ಮಹತ್ವದ ಮುನ್ನಡೆ; ಮಕ್ಕಳಿಗೆ ಕೋವಿಡ್ ಲಸಿಕೆ..

Editorial
Published on

ದೇಶ ಕಳೆದ ಹದಿನೆಂಟು ತಿಂಗಳಿಂದ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಸೋಂಕಿನ ಮೊದಲನೇ ಮತ್ತು ಎರಡನೇ ಅಲೆಯ ಹೊತ್ತಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು ಗೊತ್ತಿರುವಂಥದ್ದೇ. ಕರೊನಾ ವಿರುದ್ಧ ಲಸಿಕೆ ನೀಡುವ ಕಾರ್ಯ ಈ ವರ್ಷದ ಆದಿಯಲ್ಲೇ ಆರಂಭವಾಯಿತಾದರೂ, ಈ ಅಭಿಯಾನ ವೇಗ ಪಡೆದಿರುವುದು ಕಳೆದ ಮೂರ್ನಾಲ್ಕು ತಿಂಗಳುಗಳಿಂದ. ದೇಶದಲ್ಲಿ ಈವರೆಗೆ 96 ಕೋಟಿ ಜನರು ಮೊದಲ ಡೋಸ್ ಪಡೆದಿರುವುದು ದಾಖಲೆಯೇ ಸರಿ. ಕೆಲ ದಿನಗಳಲ್ಲೇ ಈ ಸಂಖ್ಯೆ 100 ಕೋಟಿಗೆ ತಲುಪಲಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬದ್ಧತೆಗೆ ಸಾಕ್ಷಿ ಎನ್ನಬಹುದು. ಎರಡನೇ ಅಲೆ ಹತೋಟಿಗೆ ಬಂದಿದೆಯಾದರೂ, ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಆತಂಕ. ಈ ನಡುವೆ ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಹಾಜರಾತಿ ಪ್ರಮಾಣವೂ ಕ್ರಮೇಣ ಹೆಚ್ಚುತ್ತಿದೆ. ಶಾಲೆ ಆರಂಭಿಸುವ ಮುನ್ನ ಶಿಕ್ಷಕರಿಗೆ ಲಸಿಕೆ ನೀಡಲಾಯಿತಾದರೂ, ಮಕ್ಕಳಿಗೆ ಯಾವಾಗ ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತಿತ್ತು. ಅದೆಷ್ಟೋ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಸಮಾಧಾನದ ಸಂಗತಿ ಎಂದರೆ, 2ರಿಂದ 18 ವಯೋಗುಂಪಿನ ಮಕ್ಕಳಿಗೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಷಯ ತಜ್ಞರ ಸಮಿತಿ (ಎಸ್​ಇಸಿ) ಷರತ್ತುಬದ್ಧ ಅನುಮತಿ ನೀಡಿದೆ. ಎಸ್​ಇಸಿ ತನ್ನ ಶಿಫಾರಸುಗಳನ್ನು ಭಾರತದ ಔಷಧ ಮಹಾ ನಿರ್ದೇಶಕರಿಗೆ (ಡಿಸಿಜಿಐ) ಕಳಿಸಿದ್ದು, ಶೀಘ್ರವೇ ಹಸಿರು ನಿಶಾನೆ ತೋರುವ ಸಾಧ್ಯತೆಯಿದೆ. ಈಗಾಗಲೇ 18 ವರ್ಷ ಮೀರಿದ ಎಲ್ಲ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾದರೆ ಕರೊನಾ ವಿರುದ್ಧದ ಸಮರದಲ್ಲಿ ದೇಶ ಮಹತ್ವದ ಮೈಲಿಗಲ್ಲನ್ನು ಸಾಧಿಸಿದಂತೆ. ಹೈದರಾಬಾದ್​ನ ಭಾರತ್ ಬಯೋಟೆಕ್ 18 ವರ್ಷದೊಳಗಿನ ಮಕ್ಕಳ ಮೇಲೆ ಲಸಿಕೆಯ 2 ಹಾಗೂ 3ನೇ ಹಂತದ ಪರೀಕ್ಷೆಗಳನ್ನು ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಿ ಪರೀಕ್ಷೆಯ ದತ್ತಾಂಶವನ್ನು ಈ ತಿಂಗಳ ಆರಂಭದಲ್ಲಿ ಡಿಸಿಜಿಐಗೆ ಸಲ್ಲಿಸಿತ್ತು ಎಂಬುದು ಗಮನಾರ್ಹ.

ಅಂತಾರಾಷ್ಟ್ರೀಯ ವಲಯವನ್ನು ಗಮನಿಸಿದಾಗ, 12 ವರ್ಷದೊಳಗಿನ ಮಕ್ಕಳಿಗೆ ಫೈಜರ್ ಲಸಿಕೆ ನೀಡಲು ಬ್ರಿಟನ್ ಜುಲೈ 19ರಂದು ಅನುಮತಿ ನೀಡಿದೆ. ಇಸ್ರೇಲ್ 16 ವರ್ಷದವರೆಗಿನ ಮಕ್ಕಳಿಗೆ ಈ ವರ್ಷದ ಜನವರಿಯಿಂದಲೇ ಲಸಿಕೆ ನೀಡುತ್ತಿದೆ. ಕೆನಡಾ ಒಂದು ಹೆಜ್ಜೆ ಮುಂದೆ ಹೋಗಿ 2020ರ ಡಿಸೆಂಬರ್​ನಿಂದಲೇ 16 ವರ್ಷದವರೆಗಿನ ಮಕ್ಕಳಿಗೆ ಲಸಿಕೆ ನೀಡುತ್ತಿದೆ. ಮಾಲ್ಟಾ, ಚಿಲಿಯಂಥ ಪುಟ್ಟ ರಾಷ್ಟ್ರಗಳಲ್ಲೂ ಈ ಪ್ರಕ್ರಿಯೆ ಆರಂಭವಾಗಿದೆ. ಕಳೆದ ಕೆಲವು ತಿಂಗಳಲ್ಲೇ ಭಾರತದಲ್ಲಿ ಸಾವಿರಾರು ಮಕ್ಕಳು ಸೋಂಕಿತರಾಗಿದ್ದು, ಕೆಲವರು ಗಂಭೀರ ಲಕ್ಷಣ ಹೊಂದಿದ್ದಾರೆ. ಲಸಿಕೆ ಶೀಘ್ರದಲ್ಲೇ ಬರುವಂತಾದರೆ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚುವಲ್ಲಿ, ಕರೊನಾ ನಿಯಂತ್ರಿಸುವಲ್ಲಿ ಮಹತ್ವಪೂರ್ಣ ಮತ್ತು ನಿರ್ಣಾಯಕ ಕ್ರಮವಾಗಬಲ್ಲದು. ಈ ಅಭಿಯಾನವನ್ನು ವ್ಯವಸ್ಥಿತವಾಗಿ, ಕಾಳಜಿಯಿಂದ ನಿರ್ವಹಿಸಬೇಕಾದ ಹೊಣೆಗಾರಿಕೆ ವ್ಯವಸ್ಥೆಯ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net