

ಪೆಗಾಸಸ್ ಎಂಬ ಸ್ಪೈವೇರ್ ಬಳಸಿಕೊಂಡು ಭಾರತದ ಅನೇಕ ಜನಪ್ರತಿನಿಧಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತಿತರರ ಫೋನ್ ಹ್ಯಾಕ್ ಮಾಡಲಾಗಿದೆ ಎಂಬ ವಿಷಯ ಈಗ ಕೋಲಾಹಲವನ್ನೇ ಎಬ್ಬಿಸಿದೆ. ಇಸ್ರೇಲ್ ಮೂಲದ ಈ ಸ್ಪೈವೇರ್ ಅನ್ನು ಬಳಸಿಕೊಂಡು ಫೋನಿಗೆ ಕಳ್ಳಗಿವಿ ಇಡುವಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದು ಕಾಂಗ್ರೆಸ್ ಆದಿಯಾಗಿ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಆದರೆ ಸರ್ಕಾರ ಇದನ್ನು ತಳ್ಳಿಹಾಕಿದೆ. ‘ಭಾರತದ ಅಭಿವೃದ್ಧಿಯನ್ನು ಸಹಿಸದ ಸಂಘಟನೆಗಳು ಇಂಥ ವರದಿಯನ್ನು ಪ್ರಕಟಿಸುತ್ತವೆ. ಇಂತಹ ಅಡಚಣೆಗಳು ಮತ್ತು ಪಿತೂರಿಗಳಿಂದ ಭಾರತದ ಅಭಿವೃದ್ಧಿಯ ದಿಶೆಯನ್ನು ಬದಲಾಯಿಸಲಾಗದು’ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಖಾರವಾಗಿ ಹೇಳಿದ್ದಾರೆ. ಲೋಕಸಭೆ ಮುಂಗಾರು ಅಧಿವೇಶನ ಶುರುವಾದ ಸಮಯದಲ್ಲೇ ಈ ವಿಷಯ ಹೊರಬೀಳಲು ಬೇರೆಯದೇ ಕಾರಣವಿರಬೇಕು ಎಂದೂ ಆಡಳಿತ ಪಕ್ಷ ಶಂಕಿಸಿದೆ. ಎಲ್ಲರೂ ತಂತಮ್ಮ ನಿಲುವುಗಳನ್ನು ಪ್ರತಿಪಾದನೆ ಮಾಡುತ್ತಿರುವುದರಿಂದಾಗಿ ಸತ್ಯ ಏನೆಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸುವುದು ಉತ್ತಮ.
ಫೋನ್ ಹ್ಯಾಕ್ ಯಾದಿಯಲ್ಲಿ ಮೋದಿ ಸಂಪುಟದ ಇಬ್ಬರು ಸಚಿವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 40 ಪತ್ರಕರ್ತರು, ಅನೇಕ ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು ಇದ್ದಾರೆ ಎಂದು ‘ದಿ ವೈರ್’ ಮುಂತಾದ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕರ್ನಾಟಕದ ಅನೇಕರ ಫೋನ್ ಸಹ ಹ್ಯಾಕ್ ಆಗಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ. ಪೆಗಾಸಸ್ ಸ್ಪೈವೇರ್ ಅನ್ನು ಇಸ್ರೇಲ್ ಮೂಲದ ಎನ್ಎಸ್ಒ ಎಂಬ ತಂತ್ರಜ್ಞಾನ ಸಂಸ್ಥೆ ರೂಪಿಸಿ ಮಾರಾಟ ಮಾಡುತ್ತದೆ. ಆದರೆ, ಭಾರತದಲ್ಲಿ ಈಗ ಉಂಟಾಗಿರುವ ವಿವಾದದಲ್ಲಿ ಕೇಳಿಬಂದಿರುವ ಹೆಸರುಗಳನ್ನು ತಾನು ನಿಗಾ ಯಾದಿಯಲ್ಲಿ ಇರಿಸಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಒಟ್ಟಿನಲ್ಲಿ ವಿಷಯ ಗೋಜಲಾಗುತ್ತಲೇ ಇದೆ. ತಂತ್ರಜ್ಞಾನ ವಿಪರೀತವಾಗಿ ಬೆಳೆದಿರುವ ಇಂದಿನ ದಿನಮಾನದಲ್ಲಿ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಇಂಥ ಸನ್ನಿವೇಶಗಳು ಸಾಮಾನ್ಯ ಎಂಬಂತಾಗಿದೆ. ಆಡಿಯೊ, ವಿಡಿಯೊ, ತಿರುಚಲ್ಪಟ್ಟ ಚಿತ್ರಗಳು-ಮಾಹಿತಿಗಳು... ಹೀಗೆ ವಿವಿಧ ಮಾಧ್ಯಮಗಳ ಮೂಲಕ ಯಾರ ಬಗೆಗಾದರೂ ವಿವಾದ ಉಂಟುಮಾಡುವುದು ಬಹಳ ಸುಲಭ ಎಂದಾಗಿದೆ. ಈ ಪೈಕಿ ಕೆಲವರ ವಿಷಯದಲ್ಲಿ ಸತ್ಯಾಂಶ ಇದ್ದರೂ, ವಿವಾದ ಉಂಟಾದಾಕ್ಷಣ ಎಲ್ಲರೂ ತಪು್ಪಗಾರರು ಎಂದ ಷರಾ ಬರೆಯಲಾಗದು.
ಹೀಗಾಗಿ ಇಂಥ ವಿಷಯ ಮುನ್ನೆಲೆಗೆ ಬಂದಾಗ ಆದಷ್ಟು ಬೇಗ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಜನರಿಗೆ ತಿಳಿಯುವಂತೆ ಮಾಡಬೇಕು. ಇಲ್ಲವಾದಲ್ಲಿ ತಪು್ಪ ಮಾಡದಿರುವವರು ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ. ವಿವಾದದ ಕಾರಣಕ್ಕೆ ಎಷ್ಟೋ ಜನರ ಸಾರ್ವಜನಿಕ ಜೀವನವೇ ಅಂತ್ಯವಾದದನ್ನೂ ನಾವು ಕಂಡಿದ್ದೇವೆ. ಟೆಲಿಫೋನ್ ಕದ್ದಾಲಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅವಕಾಶವಿದೆಯಾದರೂ, ಅದಕ್ಕೂ ನೀತಿನಿಯಮಗಳಿವೆ. ಅದನ್ನು ಮೀರಿ ಕಳ್ಳಗಿವಿ ಇಡಲಾಗದು. ಏಕೆಂದರೆ ಇದರಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಪ್ರಶ್ನೆಯೂ ಅಡಗಿದೆ. ಪೆಗಾಸಸ್ ವಿಷಯದಲ್ಲಿ ಸಹ ಒಂದು ರ್ತಾಕ ಅಂತ್ಯವನ್ನು ಕಾಣಿಸಿದರೆ ಮುಂದೆ ಇಂಥ ವಿವಾದಗಳು ಉಂಟಾಗುವುದನ್ನು ಆದಷ್ಟು ತಪ್ಪಿಸಬಹುದು.