ರೈತರ ಸಂಕಷ್ಟ ನಿವಾರಿಸಿ; ಶಾಸಕರು ಬದ್ಧತೆ ಪ್ರದರ್ಶಿಸಬೇಕು...

Editorial
Published on

ಚುನಾವಣೆ ಹೊತ್ತಲ್ಲಿ ಭರವಸೆಗಳ ಮಳೆಯನ್ನೇ ಸುರಿಸುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆದ್ದು ಬಂದ ಬಳಿಕ ಪ್ರಮುಖ ಸಮಸ್ಯೆಗಳತ್ತಲೂ ಬೆನ್ನು ತೋರುತ್ತಾರೆ. ಇದರಿಂದ ಭ್ರಮನಿರಸನರಾಗುವುದು, ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯ ಜನರೇ. ಅದರಲ್ಲೂ, ಪ್ರತಿ ಚುನಾವಣೆಯ ಹೊತ್ತಲ್ಲಿ ರೈತರ ಸಮಸ್ಯೆಗಳ ಬಗ್ಗೆ ದೊಡ್ಡ ದನಿಯಲ್ಲಿ ಚರ್ಚೆ ನಡೆದು, ಆಶ್ವಾಸನೆಗಳು ಹೊಮ್ಮುತ್ತವೆ. ಬಗರ್​ಹುಕುಂ ಅರ್ಜಿಗಳ ಇತ್ಯರ್ಥದ ಆಶ್ವಾಸನೆಯೂ ಹೀಗೆ ಮೂಲೆಗುಂಪಾಗಿರುವುದರಿಂದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆ ಕುರಿತಂತೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆದಿದ್ದೂ ಇದೆ, ಯಥಾಪ್ರಕಾರ ‘ಶೀಘ್ರ ಕ್ರಮ ಕೈಗೊಳ್ಳುತ್ತೇವೆ’ ಎಂಬ ಮಾತು ಪುನರುಚ್ಚರಿಸಿದ್ದೂ ಇದೆ. ಆದರೆ, ಶಾಸಕರು ಈ ಮಹತ್ವದ ವಿಷಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿರುವ ಪರಿಣಾಮ ಸಮಸ್ಯೆ ಕಗ್ಗಂಟಾಗಿಯೇ ಉಳಿದುಕೊಂಡಿದೆ.

ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಬಗರ್​ಹುಕುಂ ಯೋಜನೆ ಅಡಿ ಸಾಗುವಳಿ ಭೂಮಿಯ ಸಕ್ರಮಕ್ಕೆ ಸರ್ಕಾರ ಮುಂದಾಗಿರುವುದು ಗೊತ್ತಿರುವಂಥದ್ದೇ. ಭೂ ಕಂದಾಯ ಕಾಯ್ದೆ ಪ್ರಕಾರ ತಾಲೂಕುವಾರು ಶಾಸಕರ ನೇತೃತ್ವದಲ್ಲಿ ಬಗರ್​ಹುಕುಂ ಸಮಿತಿ ರಚಿಸಿ ಅರ್ಜಿ ವಿಲೇವಾರಿ ಮಾಡಬೇಕು. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈವರೆಗೆ ಶಾಸಕರ ನೇತೃತ್ವದಲ್ಲಿ ಸಮಿತಿಯೇ ರಚನೆಯಾಗಿಲ್ಲ ಎಂಬುದು ಕಹಿಸತ್ಯ. ಪರಿಣಾಮ, ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗಿಲ್ಲ. ಇದರಿಂದ, ರೈತರು ಅತ್ತ ಹಕ್ಕುಪತ್ರ ಇಲ್ಲದೆ ಇತ್ತ ಸರ್ಕಾರಿ ಸೌಲಭ್ಯಗಳನ್ನೂ ಪಡೆಯಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾಗುವಳಿ ಭೂಮಿಯ ಸಕ್ರಮಕ್ಕೆ ಕಾದು ಸುಸ್ತಾಗಿರುವ ರೈತರು, ಈ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.

ಅರ್ಜಿ ವಿಲೇವಾರಿ ಸಮಸ್ಯೆಯಿಂದಾಗಿ ರೈತರಿಗೆ ಸರ್ಕಾರಿ ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ವಿಮೆ ಮಾಡಿಸಲು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ಸೇರ್ಪಡೆ ಮಾಡಲು, ಎಪಿಎಂಸಿಯಲ್ಲಿ ಬೆಳೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಸಾಲವೂ ಸಿಗುತ್ತಿಲ್ಲ. ತಲೆಮಾರುಗಳಿಂದ ಉಳುಮೆ ಮಾಡುತ್ತಿದ್ದರೂ ಆ ಭೂಮಿ ಮೇಲೆ ಯಾವುದೇ ಹಕ್ಕಿಲ್ಲ ಎಂಬ ರೈತರ ನೋವನ್ನು ಸಂವೇದನೆ ಮೂಲಕ ಪರಿಶೀಲಿಸಿ, ಪರಿಹರಿಸಬೇಕಿದೆ.

ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 1.20 ಲಕ್ಷ ಅರ್ಜಿಗಳು ವಿಲೇವಾರಿಯಾಗದೆ ಉಳಿದಿದ್ದು, ತುಮಕೂರು ಜಿಲ್ಲೆಯಲ್ಲಿ ಈ ಸಂಖ್ಯೆ 1.09 ಲಕ್ಷಕ್ಕಿಂತ ಅಧಿಕ. ಇನ್ನಾದರೂ ಈ ವಿಷಯದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಸಮಿತಿಗಳ ರಚನೆ ವಿಳಂಬವಿಲ್ಲದೆ ನಡೆಯಬೇಕು ಮತ್ತು ವಾರಕ್ಕೊಮ್ಮೆ ನಿಯಮಿತವಾಗಿ ಸಭೆ ನಡೆಸಿ, ಅರ್ಜಿಗಳನ್ನು ವಿಲೇವಾರಿಗೊಳಿಸುವ ಬದ್ಧತೆ ಪ್ರದರ್ಶಿಸಬೇಕು. ರಾಜ್ಯದ ಪ್ರಸಕ್ತ ಕಾನೂನು ಸಚಿವರು ಬಗರ್​ಹುಕುಂ ಕುರಿತ ರೈತಪರ ಹೋರಾಟಗಳಿಂದಲೇ ರಾಜಕೀಯದಲ್ಲಿ ಮುಂಚೂಣಿಗೆ ಬಂದವರು. ಈ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಅವರೂ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪಕ್ಷಭೇದ ಮರೆತು ಎಲ್ಲ ಶಾಸಕರು ಅವರವರ ಕ್ಷೇತ್ರಗಳಲ್ಲಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದಲ್ಲಿ ರೈತರ ಕಾಯುವಿಕೆ, ಅವರು ಅನುಭವಿಸುತ್ತಿರುವ ನಿರಾಸೆ ಆಕ್ರೋಶವಾಗಿ ಬದಲಾದೀತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net