

ಇಡೀ ಜಗತ್ತನ್ನು ಕಾಡುತ್ತಿರುವ ಕರೊನಾ ವೈರಸ್ ತನ್ನ ಪ್ರತಾಪ ಮುಂದುವರಿಸಿದೆ. ಕೆಲ ದೇಶಗಳಲ್ಲಿ ಕರೊನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದ್ದರೂ, ಹಲವು ದೇಶಗಳು ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿವೆ. ಭಾರತದಲ್ಲಿ ನಿತ್ಯದ ಕರೊನಾ ಪ್ರಮಾಣ 40-45 ಸಾವಿರ ಆಸುಪಾಸಿನಲ್ಲಿದೆ. ಈ ನಡುವೆ, ದೆಹಲಿಯಂತಹ ರಾಜ್ಯಗಳಲ್ಲಿ ವಾಯುಮಾಲಿನ್ಯ ಹೆಚ್ಚಿದ್ದು, ಕರೊನಾ ಸೋಂಕಿನ ಭೀತಿ ಮತ್ತಷ್ಟು ಅಧಿಕವಾಗಿದೆ. ಅತ್ತ, ಅಮೆರಿಕದಲ್ಲಿ ದಿನಂಪ್ರತಿ ಒಂದೂವರೆ ಲಕ್ಷಕ್ಕೂ ಅಧಿಕ ಕೇಸುಗಳು ವರದಿಯಾಗುತ್ತಿದ್ದು, ಆ ದೇಶ ಅಕ್ಷರಶಃ ಬಸವಳಿದಿದೆ. ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂತು ಎಂಬಂತೆ ತೋರಿದ ಕರೊನಾ ವೈರಸ್ ಹಾವಳಿ ಮುಂದುವರಿದೇ ಇದ್ದು, ಈ ಹಂತದಲ್ಲಿ ಮೈಮರೆಯದೆ ಕಟ್ಟೆಚ್ಚರವನ್ನು ಪಾಲಿಸಲೇಬೇಕಿದೆ. ಕಾಲಾನುಕಾಲಕ್ಕೆ ಸರ್ಕಾರಗಳು ಮತ್ತು ತಜ್ಞರು ನೀಡುವ ಸಲಹೆಗಳನ್ನು ಜನರು ಪಾಲಿಸುವ ಮೂಲಕ, ಕರೊನಾ ಸೋಂಕು ಹತೋಟಿಗೆ ಸಹಕರಿಸಬೇಕಾಗಿದೆ. ದೆಹಲಿಯನ್ನೇ ತೆಗೆದುಕೊಂಡರೆ, ಆರಂಭದಲ್ಲಿ ವಿಪರೀತ ಎಂಬಂತಿದ್ದ ಸೋಂಕು ಪ್ರಕರಣಗಳು ಕ್ರಮೇಣ ಇಳಿಗತಿಗೆ ಬಂದಿತ್ತು. ಆದರೆ ಈಗ ಮತ್ತೆ ಜೋರಾಗಿದೆ. ದೆಹಲಿ ಆಸುಪಾಸಿನ ರಾಜ್ಯಗಳಲ್ಲಿ ಕೃಷಿ ಬೆಳೆಗಳ ಕೂಳೆಗೆ ಬೆಂಕಿ ಹಚ್ಚುವುದು ಸಹ ವಾಯುಮಾಲಿನ್ಯ ಹೆಚ್ಚಳಕ್ಕೆ ಒಂದು ಮುಖ್ಯ ಕಾರಣ. ಹೀಗಾಗಿ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ, ಕೇಂದ್ರ ಸರ್ಕಾರ ಈ ಬಗ್ಗೆ ಈಚೆಗೆ ಕಾಯ್ದೆಯನ್ನೇ ರೂಪಿಸಿದೆ. ಆ ಪ್ರಕಾರ, ಕೃಷಿ ಬೆಳೆ ಕೂಳೆಗೆ ಬೆಂಕಿಹಚ್ಚುವುದು ಅಪರಾಧ. ಆದರೂ ಈ ಪ್ರವೃತ್ತಿ ನಿಂತಿಲ್ಲ ಎಂದು ವರದಿಗಳು ತಿಳಿಸುತ್ತವೆ. ಅದರೊಟ್ಟಿಗೆ, ವಾಯುಮಾಲಿನ್ಯ ಹೆಚ್ಚಳದ ಕಾರಣ ದೀಪಾವಳಿ ಸಂದರ್ಭದಲ್ಲಿ ಪಟಾಕಿಯನ್ನು ನಿಷೇಧಿಸಿದ್ದರೂ, ಕೆಲಮಟ್ಟಿಗೆ ನಿಯಮ ಉಲ್ಲಂಘನೆಯಾಗಿದೆ. ದೆಹಲಿ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ವಿಶೇಷ ಸಭೆ ನಡೆಸಿ ಪರಾಮಶಿಸಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಸೋಂಕು ಪ್ರಮಾಣ ಹೆಚ್ಚಬಹುದೆಂದು ತಜ್ಞರು ಮೊದಲೇ ಎಚ್ಚರಿಸಿದ್ದರು. ಹಾಗಂತ, ಹಬ್ಬಗಳ ಆಚರಣೆಯನ್ನು ಪೂರ್ತಿಯಾಗಿ ಕೈಬಿಡಲಾಗದು. ಸರ್ಕಾರಗಳು ವಿಧಿಸುವ ನಿಯಮಗಳನ್ನು ಪಾಲಿಸುತ್ತಲೇ ದೈನಂದಿನ ಚಟುವಟಿಕೆ ನಡೆಸಬೇಕಾಗುತ್ತದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಂತರದಲ್ಲಿ ಸೋಂಕು ಪ್ರಮಾಣ ವಿಪರೀತ ಹೆಚ್ಚಳವಾಗಿದೆ. ಅಲ್ಲಿನ ರಾಜಕೀಯ ಪರಿಸ್ಥಿತಿ ಸಹ ಈಗ ಅಸ್ಥಿರವಾಗಿರುವುದರಿಂದಾಗಿ ಆಡಳಿತ ವ್ಯವಸ್ಥೆ ಗೊಂದಲದಲ್ಲಿದ್ದು, ಕರೊನಾ ಹತೋಟಿ ಕ್ರಮಗಳು ಕಗ್ಗಂಟಾಗಿವೆ.
ಕರ್ನಾಟಕದಲ್ಲಿ ಏಳೆಂಟು ತಿಂಗಳ ನಂತರ, ಕಾಲೇಜುಗಳು ಮಂಗಳವಾರ ಪುನರಾರಂಭವಾಗುತ್ತಿವೆ. ಕಲಿಕೆಯ ದೃಷ್ಟಿಯಿಂದ ಇದು ಅನಿವಾರ್ಯವಾಗಿದ್ದರೂ, ಪಾಲಕರು, ಮಕ್ಕಳು ಮತ್ತು ಶಿಕ್ಷಕರು ಹೀಗೆ ಎಲ್ಲರಲ್ಲಿಯೂ ಒಂದು ಬಗೆಯ ಆತಂಕ ಇದ್ದೇ ಇದೆ. ದೈಹಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧಾರಣೆ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದನ್ನು ಮರೆಯಬಾರದು.
ಇಡೀ ವಿಶ್ವ ಕರೊನಾ ಲಸಿಕೆಗಾಗಿ ಕಾಯುತ್ತಿದೆ. ಹೊಸ ವರ್ಷಾರಂಭದಲ್ಲಿ ಇದು ಸಿಗುವ ಸಾಧ್ಯತೆ ಬಗ್ಗೆ ಕೆಲವರು ಆಶಾವಾದ ವ್ಯಕ್ತಪಡಿಸುತ್ತಿದ್ದಾರಾದರೂ, ಖಚಿತತೆಯಿಲ್ಲ. ಹೀಗಾಗಿ, ಸದ್ಯಕ್ಕೆ ಮುನ್ನೆಚ್ಚರಿಕೆಯೇ ಮದ್ದು ಎಂಬುದನ್ನು ಮರೆಯುವಂತಿಲ್ಲ. ಜನಜೀವನದ ಬಹುತೇಕ ಎಲ್ಲ ರಂಗಗಳು ಈಗ ಮೊದಲಿನ ಸ್ಥಿತಿಗೆ ಬಂದಿದ್ದು, ಈ ಹಂತದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕಿದೆ. ಇಲ್ಲವಾದಲ್ಲಿ ಈಗಾಗಲೇ ಸಾಕಷ್ಟು ಬೆಲೆ ತೆತ್ತಿರುವ ವಿಶ್ವ, ಇನ್ನಷ್ಟು ಅಪಾಯಕ್ಕೆ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ.