

ಹತ್ತುಹಲವು ಸಮಸ್ಯೆಗಳಿಂದ ಹೈರಾಣಾಗಿರುವ, ಜಗತ್ತಿನ ಪ್ರಮುಖ ದೇಶಗಳಿಗೆ ಸಾಲ ಕೇಳಿ, ಸಿಗದೆ ರೋಸಿಹೋಗಿರುವ ಪಾಕಿಸ್ತಾನ ತನ್ನ ಸಂಕಷ್ಟಗಳನ್ನು ನಿವಾರಿಸಿಕೊಳ್ಳುವುದನ್ನು ಬಿಟ್ಟು ಭಾರತದಲ್ಲಿನ ಆಂತರಿಕ ಬೆಳವಣಿಗೆಗಳ ಬಗ್ಗೆ ಸುಖಾಸುಮ್ಮನೆ ಮೂಗು ತೂರಿಸುತ್ತದೆ. ಭಯೋತ್ಪಾದನೆ ರಫ್ತು, ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು, ನಕಲಿ ನೋಟಿನ ಜಾಲ, ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾದಕದ್ರವ್ಯ ಸಾಗಾಣಿಕೆಯಂಥ ಕೃತ್ಯಗಳ ಮುಖಾಂತರ ಭಾರತದಲ್ಲಿ ಶಾಂತಿ ಕದಡಲು, ನೆಮ್ಮದಿ ಹಾಳು ಮಾಡಲು ಸದಾ ಯತ್ನಿಸುತ್ತಿರುತ್ತದೆ.
ಭಾರತೀಯ ಸೇನಾಪಡೆಗಳ ಮುಖ್ಯಸ್ಥರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಾಗ; ಆ ಕುರಿತಂತೆಯೂ ಸುಳ್ಳುಸುದ್ದಿ ಹಬ್ಬಿಸಿ, ಅಪಪ್ರಚಾರ ನಡೆಸಿದ್ದ ಪಾಕ್, ಯಾವ ಮಟ್ಟಕ್ಕೂ ಹೋಗಲು ಹೇಸುವುದಿಲ್ಲ ಎಂಬುದನ್ನು ರುಜುವಾತು ಮಾಡಿತು. ಸುಳ್ಳುಸುದ್ದಿಗಳನ್ನು ಹರಡುತ್ತಿದ್ದ ಪಾಕ್ ಮೂಲದ ಹಲವು ಯೂಟ್ಯೂಬ್ ವಾಹಿನಿಗಳನ್ನು ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದು ನೆನಪಿರಬಹುದು. ಈಗ, ಹಿಜಾಬ್ ವಿವಾದವನ್ನು ನೆಪವಾಗಿಸಿಕೊಂಡು ನಕಲಿ ಟ್ವಿಟರ್ ಖಾತೆಗಳ ಮೂಲಕ ಭಾರತದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಪಾಕಿಸ್ತಾನ. ಭಾರತದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ನೂರಕ್ಕೂ ಅಧಿಕ ನಕಲಿ ಟ್ವಿಟರ್ ಖಾತೆಗಳು ಪತ್ತೆಯಾಗಿದ್ದು, ಪಾಕ್ನ ಮುಖವಾಡವನ್ನು ಕಳಚಿದೆ.
ಅಷ್ಟಕ್ಕೂ, ಹಿಜಾಬ್ ಕುರಿತಂತೆ ಸೃಷ್ಟಿಯಾಗಿರುವ ವಿವಾದ ಭಾರತದ ಆಂತರಿಕ ವಿಚಾರ. ಇದನ್ನು ಬಗೆಹರಿಸಲು ದೇಶ ಸಮರ್ಥವಾಗಿದೆ. ಅಲ್ಲದೆ, ಹಿಜಾಬ್ ಕುರಿತಾದ ಪ್ರಕರಣ ನ್ಯಾಯಾಲಯದಲ್ಲಿದೆ. ಕರ್ನಾಟಕ ಹೈಕೋರ್ಟ್ ಈಗಾಗಲೇ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು, ವಾದ-ಪ್ರತಿವಾದ ಆಲಿಸುತ್ತಿದೆ. ವಿಚಾರಣೆ ಮುಗಿದು, ತೀರ್ಪು ಬರುವವರೆಗೆ ತಾಳ್ಮೆಯಿಂದ ಕಾಯಬೇಕಿದೆ. ಆದರೆ, ಇದೇ ಅವಧಿಯನ್ನು ಭಾರತದ ವಿರುದ್ಧ ಅಪಪ್ರಚಾರಕ್ಕಾಗಿ ಬಳಸುತ್ತಿರುವ ಪಾಕ್ನ ನಡೆ ಖಂಡನೀಯ. ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವ ಯಾವುದೇ ಹಕ್ಕು ಪಾಕಿಸ್ತಾನಕ್ಕಿಲ್ಲ.
ಇತ್ತೀಚೆಗೆ ಅಮೆರಿಕದ ಸಂಸ್ಥೆಯೊಂದು ಹಿಜಾಬ್ ವಿಷಯದಲ್ಲಿ ಹೇಳಿಕೆ ನೀಡಿದಾಗ, ಭಾರತದ ವಿದೇಶಾಂಗ ಸಚಿವಾಲಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕ ಸೇರಿದಂತೆ ಯಾವ ದೇಶಗಳು ಕೂಡ ಭಾರತದ ಆಂತರಿಕ ವಿಷಯಗಳಲ್ಲಿ ತಲೆಹಾಕಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಈ ಬೆಳವಣಿಗೆಗಳನ್ನು ಅವಲೋಕಿಸುತ್ತಿದ್ದರೆ ಹಿಜಾಬ್ ವಿಷಯ ಇಟ್ಟುಕೊಂಡು ಭಾರತದ ವಿರುದ್ಧ ಷಡ್ಯಂತ್ರ ರೂಪಿಸುವ ಪ್ರಯತ್ನಗಳು ನಡೆದಂತಿದೆ. ಆದರೆ, ಇಂಥ ಕುತಂತ್ರಗಳನ್ನು ಮಣಿಸುವುದು ಮತ್ತು ದೇಶದೊಳಗಿನ ವಿವಾದಗಳನ್ನು ಸಮರ್ಥವಾಗಿ ನಿಭಾಯಿಸುವುದು ಈ ದೇಶಕ್ಕೆ ಗೊತ್ತು. ಪಾಕಿಸ್ತಾನವಾಗಲಿ, ಅಮೆರಿಕವಾಗಲಿ ಭಾರತದ ಆಂತರಿಕ ವಿಷಯಗಳಲ್ಲಿ ತಲೆಹಾಕಬಾರದು. ಸಾಮಾಜಿಕ ಜಾಲತಾಣಗಳ ನಕಲಿ ಖಾತೆಗಳ ಮುಖಾಂತರ ಸುಳ್ಳುಗಳನ್ನು ಹರಡುವುದರಿಂದ ಸತ್ಯವನ್ನು, ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳಲಿ.