

ಭಾರತದ ವಿರುದ್ಧದ ಮೂರು ಯುದ್ಧಗಳಿಂದ ಪಾಕಿಸ್ತಾನ ಪಾಠ ಕಲಿತಿದ್ದು, ಈಗ ಹಿಂದುಸ್ತಾನದೊಂದಿಗೆ ಶಾಂತಿ ಬಯಸುತ್ತದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿರುವುದು ಕುತೂಹಲ ಕೆರಳಿಸುವಂತಿದೆ. ದುಬೈ ಮೂಲದ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, ಕಾಶ್ಮೀರದಂತಹ ಜ್ವಲಂತ ವಿವಾದಗಳ ಬಗೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಗಂಭೀರ-ಪ್ರಾಮಾಣಿಕ ಮಾತುಕತೆಗಳನ್ನು ನಡೆಸುವ ಹಾಗೂ ಸಮಯ-ಸಂಪನ್ಮೂಲಗಳನ್ನು ಹಾಳು ಮಾಡಿಕೊಳ್ಳದೆ ಶಾಂತಿಯುತವಾಗಿ ಬದುಕಿ ಅಭಿವೃದ್ಧಿ ಹೊಂದುವ ಇಂಗಿತ ವ್ಯಕ್ತಪಡಿಸಿರುವುದು ಸ್ವಾಗತಾರ್ಹವೇ ಆಗಿದ್ದರೂ ಇತಿಹಾಸದ ಬೆಳಕಿನಲ್ಲಿ ನೋಡಿದಾಗ ಇದು ನಂಬಿಕೆಗೆ ಯೋಗ್ಯವೇ ಎಂಬ ಪ್ರಶ್ನೆಯನ್ನು ಸಹಜವಾಗಿ ಹುಟ್ಟುಹಾಕುತ್ತದೆ. ಕಳೆದ ನವೆಂಬರ್ನಲ್ಲಿ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಕಾಶ್ಮೀರ ವಿವಾದವನ್ನು ಕೆದುಕಲು ಪಾಕಿಸ್ತಾನ ಪ್ರಯತ್ನಿಸಿದ್ದು, ಅನಂತರದಲ್ಲಿ ಪ್ರಧಾನಿ ಮೋದಿ ಬಗೆಗೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಕೀಳುಮಟ್ಟದಲ್ಲಿ ಮಾತನಾಡಿದ ಘಟನೆಗಳು ತಾಜಾ ಇರುವಾಗಲೇ ಪಾಕ್ ಪ್ರಧಾನಿ ಶಾಂತಿಯ ಸಂದೇಶವನ್ನು ಸೌಜನ್ಯದ ಭಾಷೆಯಲ್ಲಿ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸುವಂತಿದೆ.
ಆಂತರಿಕವಾಗಿ ಸಂಕಷ್ಟಗಳಿಂದ ಜಝುರಿತವಾಗಿರುವ ಪಾಕಿಸ್ತಾನದ ಪ್ರಧಾನಿ ಹತಾಶೆಯಿಂದಾಗಿ ಇಂತಹ ಮಾತುಗಳನ್ನು ಹೇಳಿದ್ದಾರೆಯೇ ಅಥವಾ ದುರಾಲೋಚನೆಯನ್ನಿಟ್ಟುಕೊಂಡು ತೋರಿಕೆಗಾಗಿ ಅಭಿಪ್ರಾಯ ಮಂಡಿಸಿದ್ದಾರೋ ಎಂಬ ಅನುಮಾನಗಳು ತಲೆದೋರುತ್ತವೆ. ಏಕೆಂದರೆ, ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಈಚೆಗೆ ಭೀಕರ ಪ್ರವಾಹದಿಂದಾದ ವ್ಯಾಪಕ ನಷ್ಟವು ಆ ದೇಶವನ್ನು ಭಿಕ್ಷುಕನ ಸ್ಥಾನದಲ್ಲಿ ತಂದುನಿಲ್ಲಿಸಿದೆ. ಪಾಕಿಸ್ತಾನದಂತಹ ಪರಮಾಣು ಶಕ್ತಿಯುಳ್ಳ ರಾಷ್ಟ್ರವು ಆರ್ಥಿಕ ನೆರವಿಗೆ ಭಿಕ್ಷೆ ಬೇಡುವಂತಾಗಿರುವುದು ನಾಚಿಕೆಯ ಸಂಗತಿ ಎಂದು ಸ್ವತಃ ಶೆಹಬಾಜ್ ಗೋಳು ತೋಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಆಹಾರದ ದರಗಳು ಗಗನಮುಖಿಯಾಗಿದ್ದು, ಆಡಳಿತದ ವಿರುದ್ಧ ಸಾರ್ವಜನಿಕ ಅಸಮಾಧಾನ ಅಧಿಕವಾಗುತ್ತಿದೆ. ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆ ಕದನ ವಿರಾಮ ಕೊನೆಗೊಳಿಸಿ, ಭಯೋತ್ಪಾದಕ ದಾಳಿಗಳನ್ನು ತೀವ್ರಗೊಳಿಸಿದೆ. ಅಫ್ಘಾನಿಸ್ತಾನದ ಗಡಿಯಲ್ಲಿ ತಾಲಿಬಾನ್ ಪಡೆಗಳು ಕೂಡ ಪಾಕ್ ಯೋಧರ ಮೇಲೆ ದಾಳಿಮಾಡುತ್ತಿವೆ. ಪ್ರತ್ಯೇಕತಾವಾದಿ ಸಂಘಟನೆಗಳ ಬಲ ಹೆಚ್ಚಾಗಿದ್ದು, ಪಾಕಿಸ್ತಾನ ಛಿದ್ರಗೊಳ್ಳುವ ಭೀತಿ ಎದುರಿಸುತ್ತಿದೆ.
ಪಾಕಿಸ್ತಾನದ ಹಿಂದಿನ ನಡವಳಿಕೆಗಳಿಂದ ಭಾರತ ಕೂಡ ಪಾಠ ಕಲಿತಿದೆ. ಮಿಲಿಟರಿ ಸರ್ವಾಧಿಕಾರಿ ಎಂಬ ಕಾರಣಕ್ಕಾಗಿ ಜಗತ್ತು ಮಾನ್ಯತೆ ಕೊಡದ ಸಂದರ್ಭದಲ್ಲಿ ಜನರಲ್ ಪರ್ವೆಜ್ ಮುಷರಫ್ ಜತೆ ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಾಂತಿ ಮಾತುಕತೆ ನಡೆಸಿದ ನಂತರವೂ ಪಾಕಿಸ್ತಾನವು ಕಾರ್ಗಿಲ್ ಯುದ್ಧ ನಡೆಸಿತು. ಹೀಗಾಗಿ, ಪಾಕಿಸ್ತಾನದ ಶಾಂತಿಮಂತ್ರ ಪಠಣ ವಿಶ್ವಾಸರ್ಹವಲ್ಲ. ಇನ್ನು ಶೆಹಬಾಜ್ ಶರೀಫ್ ಮಾತುಗಳಲ್ಲಿ ನೈಜತೆ ಇದೆ ಎಂದು ಪರಿಗಣಿಸಿದರೂ, ಅವರ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸೇನಾಡಳಿತ ಅವಕಾಶ ನೀಡುವುದೇ ಎಂಬುದು ಪ್ರಶ್ನೆ. ಏಕೆಂದರೆ, ಹಿಂದೆ ಪ್ರಧಾನಿಯಾಗಿದ್ದ ಅವರ ಸೋದರ ನವಾಜ್ ಶರೀಫ್ ಹಾಗೂ ಸ್ವತಃ ಶೆಹಬಾಜ್ ಮಿಲಿಟರಿ ಕ್ಷಿಪ್ರಕ್ರಾಂತಿಯ ಪರಿಣಾಮವಾಗಿ ಸೌದಿ ಅರೇಬಿಯಾಕ್ಕೆ ಗಡೀಪಾರು ಆಗಿದ್ದವರು. ಈಗ ಅದೇ ಮಿಲಿಟರಿ ಆಡಳಿತದ ಕೈಗೊಂಬೆಯಾಗಿ ಅಧಿಕಾರಕ್ಕೆ ಮರಳಿದ್ದಾರೆ. ಇಂತಹ ವಾಸ್ತವಗಳ ಹಿನ್ನೆಲೆಯಲ್ಲಿ ಪಾಕ್ ನಾಯಕರ ಮಾತನ್ನು ಸಂದೇಹದಿಂದಲೇ ನೋಡಿ, ಭಾರತ ತನ್ನ ಎಚ್ಚರಿಕೆಯಲ್ಲಿ ತಾನಿರಬೇಕಾಗುತ್ತದೆ.