ಸಂಪಾದಕೀಯ | ಹೈನುಗಾರಿಕೆಗೆ ಪ್ರೋತ್ಸಾಹ ಸಿಗಲಿ; ಸರ್ಕಾರ ಸೂಕ್ತ ಸೌಲಭ್ಯ ಒದಗಿಸುವುದು ಅಗತ್ಯ

Editorial
Published on

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಹಾಲು ಉತ್ಪಾದನೆಯಲ್ಲಿ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದ್ದಲ್ಲದೆ, ನಂದಿನಿಯ ಸಿಹಿ ಮತ್ತು ಇತರ ಉತ್ಪನ್ನಗಳ ಮಾರುಕಟ್ಟೆ ಜಾಲವನ್ನು ರಾಜ್ಯದ ಹೊರಗೂ ವಿಸ್ತರಿಸುವುದು ಗೊತ್ತಿರುವಂಥಧ್ದೇ. ಅಲ್ಲದೆ, ಹೈನು ಉದ್ಯಮದಲ್ಲಿ ಕೆಎಂಎಫ್ ದೇಶದಲ್ಲೇ ಎರಡನೇ ಸ್ಥಾನದಲ್ಲಿ ಇರುವುದು ಹೆಗ್ಗಳಿಕೆಯ ಸಂಗತಿಯೇ ಸರಿ. ಕಾಲಕಾಲಕ್ಕೆ ದರಗಳನ್ನು ಪರಾಮಶಿಸುವ ಕೆಎಂಎಫ್ ಪ್ರಸಕ್ತ ಹಾಲಿನ ದಾರವನ್ನು ಲೀಟರ್​ಗೆ 3 ರೂಪಾಯಿ ಹೆಚ್ಚಳ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅದು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಹಾಲಿ ಇರುವ 37 ರೂಪಾಯಿಯಿಂದ 40 ರೂ.ಗೆ ಏರಿಕೆ ಮಾಡಲು ಚಿಂತನೆ ನಡೆದಿದೆ. ಈ ಕ್ರಮದಿಂದ ಜನಸಾಮಾನ್ಯರಿಗೆ ಸ್ವಲ್ಪ ಹೊರೆಯಾದರೂ, ರೈತರಿಗೆ ಅನುಕೂಲವಾಗಲಿದೆ. ಮತ್ತೊಂದೆಡೆ, ನಂದಿನಿ ಉತ್ಪನ್ನಗಳ ಮಾರಾಟ ಜಾಲವನ್ನು ಮತ್ತಷ್ಟು ರಾಜ್ಯಗಳಿಗೆ ವಿಸ್ತರಿಸಲು ಬೆಳಗಾವಿ ಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ಆರಂಭಿಸಲಾಗುತ್ತಿದೆ. ಪಶು ಆಹಾರ ಘಟಕಗಳ ಸಾಮರ್ಥ್ಯವನ್ನೂ ವೃದ್ಧಿಸಲಾಗುತ್ತಿದೆ.

ಈ ಸುಧಾರಣೆಗಳ ಹೊರತಾ ಗಿಯೂ, ರೈತರು ಹೈನುಗಾರಿಕೆಯಿಂದ ದೊಡ್ಡ ಪ್ರಮಾಣದಲ್ಲಿ ಹಿಂದೆ ಸರಿಯುತ್ತಿರುವ ವಾಸ್ತವವನ್ನೂ ಈ ಹೊತ್ತಲ್ಲಿ ಮನಗಾಣಬೇಕಿದೆ. ಇದಕ್ಕೆ ಪ್ರಮುಖ ಕಾರಣ ಹೈನುಗಾರಿಕೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾಲ-ಕಾಲಕ್ಕೆ ಸೂಕ್ತ ಸ್ಪಂದನೆ ಸಿಗದಿರುವುದು ಮತ್ತು ಈ ಕ್ಷೇತ್ರಕ್ಕೆ ಸೂಕ್ತ ಉತ್ತೇಜನ, ಪ್ರೋತ್ಸಾಹ ಸಿಗದಿರುವುದು. ‘ಹೈನುಗಾರಿಕೆಯಲ್ಲಿ ಹೆಚ್ಚಿನ ರೈತರು ತೊಡಗಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು’ ಎಂಬ ಭಾಷಣಗಳು ವೇದಿಕೆಯಿಂದ ಹೊಮ್ಮುತ್ತವೆಯಾದರೂ, ಅನುಷ್ಠಾನದ ಪ್ರಶ್ನೆ ಬಂದಾಗ ಸೌಲಭ್ಯ, ಬೆಂಬಲದ ಕೊರತೆ ಢಾಳಾಗಿ ಕಂಡುಬರುತ್ತದೆ. ಕೃಷಿಆದಾಯವನ್ನಷ್ಟೇ ರೈತರು ನೆಚ್ಚಿಕೊಳ್ಳುವ ಸ್ಥಿತಿ ಇಲ್ಲದಿರುವುದರಿಂದ ಪಶುಸಂಗೋಪನೆ, ಹೈನುಗಾರಿಕೆ, ಮರಗಳ ಕೃಷಿಯಂಥ ಪರ್ಯಾಯ ಆದಾಯ ಮೂಲಗಳತ್ತ ಹೊರಳುವುದು ಅನಿವಾರ್ಯವೂ ಆಗಿದೆ. ಇಲ್ಲಿ ರೈತರ ಪ್ರಯತ್ನದ ಜತೆಗೆ, ಸರ್ಕಾರದ ಬೆಂಬಲ ಜತೆಗೂಡಿದಾಗ ಮಾತ್ರ ಪರಿಣಾಮಕಾರಿ ಫಲಿತಾಂಶ ಸಿಗಲು ಸಾಧ್ಯ. ಈ ವಾಸ್ತವಗಳ ಅರಿವು ಸರ್ಕಾರಕ್ಕೆ ಇದ್ದೇ ಇದೆ. ಆದರೆ, ಹೈನುಗಾರಿಕೆ ಅಭಿವೃದ್ಧಿಪಡಿಸುವಂಥ ಸಮರ್ಥ ಕಾರ್ಯಕ್ರಮಗಳನ್ನು ರೂಪಿಸುವ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಹೊಣೆಗಾರಿಕೆಯನ್ನು ಇನ್ನಷ್ಟು ಬದ್ಧತೆಯಿಂದ ನಿರ್ವಹಿಸಬೇಕಿದೆ. ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವವರಿಗೂ ಅದರ ಲಾಭಗಳು ಸಿಗುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net