

ಭಾರತದ ಪ್ರಗತಿಯಲ್ಲಿ, ವಿಶೇಷವಾಗಿ ಗ್ರಾಮೀಣ ಭಾರತದ ಪ್ರಗತಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದು. ಕೃಷಿಕರು ಮತ್ತಿತರ ಜನವರ್ಗವನ್ನು ಖಾಸಗಿ ಹಿಡಿತದಿಂದ ತಪ್ಪಿಸುವಲ್ಲಿ ಈ ರಂಗದ ಕೊಡುಗೆ ಗಮನಾರ್ಹ. ನಮ್ಮ ದೇಶದಲ್ಲಿ ಒಂದೂಕಾಲು ಶತಮಾನದ ಹಿಂದೆಯೇ ಸಹಕಾರಿ ಸಂಘ ಸ್ಥಾಪನೆಯಾಗಿತ್ತು, ಅದರಲ್ಲೂ ನಮ್ಮ ಕರ್ನಾಟಕದ ಗದಗದ ಕಣಗಿನಹಾಳದಲ್ಲಿ ಮೊದಲ ಸಂಘ ತಲೆಯೆತ್ತಿದ್ದು ಹೆಮ್ಮೆಯ ಸಂಗತಿ. ಅಲ್ಲಿಂದಾಚೆಗೆ, ಸವಾಲುಗಳನ್ನು ಎದುರಿಸುತ್ತಲೇ ಬೆಳೆಯುತ್ತ ಬಂದ ಸಹಕಾರಿ ವಲಯ, ಈಗ ಅಗಾಧವಾಗಿ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ದೇಶದಲ್ಲೀಗ ಸುಮಾರು 63 ಸಾವಿರ ಕಾರ್ಯನಿರತ ಸಹಕಾರ ಸಂಘಗಳಿವೆ. ಈ ವಲಯವನ್ನು ಇನ್ನಷ್ಟು ಹಿಗ್ಗಿಸುವ ಉದ್ದೇಶದಿಂದ ಇನ್ನು ಐದು ವರ್ಷಗಳಲ್ಲಿ ದೇಶದ ವಿವಿಧೆಡೆಗಳಲ್ಲಿ ಎರಡು ಲಕ್ಷ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು (ಪಿಎಸಿಎಸ್) ಮತ್ತು ಹೈನು-ಮೀನುಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
‘ಹಾಲಿ ಎಲ್ಲಿ ಇಂಥ ಸಂಘಗಳಿಲ್ಲವೋ ಅಂಥ ಹಳ್ಳಿಗಳು ಮತ್ತು ಪಂಚಾಯತಗಳಲ್ಲಿ ಇವನ್ನು ಸ್ಥಾಪಿಸಲಾಗುವುದು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಕಳೆದ ವರ್ಷದ ಜೂನ್ನಲ್ಲಿ ಅನುಮೋದನೆ ನೀಡಿತ್ತು. ಸಂಘಗಳ ಕಾರ್ಯದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವುದು ಇದರ ಉದ್ದೇಶವಾಗಿತ್ತು. ಬೇರೆ ಬೇರೆ ಯೋಜನೆಗಳನ್ನು ಸೇರಿಸಿ ‘ಸಮಗ್ರ ಸರ್ಕಾರಿ’ ದೃಷ್ಟಿಕೋನದೊಂದಿಗೆ ಈ ನೂತನ ಸಂಘಗಳು ಅಸ್ವಿತ್ವಕ್ಕೆ ಬರಲಿವೆ. ಇದರಿಂದ ಆಧುನಿಕ ಮೂಲಸೌಕರ್ಯ ಹೊಂದಲು ಅನುಕೂಲವಾಗುತ್ತದೆ ಎಂದು ಸಚಿವ ಠಾಕೂರ್ ಹೇಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಸಂಘಗಳ ಸ್ಥಾಪನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಂತಹಂತವಾಗಿ ಬೃಹತ್ ಪ್ರಮಾಣದ ಉದ್ಯೋಗಸೃಷ್ಟಿಯ ಸಾಧ್ಯತೆಗಳು ಹಾಗೂ ಕೃಷಿ-ಆರ್ಥಿಕ ಚಟುವಟಿಕೆಗಳೂ ಹೆಚ್ಚುವುದು ನಿಚ್ಚಳ.
ಬದಲಾದ ಕಾಲಘಟ್ಟದಲ್ಲಿ, ಜಾಗತೀಕರಣದ ಕಾಲದಲ್ಲಿ ಕೃಷಿ ರಂಗ ಅನೇಕ ಸ್ಥಿತ್ಯಂತರಗಳಿಗೆ ಒಳಗಾಗಿದೆ. ಭೌಗೋಳಿಕ ಮಿತಿಯಿಲ್ಲದ ಹಾಗೆ ಅವಕಾಶಗಳು ತೆರೆದುಕೊಂಡಿವೆ; ಹಾಗೇ ಸಮಸ್ಯೆಗಳೂ ಎದುರಾಗಿವೆ. ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ವಲಸೆ ಇನ್ನೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ ಜನರಿಲ್ಲದೆ, ಕೃಷಿ ಕಾಯಕವೂ ಹಿಂದೆಬೀಳುವಂತಾಗಿದೆ. ಅತ್ತ, ನಗರಗಳ ಮೇಲಿನ ಒತ್ತಡ ಹೆಚ್ಚಿ, ಮೂಲಸೌಕರ್ಯ ಒದಗಿಸಲೂ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ನೆಲೆಗೊಂಡಿರುವ ಸಹಕಾರ ಸಂಘಗಳ ಪಾತ್ರ ಪ್ರಮುಖವಾದುದು. ಸ್ಥಳೀಯವಾಗಿ ಕೃಷಿಗೆ ಉತ್ತೇಜನ ನೀಡುವುದಲ್ಲದೆ, ಉದ್ಯೋಗವನ್ನೂ ಸೃಷ್ಟಿಸುವುದರಿಂದ ನಗರವಲಸೆಯನ್ನು ತಡೆಗಟ್ಟುವಲ್ಲಿ ಸ್ವಲ್ಪ ನೆರವಾಗಬಲ್ಲದು. ಆದರೆ ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವೀಯದೆ ಅವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮುಕ್ತ ವಾತಾವರಣ ಸೃಷ್ಟಿಸಬೇಕಾದುದು ಮುಖ್ಯ. ಇದರೊಂದಿಗೆ, ಸಾವಿರಾರು ಸಂಘಗಳು ನಿಷ್ಕ್ರಿಯವಾಗಿದ್ದು, ಅದಕ್ಕೆ ಕಾರಣ ಪತ್ತೆಹಚ್ಚಿ ಪುನಶ್ಚೇತನಗೊಳಿಸುವತ್ತಲೂ ಗಮನಹರಿಸಬಹುದಾಗಿದೆ. ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಸಹಕಾರ ಖಾತೆಯನ್ನು ಸೃಷ್ಟಿಸಲಾಗಿದ್ದು, ಇದರ ಯೋಜನೆಗಳು ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಎಲ್ಲರಿಗೂ ಕುತೂಹಲವಿದೆ.