

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ನೀಡಿರುವ ತೀರ್ಪು ಮಹತ್ವದ ಮೈಲಿಗಲ್ಲಾಗಿದೆ. ಎಸಿಬಿಯನ್ನು ರದ್ದುಮಾಡಿ, ಅದರ ಬಳಿ ಇರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ಹಸ್ತಾಂತರಿಸಲು ನ್ಯಾಯಾಲಯ ಸೂಚಿಸಿರುವುದು ಭ್ರಷ್ಟರ ವಿರುದ್ಧದ ಹೋರಾಟಕ್ಕೆ ಬಲತುಂಬುವ ಕ್ರಮ ಎಂದೇ ಪರಿಗಣಿಸಬಹುದಾಗಿದೆ. ಹಲ್ಲಿಲ್ಲದ ಹಾವಿನಂತಾಗಿದ್ದ ಲೋಕಾಯುಕ್ತ ಸಂಸ್ಥೆಗೆ ಈ ಮೂಲಕ ಆನೆಬಲ ಬಂದಂತಾಗಿದೆ. ಈಗ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸಿಬಿ ರಚನೆಯಾಗಿತ್ತು. 2016ರಲ್ಲಿ ಸಿದ್ದರಾಮಯ್ಯಸರ್ಕಾರವು ಎಸಿಬಿಯನ್ನು ರಚನೆ ಮಾಡಿ, ಸ್ವತಂತ್ರವಾಗಿ ತನಿಖೆ ಮಾಡುವ ಅಧಿಕಾರವನ್ನು ಲೋಕಾಯುಕ್ತದಿಂದ ಕಿತ್ತುಕೊಂಡಿತ್ತು. ತನಗೆ ಬಂದ ದೂರುಗಳ ತನಿಖೆಯನ್ನು ಕೂಡ ಎಸಿಬಿಗೆ ವರ್ಗಾಯಿಸುವ ಕೆಲಸ ಮಾತ್ರ ಲೋಕಾಯುಕ್ತಕ್ಕೆ ಉಳಿದುಕೊಂಡಿತ್ತು. ಎಸಿಬಿ ಸ್ವತಂತ್ರ ತನಿಖಾ ಸಂಸ್ಥೆಯಾಗಿರಲಿಲ್ಲ. ನೇರವಾಗಿ ಸರ್ಕಾರದ ಅಡಿಯಲ್ಲೇ ಬರುವ ಪೊಲೀಸ್ ಇಲಾಖೆಯ ಒಂದು ವಿಭಾಗ ಮಾತ್ರವಾಗಿತ್ತು. ಹೀಗಾಗಿ, ಆಂತರಿಕ ಒತ್ತಡ ಮತ್ತು ಪರೋಕ್ಷ ನಿಯಂತ್ರಣದಿಂದಾಗಿ ಪ್ರಕರಣಗಳ ತನಿಖೆಯನ್ನು ಸೂಕ್ತವಾಗಿ ನಿಭಾಯಿಸುವಂತಹ ವಾತಾವರಣ ಇರಲಿಲ್ಲ ಎಂಬ ಟೀಕೆಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇದ್ದವು. ವಿವಿಧ ದೂರುಗಳ ತನಿಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಎಸಿಬಿಯನ್ನು ಈಚಿನ ದಿನಗಳಲ್ಲಿ ನ್ಯಾಯಾಲಯವು ಮೇಲಿಂದ ಮೇಲೆ ತರಾಟೆಗೂ ತೆಗೆದುಕೊಂಡಿತ್ತು. ಎಸಿಬಿಯು ಕಲೆಕ್ಷನ್ ಸೆಂಟರ್ ಆಗಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತಿದೆ ಎಂದು ಕಟುವಾಗಿ ಟೀಕಿಸಿತ್ತು.
ಎಸಿಬಿಗೆ ಹೋಲಿಸಿದರೆ ಲೋಕಾಯುಕ್ತ ಸಂಸ್ಥೆಯ ಮೂಲಕ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ಕೈಗೊಳ್ಳುವುದು ಹೆಚ್ಚು ಸೂಕ್ತವಾಗಿದೆ. ಏಕೆಂದರೆ, ಒಂದು ಸ್ವತಂತ್ರ ಸಂಸ್ಥೆಯಾಗಿದೆ. ಸರ್ಕಾರದ ಅಧೀನ ಸಂಸ್ಥೆಯೂ ಅಲ್ಲ. ಎಸಿಬಿಯ ತನಿಖೆಯು ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಲೋಕಾಯುಕ್ತವು ಮುಖ್ಯಮಂತ್ರಿ, ಮಂತ್ರಿ, ಶಾಸಕರ ವಿರುದ್ಧವೂ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿದೆ. ಹೀಗಾಗಿಯೇ ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶದಿಂದ ಎಸಿಬಿ ರಚಿಸಲಾಗಿತ್ತು ಎಂಬ ಟೀಕೆಗಳು ವ್ಯಕ್ತವಾಗುತ್ತಲೇ ಇದ್ದವು. ನ್ಯಾಯಾಲಯದ ತೀರ್ಪಿನಿಂದಾಗಿ, ತಾನೇ ಸ್ವತಂತ್ರವಾಗಿ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಸಿಗುವ ಸಾಧ್ಯತೆ ಇದೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ವೇಳೆ ಒಂದು ಪೊಲೀಸ್ ಠಾಣೆಯ ರೀತಿಯಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಹೀಗಾಗಿಯೇ ಭ್ರಷ್ಟಾಚಾರಗೈಯುವ ಅಧಿಕಾರಿ ಗಳು ಹಾಗೂ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಬಹುದೆಂದು ಜನರ ನಿರೀಕ್ಷೆ. ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಸುಹೊಕ್ಕೆಂಬುದು ಜನಜನಿತ. ಈ ಪಿಡುಗಿನ ವಿರುದ್ಧ ಕ್ರಮ ಕೈಗೊಳ್ಳಲು ಒಂದು ಸಶಕ್ತ ಸಂಸ್ಥೆ ಬೇಕಾಗುತ್ತದೆ. ಅಂಥದೊಂದು ಸಂಸ್ಥೆ ಇದೆ ಎಂಬುದೇ ಸ್ವಲ್ಪಮಟ್ಟಿಗಾದರೂ ಹೆದರಿಕೆ ಹುಟ್ಟಿಸುತ್ತದೆ. ಹಾಗಿಲ್ಲವಾದಲ್ಲಿ ತಮ್ಮನ್ನು ಕೇಳುವವರಿಲ್ಲ ಎಂಬ ಭಾವನೆ ಅಧಿಕಾರಶಾಹಿ, ಜನಪ್ರತಿನಿಧಿಗಳಲ್ಲಿ ಬೇರೂರುತ್ತದೆ. ಪ್ರಜಾಪ್ರಭುತ್ವದಲ್ಲಿ ಇಂಥ ಪ್ರವೃತ್ತಿ ಅಪಾಯಕಾರಿ.