ಕೌಟುಂಬಿಕ ಸಾಮರಸ್ಯ ಮುಖ್ಯ; ಕೋರ್ಟ್ ಕಟಕಟೆ ಏರುತ್ತಿರುವ ಪ್ರಕರಣಗಳು..

Family Court
Published on

ಪತಿಯಾದವನು ಪತ್ನಿಗೆ ಉನ್ನತ ವ್ಯಾಸಂಗ ಮಾಡೆನ್ನುವುದು, ಮಗು ಮಾಡಿಕೊಳ್ಳುವ ಕುರಿತು ಅನಿಸಿಕೆ ವ್ಯಕ್ತಪಡಿಸುವುದು ಮಾನಸಿಕ ಕ್ರೌರ್ಯವಲ್ಲ ಎಂದು ಕೌಟುಂಬಿಕ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ಹೇಳಿದೆ. ಪತಿ ಮತ್ತವರ ತಾಯಿಯ ವಿರುದ್ದ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಪಡಿಸಿ ತೀರ್ಪು ನೀಡಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕ್ಷುಲ್ಲಕ ಕಾರಣಗಳಿಗಾಗಿ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಿಸುವ ಹಾಗೂ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸುವ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಇದೊಂದು ಉದಾಹರಣೆ ಮಾತ್ರ.

ಇದೇ ವೇಳೆ ಕೇರಳ ಹೈಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡುತ್ತ, ಮಾನಸಿಕ ಕ್ರೌರ್ಯದ ಸಮಗ್ರ ವ್ಯಾಖ್ಯಾನ ನೀಡುವುದು ಕಷ್ಟ ಎಂದು ಹೇಳುವ ಮೂಲಕ ವಾಸ್ತವಾಂಶವನ್ನು ತೆರೆದಿಟ್ಟಿದೆ. ಪತ್ನಿಯನ್ನು ಇತರೆ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ದೈಹಿಕವಾಗಿ ಆಕರ್ಷಕವಾಗಿಲ್ಲವೆಂದು ಹೀಯಾಳಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಕೆಲ ದಿನಗಳ ಹಿಂದೆ ಸಂಸತ್ತಿನಲ್ಲಿ ಕೌಟುಂಬಿಕ ನ್ಯಾಯಾಲಯಗಳ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ 1984ರ ಪ್ರಕಾರ, ರಾಜ್ಯಸರ್ಕಾರಗಳು ಹತ್ತು ಲಕ್ಷಕ್ಕಿಂತ ಹೆಚ್ಚಿರುವ ಯಾವುದೇ ನಗರ ಅಥವಾ ಪಟ್ಟಣಗಳಲ್ಲಿ ಕಡ್ಡಾಯವಾಗಿ ಕೌಟುಂಬಿಕ ನ್ಯಾಯಾಲಯ ಸ್ಥಾಪಿಸಬೇಕು ಎಂಬ ಅಂಶವು ಈ ಮಸೂದೆಯಲ್ಲಿ ಸೇರಿದೆ. ದೇಶದಲ್ಲಿ ಸದ್ಯ 715 ಕೌಟುಂಬಿಕ ನ್ಯಾಯಾಲಯಗಳಿದ್ದು, 11 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ಕೌಟುಂಬಿಕ ನ್ಯಾಯಾಲಯ ಸ್ಥಾಪಿಸುವುದಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕೌಟುಂಬಿಕ ಪ್ರಕರಣಗಳ ಇತ್ಯರ್ಥಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕೆಂಬ ವಿಚಾರವು ಭಾರತದಂತಹ ಕುಟುಂಬ ಹಾಗೂ ಸಮುದಾಯಮುಖಿ ಸಮಾಜಕ್ಕೆ ಶೋಭೆ ತರುವ ಸಂಗತಿಯೇನಲ್ಲ. ಆದರೆ, ಪ್ರಕರಣಗಳ ಸಂಖ್ಯೆ ಏರುತ್ತಿರುವ ಕಳವಳಕಾರಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಂತಹ ನ್ಯಾಯಾಲಯಗಳ ಸ್ಥಾಪನೆಯು ಅನಿವಾರ್ಯವಾಗಿದೆ ಎನ್ನಬಹುದು. ನ್ಯಾಯಾಲಯದ ಕಟಕಟೆ ಏರುವ ಬಹುತೇಕ ಕೌಟುಂಬಿಕ ಪ್ರಕರಣಗಳು ಪತಿ ಹಾಗೂ ಪತ್ನಿ ನಡುವಿನ ವ್ಯಾಜ್ಯಗಳು ಹಾಗೂ ಮಾನಸಿಕ ಹಿಂಸೆಗೆ ಸಂಬಂಧಪಟ್ಟವುಗಳೇ ಆಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೂ ಕೌಟುಂಬಿಕ ಜಗಳಗಳು ನ್ಯಾಯಾಲಯದ ಅಂಗಳಕ್ಕೆ ಬರುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಹಿತಕರ ಸಂಗತಿಯಲ್ಲ. ಬದಲಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ವಿವಾಹವ್ಯವಸ್ಥೆಯು ಭಾರತದ ಸಾಮಾಜಿಕ ಹಂದರದ ಒಂದು ಮುಖ್ಯ ಹೆಗ್ಗುರುತಾಗಿದ್ದು, ಮದುವೆ ಎಂಬುದು ಇಬ್ಬರು ವ್ಯಕ್ತಿಗಳು ಒಂದಾಗುವುದಷ್ಟೇ ಅಲ್ಲ; ಬದಲಾಗಿ ಕುಟುಂಬ ಮತ್ತು ಸಮುದಾಯಗಳ ಸಂಗಮ ಕೂಡ ಹೌದು ಎಂದು ನಮ್ಮಲ್ಲಿ ಪರಿಗಣಿಸಲಾಗುತ್ತದೆ. ಕ್ಷುಲ್ಲಕ ಕಾರಣಗಳಿಗಾಗಿ ಮದುವೆ ಮುರಿದುಬೀಳುವುದು, ನ್ಯಾಯಾಲಯದ ಕಟಕಟೆ ಏರುವುದು ಅನುಕರಣೀಯ ಹಾಗೂ ಮಾದರಿ ಎಂದೇ ಬಿಂಬಿತವಾಗಿರುವ ಭಾರತೀಯ ಕುಟುಂಬ ವ್ಯವಸ್ಥೆಗೆ ಧಕ್ಕೆ ತರುವಂತಹುದು. ಸತಿ-ಪತಿ ನಡುವೆ ಹೊಂದಾಣಿಕೆ, ತಾಳ್ಮೆಯ ಸಹಜೀವನವೇ ಈ ಸಮಸ್ಯೆಗೆ ಸೂಕ್ತ ಪರಿಹಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net