

ಶಿಕ್ಷಣದ ಗುರಿ ಬರೀ ಉದ್ಯೋಗ ಪಡೆಯುವುದಲ್ಲ. ಸ್ವಾವಲಂಬಿ ಬಾಳು ರೂಪಿಸಿಕೊಳ್ಳುವ ಜತೆಗೆ, ಇತರರ ಬದುಕನ್ನು ಕಟ್ಟುವ, ಅದಕ್ಕಾಗಿ ಬೇಕಾದ ಆತ್ಮವಿಶ್ವಾಸ, ಸಾಮರ್ಥ್ಯ ಪಡೆದುಕೊಳ್ಳುವ ಆಶಯವೂ ಗರಿಗೆದರಬೇಕು. ಬಹುತೇಕ ಯುವಕರು ‘ನೌಕರಿ ಗಿಟ್ಟಿಸುವುದು ಹೇಗೆ?’ ಎಂಬ ಬಗ್ಗೆ ಯೋಚಿಸುತ್ತಾರೆಯೇ ಹೊರತು, ತಾವೇ ಉದ್ಯೋಗದಾತರಾಗುವ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ನಿಧಾನವಾಗಿ ಚಿಂತನೆ ಬದಲಾಗುತ್ತಿರುವುದು ಸಮಾಧಾನಕರ ಸಂಗತಿ. ನವೋದ್ಯಮಿಗಳಾಗುವ ಉತ್ಸಾಹ ಬಲವಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ನವೋದ್ಯಮ ಆರಂಭಿಸಿ, ಯಶಸ್ಸು ಸಾಧಿಸಿದವರು ಪ್ರೇರಣೆ ನೀಡುತ್ತಿದ್ದಾರೆ. ಅಲ್ಲದೆ, ವಿವಿಧ ರಂಗಗಳಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದ್ದು, ಅದನ್ನು ಗುರುತಿಸುವ ಮತ್ತು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯುವಸಮುದಾಯ ಉತ್ಸಾಹ ತೋರಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಹೊಸ ಹೆಜ್ಜೆ ಇರಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ.
ಯುವಸಮೂಹ ಉದ್ಯೋಗ ಅವಕಾಶ ಗಳನ್ನು ಹುಡುಕುವುದಕ್ಕಿಂತ, ಅವರೆದುರು ಆರ್ಥಿಕ ಅವಕಾಶಗಳನ್ನೇ ತೆರೆದಿಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ‘ಸ್ಥಳೀಯ ಉದ್ಯಮ-ಸ್ಥಳೀಯ ಉದ್ಯೋಗ’ ಪರಿಕಲ್ಪನೆಗೆ ಒತ್ತು ನೀಡಲಾಗುತ್ತದೆ. 2025ಕ್ಕೆ ಒಂದು ಕೋಟಿ ಆರ್ಥಿಕ ಅವಕಾಶ ತೆರೆದಿಡುವುದಕ್ಕೆ ಸಂಬಂಧಿಸಿದಂತೆ ನೀಲಿನಕ್ಷೆ ಸಿದ್ಧಪಡಿಸಲು ರಚನೆಯಾಗಿರುವ ತಜ್ಞರನ್ನೊಳಗೊಂಡ ಕರ್ನಾಟಕ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆ ಇದೇ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇದೊಂದು ತಾಜಾ ಚಿಂತನೆಯಾಗಿದ್ದು, ಆರ್ಥಿಕಾವಕಾಶಗಳನ್ನು ಮನದಟ್ಟು ಮಾಡಿಕೊಟ್ಟು, ಆ ಬಗೆಗೆ ಸೂಕ್ತ ತರಬೇತಿ ನೀಡಿದರೆ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಬಹುದು. ಬದಲಾದ ಕಾಲಮಾನ, ತಂತ್ರಜ್ಞಾನಕ್ಕೆ ತಕ್ಕಂತೆ ವಿತ್ತೀಯ ಅವಕಾಶಗಳು ಸೃಷ್ಟಿಯಾದರೆ, ಅವುಗಳ ಸದ್ಬಳಕೆಯಾದರೆ ಅಭಿವೃದ್ಧಿ ನಿಟ್ಟಿನಲ್ಲೂ ಮಹತ್ವದ ಮೈಲಿಗಲ್ಲು ದಾಖಲಿಸಬಹುದು. ಯುವಕರಿಗೆ ಬರೀ ‘ನವೋದ್ಯಮಿಗಳಾಗಿ’ ಎಂದು ಕರೆ ನೀಡಿದರೆ ಪ್ರಯೋಜನವಿಲ್ಲ. ಅದಕ್ಕೆ ತಕ್ಕ ವಾತಾವರಣ ರೂಪಿಸುವುದು, ಅವಕಾಶಗಳನ್ನು ಹೆಚ್ಚಿಸುವುದು, ಪ್ರೋತ್ಸಾಹದಾಯಕ ನೀತಿ ರೂಪಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡರೆ ಸಕಾರಾತ್ಮಕ ಫಲಿತಾಂತ ಸಿಗಲು ಸಾಧ್ಯ.
ಕಾರ್ಯಪಡೆ ಈ ಸಂಬಂಧ ಮಹತ್ವದ ಅಂಶಗಳನ್ನೇ ಗುರುತಿಸಿದೆ. ಬೆಂಗಳೂರಿನ ಜತೆಗೆ ಜಿಲ್ಲಾ ಮಟ್ಟದಲ್ಲಿರುವ ಅವಕಾಶಗಳ ಬಗ್ಗೆ ವಿವರಿಸುವುದು, ಉದ್ಯೋಗದಾತರಾಗುವಂತೆ ಶಾಲಾ, ಕಾಲೇಜುಗಳ ಹಂತದಲ್ಲಿಯೇ ಶಿಕ್ಷಣದ ಮೂಲಕ ಪ್ರೋತ್ಸಾಹ, ಯುವ ಉದ್ಯಮಿಗಳ ಸೃಷ್ಟಿಗೆ ಕಾಲೇಜು ಮಟ್ಟದಲ್ಲಿ ತರಬೇತಿ, ಕೃಷಿ ಮತ್ತು ಕೃಷಿ ತಂತ್ರಜ್ಞಾನ ಬಗ್ಗೆ ಅಧ್ಯಯನ ಸೇರಿದಂತೆ ಹಲವು ಪ್ರಾಯೋಗಿಕ ಅಂಶಗಳು ಸಮರ್ಪಕವಾಗಿ ಜಾರಿಯಾದರೆ ನವೋದ್ಯಮ ಕ್ಷೇತ್ರ ಕರ್ನಾಟಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಬಲ್ಲದು. ಈ ನಿಟ್ಟಿನಲ್ಲಿ ಸೂಕ್ತ ಅರಿವು ಮೂಡಿಸಬೇಕು ಮತ್ತು ಜಿಲ್ಲಾ ಮಟ್ಟದಲ್ಲೂ ನವೋದ್ಯಮಗಳು ಆರಂಭಿಸಲು ಪೂರಕ ವಾತಾವರಣ ಸೃಷ್ಟಿಯಾಗಬೇಕು. ಆಗ ಮಾತ್ರ ಉದ್ಯೋಗಕ್ಕಾಗಿ ನಡೆಯುವ ಮಹಾವಲಸೆ ಮತ್ತು ಪ್ರತಿಭಾ ಪಲಾಯನ ಎರಡೂ ತಪ್ಪುತ್ತದೆ.