ್ಲಿ ಮಾನಸಿಕ ಆರೋಗ್ಯದ ಗುಟ್ಟು ಸಹ ಇದೆ. ಯೋಗವನ್ನು ಜೀವನಕ್ರಮವಾಗಿ ರೂಢಿಸಿಕೊಂಡಲ್ಲಿ ವ್ಯಕ್ತಿ, ಸಮಾಜ, ದೇಶ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ. ಅಂಥದೊಂದು ಸಂಕಲ್ಪಕ್ಕೆ ವಿಶ್ವ ಯೋಗ ದಿನ ನಿಮಿತ್ತವಾಗಲಿ.