

ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ರಾಷ್ಟ್ರವ್ಯಾಪಿಯಾಗಿ ನಡೆಯುವ ಪರೀಕ್ಷೆ ನೀಟ್. ಇದು ಎಷ್ಟು ಸ್ಪರ್ಧಾತ್ಮಕವಾಗಿರುತ್ತದೆ ಎಂದರೆ, ಈ ಸಲ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳ ಸಂಖ್ಯೆ 18 ಲಕ್ಷಕ್ಕೂ ಅಧಿಕ. ಹೀಗಾಗಿಯೇ ಈ ಪರೀಕ್ಷೆಯಲ್ಲಿ ಅಕ್ರಮ ನಡೆಯಬಾರದು ಎಂಬುದಕ್ಕಾಗಿ, ಈ ಪರೀಕ್ಷೆ ನಡೆಸುವ ಜವಾಬ್ದಾರಿಯಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ)ಯು ವಸ್ತ್ರಸಂಹಿತೆಯನ್ನು ಜಾರಿಗೊಳಿಸುತ್ತದೆ. ಆದರೆ ಈ ಸಂಹಿತೆಯ ಪಾಲನೆ ಪ್ರಕ್ರಿಯೆ ವಿವಾದಕ್ಕೀಡಾಗುತ್ತಿರುವುದು ವಿಪರ್ಯಾಸ. ಜುಲೈ 17ರಂದು ನೀಟ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರ ಪ್ರವೇಶಿಸುವ ಸಂದರ್ಭದಲ್ಲಿ ವಸ್ತ್ರಸಂಹಿತೆ ಹೆಸರಲ್ಲಿ ಹಲವು ಮಹಿಳಾ ಪರೀಕ್ಷಾರ್ಥಗಳಿಗೆ ಒಳಉಡುಪುಗಳನ್ನು ತೆಗೆಸಲಾಯಿತು ಎಂದು ಕೇರಳದ ಕೊಲ್ಲಂನ ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದು, ಇದಕ್ಕೆ ತಾಜಾ ಉದಾಹರಣೆ. ಇದರ ಸತ್ಯಾಸತ್ಯತೆ ತನಿಖೆಯಿಂದ ಬಯಲಾಗಬೇಕಾದುದು ಹೌದಾದರೂ, ಈ ಆಪಾದನೆ ಗಂಭೀರವಾದುದು.
‘ಇಂಥ ಘಟನೆ ಕುರಿತು ನಮಗೆ ದೂರು ಬಂದಿಲ್ಲ. ಆದರೂ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರದ ಅಧೀಕ್ಷಕರು, ಸ್ವತಂತ್ರ ವೀಕ್ಷಕರು ಮತ್ತು ನಗರ ಸಂಯೋಜಕರಿಂದ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ. ಇಂತಹ ಘಟನೆ ಜರುಗಿಲ್ಲ ಎಂದು ತಿಳಿಸಿದ್ದಾರೆ’ ಎಂದು ಎನ್ಟಿಎ ಸ್ಪಷ್ಟನೆ ನೀಡಿದೆಯಾದರೂ, ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ‘ಅಭ್ಯರ್ಥಿಗಳ ತಪಾಸಣೆ ಮಾಡುವಾಗ ಲಿಂಗ/ ಧಾರ್ವಿುಕ /ಸಾಂಸ್ಕೃತಿಕ /ಪ್ರಾದೇಶಿಕ ಸೂಕ್ಷ್ಮತೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಪರೀಕ್ಷೆಯ ಪಾವಿತ್ರ್ಯ ಮತ್ತು ನ್ಯಾಯಸಮ್ಮತತೆ ಖಾತ್ರಿಪಡಿಸಿಕೊಳ್ಳುವುದೇ ವಸ್ತ್ರಸಂಹಿತೆಯ ಉದ್ದೇಶವಾಗಿದೆ’ ಎಂದು ಎನ್ಟಿಎ ಹೇಳಿದೆ. ಈ ನಡುವೆ, ನೀಟ್ನಲ್ಲಿ ನಕಲಿ ಪರೀಕ್ಷಾರ್ಥಿಗಳು ಬರೆದ ಪ್ರಕರಣವೂ ಬೆಳಕಿಗೆ ಬಂದಿದ್ದು, ಸಿಬಿಐ ಕೆಲವರನ್ನು ಬಂಧಿಸಿದೆ. 2017ರಲ್ಲಿ ಕೇರಳದ ಕಣ್ಣೂರಿನ ನೀಟ್ ಪರೀಕ್ಷಾ ಕೇಂದ್ರ ಪ್ರವೇಶಿಸುವ ಸಂದರ್ಭದಲ್ಲಿ ಬಾಲಕಿಯರ ಒಳಉಡುಪುಗಳನ್ನು ತೆಗೆಯುವಂತೆ ಹೇಳಿದ್ದಕ್ಕಾಗಿ ಶಾಲೆಯೊಂದರ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿತ್ತು. ನೀಟ್ ಮಾರ್ಗಸೂಚಿಯಲ್ಲಿ ವಸ್ತ್ರ ಸಂಹಿತೆ ಬಗ್ಗೆ ವಿವರಿಸಲಾಗಿದೆ. ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಯುವ ಜೆಇಇ (ಮೇನ್ಸ್), ಜೆಇಇ (ಅಡ್ವಾನ್ಸಡ್) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ನಡೆಯುವ ಸಿಯುಇಟಿ - ಯುಜಿ ಪರೀಕ್ಷೆಗಳಿಗೂ ಬಹುತೇಕವಾಗಿ ಇದೇ ತೆರನಾದ ಮಾರ್ಗಸೂಚಿಗಳು ಇವೆ.
ಯಾವುದೇ ಪರೀಕ್ಷೆ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಯಬೇಕು; ಇದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ನಿಯಮ ರೂಪಿಸಬೇಕಾಗುತ್ತದೆ ಎಂಬುದರಲ್ಲಿ ಭಿನ್ನಾಭಿಪ್ರಾಯ ಇಲ್ಲ. ಆದರೆ ಇಂಥ ನಿಯಮಗಳನ್ನು ಜಾರಿಮಾಡುವಾಗ ಸಂಬಂಧಿಸಿದವರು ವಿವೇಚನೆ ಹಾಗೂ ಸಂಯಮ ತೋರಬೇಕಾಗುತ್ತದೆ. ನಿಯಮ ಇದೆ ಎಂದಾಕ್ಷಣ ಅತ್ಯುತ್ಸಾಹದಿಂದ ವರ್ತಿಸುವುದು ಮಕ್ಕಳಲ್ಲಿ ಒತ್ತಡ ಹಾಗೂ ಮುಜುಗರ ಉಂಟುಮಾಡುವ ಸಾಧ್ಯತೆ ಇರುತ್ತದೆ. ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡವರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಿ ಸಂವೇದನಾ ಶೀಲವಾಗಿಸುವ ಅಗತ್ಯ ಇದೆ. ಒಟ್ಟಿನಲ್ಲಿ ಮಕ್ಕಳು ನಿರಾಳವಾಗಿ, ಒತ್ತಡರಹಿತವಾಗಿ ಪರೀಕ್ಷೆ ಬರೆಯುವ ವಾತಾವರಣ ನಿರ್ವಿುಸಬೇಕಾದುದು ಸರ್ಕಾರಗಳ ಜವಾಬ್ದಾರಿ.