

ಕರ್ನಾಟಕದಲ್ಲಿ ಕರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿರುವುದರಿಂದ ವ್ಯಾಪಾರ-ವಹಿವಾಟನ್ನು ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕು ಎಂಬ ಒತ್ತಡ ಸರ್ಕಾರದ ಮೇಲಿತ್ತು. ಹೆಚ್ಚುಕಡಿಮೆ ಎರಡು ತಿಂಗಳು ಕಠಿಣ ಲಾಕ್ಡೌನ್ ಇದ್ದಿದ್ದರಿಂದ ಆರ್ಥಿಕ ಚಟುವಟಿಕೆಗಳು ನೆಲ ಕಚ್ಚಿರುವುದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿರುವುದು ಹೌದು. ಎಚ್ಚರಿಕೆಯ ಹೆಜ್ಜೆ ಇಡುತ್ತಲೇ ಬಂದ ರಾಜ್ಯ ಸರ್ಕಾರ ಮೂರು ಹಂತದಲ್ಲಿ ಲಾಕ್ಡೌನ್ ಸಡಿಲಿಸಿದ್ದು, ಇಂದಿನಿಂದ (ಸೋಮವಾರ) ನಾಲ್ಕನೇ ಹಂತದ ಅನ್ಲಾಕ್ ಪ್ರಕ್ರಿಯೆ ಜಾರಿಯಾಗಲಿದೆ. ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದ ಸಿನಿಮಾ ಹಾಲ್ಗಳು ಶೇಕಡ 50 ಪ್ರೇಕ್ಷಕರೊಂದಿಗೆ ಕಾರ್ಯಾರಂಭ ಮಾಡಲಿವೆ. ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಕಾಲೇಜುಗಳು ಜುಲೈ 26ರಿಂದ ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ರಾತ್ರಿ ಕರ್ಫ್ಯೂ ಅವಧಿಯನ್ನು ತಗ್ಗಿಸಲಾಗಿದ್ದು, ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಅಂದರೆ, ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ವಾಣಿಜ್ಯ ಚಟುವಟಿಕೆಗಳು ಮತ್ತೆ ಜೀವ ಪಡೆದುಕೊಳ್ಳಲಿವೆ.
ದೀರ್ಘಾವಧಿ ಲಾಕ್ಡೌನ್ ಹೇರುವುದು ಸಾಧ್ಯವಿಲ್ಲ. ಕ್ರಮೇಣ ನಿರ್ಬಂಧಗಳನ್ನು ಸಡಿಲಿಸುವುದು ಅನಿವಾರ್ಯ. ಈ ಹಂತದಲ್ಲಿ ಸರ್ಕಾರ ಅನ್ಲಾಕ್ ಪ್ರಕ್ರಿಯೆ ಮೂಲಕ ಮಹತ್ವದ ಜವಾಬ್ದಾರಿಯನ್ನು ಜನರ ಹೆಗಲಿಗೇರಿಸಿದೆ. ಸೋಂಕು ನಿಯಂತ್ರಿಸುವ, ಮತ್ತೆ ಅಪಾಯ ಆಹ್ವಾನಿಸಿಕೊಳ್ಳದಂತೆ ಎಚ್ಚರಿಕೆಯಿಂದ ಮುಂದೆ ಸಾಗುವ ಅಗತ್ಯತೆ ಇದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಸಂಭಾವ್ಯ ಮೂರನೇ ಅಲೆಯ ಕುರಿತಂತೆ ಐಎಂಎ, ಪ್ರಧಾನಿ, ಮುಖ್ಯಮಂತ್ರಿ ಸಮೇತ ಹಲವರು ಎಚ್ಚರಿಕೆ ನೀಡಿದ್ದಾರೆ. ಆದರೆ, ಜವಾಬ್ದಾರಿಯುತವಾಗಿ ವರ್ತಿಸಿ ಜೀವ-ಜೀವನ ಎರಡನ್ನೂ ನಿರ್ವಹಿಸಬೇಕಾದ ಜನಸಾಮಾನ್ಯರು ಮಾತ್ರ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಬೇಸರದ ಸಂಗತಿ.
ಅನ್ಲಾಕ್ ಆಗುತ್ತಿದ್ದಂತೆ ಪ್ರವಾಸಿತಾಣಗಳಲ್ಲಿ ಜನಜಂಗುಳಿ ಜಮಾಯಿಸುತ್ತಿದ್ದು, ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಮಾರುಕಟ್ಟೆ, ಇತರ ಸಾರ್ವಜನಿಕ ಪ್ರದೇಶಗಳಲ್ಲೂ ಸುರಕ್ಷಿತ ಅಂತರ ಮರೆತು, ಸರಿಯಾಗಿ ಮಾಸ್ಕ್ನ್ನೂ ಹಾಕಿಕೊಳ್ಳದೆ ಸಂಚರಿಸುತ್ತಿರುವುದು ಸರಿಯಲ್ಲ. ಶೈಕ್ಷಣಿಕ ವರ್ಷ ಸ್ತಬ್ಧಗೊಂಡಿದ್ದರಿಂದ ವಿದ್ಯಾರ್ಥಿಗಳು, ಅವರ ಪಾಲಕರು ಹೈರಾಣಾಗಿದ್ದಾರೆ. ಜುಲೈ-ಆಗಸ್ಟ್ ತಿಂಗಳಲ್ಲಿ ಪ್ರಮುಖ ಪರೀಕ್ಷೆಗಳು ನಡೆಯಬೇಕಿದ್ದು, ಫಲಿತಾಂಶ ಬಂದು ಪ್ರವೇಶಾತಿ ಪ್ರಕ್ರಿಯೆಯೂ ಪೂರ್ಣಗೊಳ್ಳಬೇಕಿದೆ. ಭೌತಿಕ ತರಗತಿಗಳು ದೀರ್ಘಾವಧಿ ಬಳಿಕ ಪುನರಾರಂಭಗೊಳ್ಳಬೇಕಿವೆ. ಇದೆಲ್ಲ ಸುಗಮವಾಗಿ ಸಾಗಬೇಕಾದರೆ ಮೂರನೇ ಅಲೆ ಪ್ರವೇಶಿಸದಂತೆ ಮತ್ತು ಎರಡನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ವೈದ್ಯಕೀಯ ತಜ್ಞರು ಈಗಾಗಲೇ ಈ ಸಂಬಂಧ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನು ಸರಿಯಾಗಿ ಪಾಲಿಸಬೇಕು. ಸರ್ಕಾರ ವ್ಯಾಪಾರ-ವಹಿವಾಟಿಗೆ ಅವಕಾಶವೇನೋ ಕಲ್ಪಿಸಿದೆ. ಜನರು ಮಾತ್ರ ಜವಾಬ್ದಾರಿಯನ್ನು ಮರೆಯುವಂತಿಲ್ಲ. ಎರಡನೇ ಅಲೆ ಹಲವು ಪಾಠ ಕಲಿಸಿದ್ದು, ಮತ್ತೆ ಅಂಥ ಪರಿಸ್ಥಿತಿ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಿದೆ.