

ಕರೊನಾ ಸಂಕಷ್ಟ ಮತ್ತು ಇತರ ಕಾರಣಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಿರುವುದು ಗೊತ್ತಿರುವಂಥದ್ದೇ. ಅಲ್ಲದೆ, ಅತಿವೃಷ್ಟಿ, ಕರೊನಾ ಸಂಬಂಧಿತ ಪರಿಹಾರ ಪ್ಯಾಕೇಜುಗಳು ಹೊರೆಯನ್ನು ಕೂಡ ಹೆಚ್ಚಿಸಿದವು. ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಸರ್ಕಾರ ಸದಾಕಾಲ ಸನ್ನದ್ಧವಾಗಿಯೇ ಇರಬೇಕಾಗುತ್ತದೆ. ಮುಖ್ಯವಾಗಿ, ಕಳೆದ ಎರಡು ವರ್ಷದಲ್ಲಿ ಪ್ರಮುಖ ಇಲಾಖೆಗಳಿಗೆ ನೀಡಬೇಕಾದ ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಇಂಥ ಹೆಜ್ಜೆ ಅನಿವಾರ್ಯ ಎಂದು ಭಾವಿಸಬಹುದು. ಆದರೆ, ನಿಗದಿಯಾದ ಅನುದಾನವನ್ನೇ ಕೊಡಲು ಸಾಧ್ಯವಾಗದಿರುವ ಸ್ಥಿತಿ ಇರುವಾಗ ಹೊಸ ಯೋಜನೆಗಳನ್ನು, ಕಾಮಗಾರಿಗಳನ್ನು ಆತುರಾತುರವಾಗಿ ಆರಂಭಿಸುವುದು ಏಕೆ? ಯಾವುದೇ ಹೊಸ ಕಾರ್ಯಕ್ರಮ ಘೋಷಣೆಯ ಮುನ್ನ ಅದಕ್ಕೆ ಬೇಕಾದ ಅನುದಾನವೆಷ್ಟು, ಅದನ್ನು ಒದಗಿಸುವ ಆರ್ಥಿಕ ಮೂಲಗಳಾವವು ಎಂಬುದನ್ನೆಲ್ಲ ಖಚಿತ ಪಡಿಸಿಕೊಂಡು ಮುಂದುವರಿಯುವುದು ಸರ್ಕಾರದ ಆದ್ಯ ಕರ್ತವ್ಯ.
ಇತ್ತೀಚೆಗೆ ರಾಜ್ಯದಲ್ಲಿ ಪರ್ಸಟೇಂಜ್ (ಭ್ರಷ್ಟಾಚಾರ) ಪ್ರಕರಣದ ಬಗ್ಗೆ ಸಾಕಷ್ಟು ಕೋಲಾಹಲ ಏರ್ಪಟ್ಟಿದೆ. ಅಷ್ಟೇ ಅಲ್ಲದೆ, ಅನುದಾನವೇ ಇಲ್ಲದಿದ್ದರೂ, ಟೆಂಡರ್ ಕರೆದು ಕಾಮಗಾರಿಗಳನ್ನು ಆರಂಭಿಸಲಾಗಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಕಾಮಗಾರಿ ಮುಗಿದಿರುವ 22 ಸಾವಿರ ಕೋಟಿ ರೂ.ಗಳಷ್ಟು ಬಾಕಿ ಮೊತ್ತದ ಹೊರೆ ಸರ್ಕಾರದ ಮೇಲಿದೆ. ಪರಿಣಾಮ ಹೊಸ ಕಾಮಗಾರಿಗಳಿಗೆ ಗುತ್ತಿಗೆದಾರರು ಹಿಂದೇಟು ಹಾಕುವ ಸ್ಥಿತಿ ನಿರ್ವಣವಾಗಿದೆ. ಹಳೆಯ ಬಾಕಿಯೇ ನೀಡದೆ ಹೊಸ ಕಾಮಗಾರಿ ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂಬ ಅವರ ಪ್ರಶ್ನೆ ಸಹಜವಾಗಿಯೇ ಇದೆ. ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ದಿ, ಬಿಬಿಎಂಪಿಗಳಲ್ಲಿ ಬಾಕಿ ಜಾಸ್ತಿ ಇದೆ. ಇಲಾಖೆಗಳ ಸಚಿವರು ಅಸಹಾಯಕರಾಗಿರುವುದರಿಂದ, ಮುಂದೇನು ಎಂಬ ಪ್ರಶ್ನೆ ಸೃಷ್ಟಿಯಾಗಿದೆ. 2018-19ರಿಂದ ಸರ್ಕಾರದಲ್ಲಿ ಬಿಲ್ ಬಾಕಿ ಹೆಚ್ಚಾಗಿ ಉಳಿಯಲಾರಂಭಿಸಿದೆ ಎಂಬುದು ಮೂಲಗಳ ಮಾಹಿತಿ. ಅಲ್ಲದೆ, ಶಾಲೆಗಳಲ್ಲಿ ಮೊಟ್ಟೆ ವಿತರಣೆ ಯೋಜನೆಗೆ ಅನುದಾನ ಹೇಗೆ ವಿತರಿಸಲಾಗುತ್ತದೆ ಎಂಬ ಪ್ರಶ್ನೆಗೂ ನಿಖರ ಉತ್ತರವಿಲ್ಲ.
ಇಂಥ ಅಚಾತುರ್ಯಗಳು ಇದೇ ಮೊದಲೇನಲ್ಲ. ಆದರೆ, ಖಂಡಿತವಾಗಿಯೂ ಇದು ವಿತ್ತೀಯ ಶಿಸ್ತಿನ ನಡೆಯಂತೂ ಅಲ್ಲ. ಬೊಕ್ಕಸದ ಸ್ಥಿತಿ ನೋಡದೆಯೇ ಯೋಜನೆಗಳನ್ನು ಘೋಷಿಸುವುದು ಸರಿಯಲ್ಲ. ಇದರಿಂದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವ ಜತೆಗೆ, ಸರ್ಕಾರದ ಮೇಲಿನ ನಂಬಿಕೆಗೂ ಪೆಟ್ಟು ಬೀಳುತ್ತದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳದಿರಲು ಇದು ಕೂಡ ಒಂದು ಕಾರಣವಾಗಬಹುದು. ‘ಜನಪ್ರಿಯ’ ಕಾರ್ಯಕ್ರಮಗಳ ವೆಚ್ಚ ಭರಿಸಲು ಕೂಡ ಸರ್ಕಾರ ಹೆಣಗಾಡುತ್ತಿದೆ. ಪ್ರಕೃತಿ ವಿಕೋಪ, ಕರೊನಾ ಪರಿಹಾರ ಕಾರ್ಯ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ, ರೈತ ಉತ್ಪಾದಕ ಕಂಪನಿಗಳಿಗೆ ಅಮೃತ ಯೋಜನೆ- ಇವುಗಳಿಂದ ರಾಜ್ಯದ ಬೊಕ್ಕಸಕ್ಕೆ 3,574,67 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬಿದ್ದಿದೆ. ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಹೊಸ ಘೋಷಣೆಗಳನ್ನು ಮಾಡಬೇಕಾಗುತ್ತದೆ. ಆದರೆ, ಕಾಮಗಾರಿಗಳ ವಿಷಯದಲ್ಲಿ ಹಣಕಾಸಿನ ಲಭ್ಯತೆಯನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇರಿಸುವುದು ಅಗತ್ಯ. ಆಗಲೇ ಹಣಕಾಸು ಸಂಬಂಧಿತ ಅಪಸವ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ.