

ಆಧಾರ್ ಕಾರ್ಡ್ ಈಗ ಪ್ರತಿಯೊಬ್ಬ ಭಾರತೀಯನನ್ನು ಗುರುತಿಸುವ ಮಹತ್ವದ ದಾಖಲೆಯಾಗಿ ರೂಪುಗೊಂಡಿದೆ. ಈ ಕಾರ್ಡ್ ಇಲ್ಲದಿರುವ ವ್ಯಕ್ತಿಯು ದಾಖಲೆಗಳ ಪ್ರಕಾರ ಅಸ್ತಿತ್ವದಲ್ಲಿ ಇದ್ದಾನೋ ಇಲ್ಲವೋ ಎಂದು ಪ್ರಶ್ನಿಸುವಷ್ಟು ಪ್ರಾಮುಖ್ಯ ಇದಕ್ಕಿದೆ. 2010ರ ಸೆಪ್ಟೆಂಬರ್ನಲ್ಲಿ ಆಧಾರ್ ಕಾರ್ಡ್ ವ್ಯವಸ್ಥೆ ಜಾರಿಗೆ ಬಂದಿತು. ಇದಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ರಚಿಸಲಾಯಿತು (ಯುಐಡಿಎಐ). ಪ್ರತಿ ವ್ಯಕ್ತಿಗೆ 12 ಅಂಕಿಗಳಿರುವ ಪ್ರತ್ಯೇಕವಾದ ಸಂಖ್ಯೆ ನೀಡುವ ಮೂಲಕ ಈ ವಿಶಿಷ್ಟ ಕಾರ್ಡ್ ರೂಪಿಸಲಾಗಿದೆ. ಸರ್ಕಾರದ ವಿವಿಧ ಯೋಜನೆ- ಕಾರ್ಯಕ್ರಮಗಳ ಫಲಾನುಭವಿಗಳಾಗಲು; ಸಬ್ಸಿಡಿ, ಪಿಂಚಣಿ ಪಡೆದುಕೊಳ್ಳಲು; ಬ್ಯಾಂಕ್ ಮತ್ತು ಡಿಜಿಟಲ್ ಹಣದ ವಹಿವಾಟು ಕೈಗೊಳ್ಳಲು; ಪಾಸ್ಪೋರ್ಟ್, ಪಾನ್ ಕಾರ್ಡ್ ಪಡೆಯಲು; ಆಸ್ತಿ ಖರೀದಿ ಸೇರಿದಂತೆ ಹಲವಾರು ನೋಂದಣಿ ಪ್ರಕ್ರಿಯೆಗಳಲ್ಲಿ... ಹೀಗೆ ಅನೇಕ ವ್ಯವಹಾರಗಳಿಗೆ ಗುರುತಿನ ಚೀಟಿಯಾಗಿ ಹಾಗೂ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಅಗತ್ಯವಾಗಿದೆ. ಆದರೆ ಆಧಾರ್ ದುರ್ಬಳಕೆ ಅಥವಾ ಅಕ್ರಮ ಕಾರ್ಡ್ ನೀಡಿಕೆ ವಿಚಾರ ಕಳವಳಕ್ಕೂ ಕಾರಣವಾಗಿದೆ. ಭಾರತೀಯರಿಗೆ ಮಾತ್ರ ಗುರುತಿನ ಚೀಟಿಯಾಗಿ ದೊರೆಯಬೇಕಾದ ಈ ಕಾರ್ಡನ್ನು ಅನ್ಯದೇಶಿಯರು ಅಕ್ರಮವಾಗಿ ಪಡೆದುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣ ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ.
ವೈದ್ಯರ ಹೆಸರಿನ ನಕಲಿ ಸೀಲ್, ಗೆಜೆಟೆಡ್ ಅಧಿಕಾರಿಗಳ ನಕಲಿ ಲೆಟರ್ಹೆಡ್ ಮುಂತಾದವುಗಳ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೇವಲ 500ರಿಂದ 1000 ರೂಪಾಯಿಗೆ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಮಾಡಿಕೊಡುತ್ತಿರುವ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಪೊಲೀಸರು ಇಂತಹ ವ್ಯವಸ್ಥಿತ ಜಾಲವೊಂದನ್ನು ಭೇದಿಸಿ 9 ಜನರನ್ನು ಬಂಧಿಸಿದ್ದಾರೆ. ಆಧಾರ್ ಕಾರ್ಡ್ ಪಡೆದುಕೊಂಡ ಕೆಲ ಬಾಂಗ್ಲಾದೇಶಿಯರು ಕಳ್ಳತನದಲ್ಲಿ ಭಾಗಿಯಾಗಿದ್ದು, ಈ ಪೈಕಿ ಒಬ್ಬ 13 ಬ್ಯಾಂಕ್ ಖಾತೆಗಳ ಮೂಲಕ ಒಂದು ವರ್ಷದಲ್ಲಿ 4 ಕೋಟಿ ರೂಪಾಯಿ ಹಣವನ್ನು ತನ್ನ ದೇಶಕ್ಕೆ ವರ್ಗಾವಣೆ ಮಾಡಿದ್ದಾನೆ. ಆಧಾರ್ ಕಾರ್ಡನ್ನು ವಿದೇಶಿಯರು ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂಬುದನ್ನು ತೋರಿಸಲು ಇದೊಂದೇ ಪ್ರಕರಣ ಸಾಕು. ಇಷ್ಟೊಂದು ಪ್ರಮಾಣದಲ್ಲಿ ಹಣ ವರ್ಗಾವಣೆ ಆಗಿರುವುದನ್ನು ನೋಡಿದರೆ, ಇಲ್ಲಿ ಭಯೋತ್ಪಾದನೆ ನಂಟು ಬೆಸೆದಿರುವ ಶಂಕೆಯೂ ವ್ಯಕ್ತವಾಗಿದೆ. ದೇಶದ ಭದ್ರತೆ ಹಾಗೂ ಆರ್ಥಿಕತೆ ದೃಷ್ಟಿಯಿಂದ ಇಂತಹ ದುರ್ಬಳಕೆ ಪ್ರಕರಣಗಳು ತೀರ ಅಪಾಯಕಾರಿ.
ತಹಸೀಲ್ದಾರ್, ಪಂಚಾಯತ್ ಹಾಗೂ ಇನ್ನಿತರೆ ಗೆಜೆಟೆಡ್ ಅಧಿಕಾರಿಗಳು ಒಬ್ಬ ವ್ಯಕ್ತಿಯು ಸ್ಥಳೀಯನಾಗಿದ್ದಾನೆ ಎಂದು ಕೊಡುವ ಪ್ರಮಾಣಪತ್ರ ಬಳಸಿಕೊಂಡು ಆಧಾರ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಪ್ರಸ್ತುತ ಬಾಂಗ್ಲಾದೇಶಿಗರ ಪ್ರಕರಣದಲ್ಲೂ ಇಂತಹ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆಯೂ ಆಧಾರ್ ಸುರಕ್ಷತೆ ವಿಚಾರ ಮುನ್ನೆಲೆಗೆ ಬಂದಿದ್ದುಂಟು. ಇದಲ್ಲದೆ, ಮೊಬೈಲ್ ಇತ್ಯಾದಿ ಖಾಸಗಿ ಸೇವೆಗೂ ಆಧಾರ್ ಕಾರ್ಡ್ ಕೇಳಲಾಗುತ್ತದೆ. ಹೀಗಾಗಿ ಆಧಾರ್ ಕಾರ್ಡ್ ಸರ್ವವಿಧದಲ್ಲೂ ಸುರಕ್ಷಿತ; ವ್ಯಕ್ತಿಯ ಖಾಸಗಿ ಮಾಹಿತಿ ಬಹಿರಂಗವಾಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕಿದೆ. ಈ ಗುರುತಿನ ಚೀಟಿ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ.