ವಂಚನೆ ತಪ್ಪಿಸಿ: ಮನಿ ಲೋನ್ ಆ್ಯಪ್​ ನಿಯಂತ್ರಣಕ್ಕೆ ನಿಯಮ..

Editorial
Published on

ಲಕ್ಷಾಂತರ ರೂಪಾಯಿ ಸಾಲವನ್ನು ತ್ವರಿತವಾಗಿ ಹಾಗೂ ಸುಲಭವಾಗಿ ನೀಡುವುದಾಗಿ ಆಮಿಷವೊಡ್ಡಿ ಗ್ರಾಹಕರನ್ನು ಸೆಳೆದು ನಂತರ ಹೆಚ್ಚಿನ ಬಡ್ಡಿ ದರ ವಿಧಿಸಿ, ಕಿರುಕುಳ ನೀಡುವ ಸಾಲದ ಆಪ್​ಗಳ ಹಾವಳಿ ಮುಂದುವರಿದಿದೆ. ಇಂಥ ಆಪ್​ಗಳ ನಿಯಂತ್ರಣಕ್ಕೆ ಶೀಘ್ರದಲ್ಲಿ ನಿಯಮಾವಳಿ ರೂಪಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಹೇಳಿರುವುದು ಸ್ವಲ್ಪ ಸಮಾಧಾನದ ಸಂಗತಿ. 2021ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಅಧ್ಯಯನ ನಡೆಸಿದ ಆರ್​ಬಿಐ ಸಮಿತಿಯೊಂದು 600 ಅಕ್ರಮ ಮನಿ ಲೆಂಡಿಂಗ್ (ಸಾಲ ನೀಡುವ) ಆಪ್​ಗಳನ್ನು ಪತ್ತೆ ಮಾಡಿತ್ತು. ಈ ಪೈಕಿ ಕೇಂದ್ರ ಸರ್ಕಾರವು ಕೇವಲ 27 ಆಪ್​ಗಳನ್ನು ನಿಷೇಧಿಸಲು ಕ್ರಮ ಕೈಗೊಂಡಿತು. ಡಿಜಿಟಲ್ ಸಾಲ ಒದಗಿಸುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕಾನೂನುಬಾಹಿರವಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂದೂ ಆರ್​ಬಿಐ ಗುರುತಿಸಿದ್ದು, ಇಂತಹ ಡಿಜಿಟಲ್ ಸಾಲ ವೇದಿಕೆಗಳ ಮೇಲೆ ಕಣ್ಗಾವಲು ಇಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ಗೂಗಲ್ ಪ್ಲೇಸ್ಟೋರ್​ನಲ್ಲಿ ಡಿಜಿಟಲ್ ಸಾಲ ಅಪ್ಲಿಕೇಷನ್​ಗಳು ನೂರಾರು ಸಂಖ್ಯೆಯಲ್ಲಿವೆ. ಇದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಆರ್​ಬಿಐ ಅನುಮೋದನೆ ಪಡೆದುಕೊಂಡಿವೆ. ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದ 200ಕ್ಕೂ ಅಧಿಕ ಆಪ್​ಗಳನ್ನು ತೆಗೆದುಹಾಕಿದ್ದರೂ ಇವುಗಳ ಹಾವಳಿಗೆ ಕಡಿವಾಣ ಸಾಧ್ಯವಾಗಿಲ್ಲ. ಫೇಸ್​ಬುಕ್, ಇನ್​ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಕ್ರಿಯವಾಗುತ್ತಿವೆ. ಇಂತಹ ಆಪ್​ಗಳಲ್ಲಿ ಸಾಲ ಪಡೆಯುವುದು ತೀರ ಅಪಾಯಕಾರಿ. ಅನಿವಾರ್ಯ ಸಂದರ್ಭಗಳಲ್ಲಿ, ಒತ್ತಡದ ಪರಿಸ್ಥಿತಿಗಳಲ್ಲಿ ಸಾಲ ಪಡೆದುಕೊಂಡು ಜನರು ಮೋಸದ ಜಾಲಕ್ಕೆ ಸಿಲುಕುತ್ತಿದ್ದಾರೆ. ಸುಲಭವಾಗಿ, ಶೀಘ್ರವಾಗಿ ಸಾಲ ನೀಡುವ ಆಮಿಷ ಒಡ್ಡುವ ಈ ಆಪ್​ಗಳನ್ನು ನಿರ್ವಹಿಸುವವರು ಹೆಚ್ಚಿನ ಬಡ್ಡಿ ದರ ವಿಧಿಸಿ ಸುಲಿಗೆ ಮಾಡುತ್ತಿದ್ದಾರೆ. ಇಎಂಐ ಪಾವತಿಸದವರಿಗೆ ಬ್ಲಾ್ಯಕ್​ವೆುೕಲ್ ಮಾಡಲೂ ಹೇಸುವುದಿಲ್ಲ. ಇವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ವರದಿಯಾಗಿವೆ.

ಸಾಲ ನೀಡಿಕೆ- ಮರುಪಾವತಿ ಎಲ್ಲವೂ ಸ್ಮಾರ್ಟ್​ಫೋನ್​ನಲ್ಲೇ ನಡೆಯುವುದರಿಂದ ಫೋನ್​ಗಳಲ್ಲಿರುವ ಕಾಂಟ್ಯಾಕ್ಟ್​ಗಳು ಇವರಿಗೆ ಸುಲಭವಾಗಿ ಲಭಿಸುತ್ತವೆ. ಜನರು ಹೆಚ್ಚೆಚ್ಚು ಜಾಗೃತರಾಗುವುದೇ ಇದಕ್ಕಿರುವ ಪರಿಹಾರ. ಮೊದಲನೆಯದಾಗಿ ಆಪ್​ಗಳು ಮಾನ್ಯತೆ ಹೊಂದಿವೆಯೇ ಇಲ್ಲವೇ? ಸಾಲ ಕೊಡುವ ಸಂಸ್ಥೆ ಆರ್​ಬಿಐನಡಿ ನೋಂದಣಿ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಫೋನ್ ಕಾಂಟ್ಯಾಕ್ಟ್ ಲಿಸ್ಟ್ ಸಂಪರ್ಕಕ್ಕೆ ಅನುಮತಿ ಕೊಡಬಾರದು. ಇಂತಹ ಅನಧಿಕೃತ ಆಪ್​ಗಳ ಮೂಲಕ ಚೀನಾದ ಕೆಲ ಹೂಡಿಕೆದಾರರು ವಹಿವಾಟು ನಡೆಸುತ್ತಿರುವುದು ಕೂಡ ಪತ್ತೆಯಾಗಿದೆ. ದೇಶದ ಭದ್ರತೆ ವಿಷಯದಲ್ಲಿ ಸದಾ ತಲೆನೋವಾಗಿರುವ ಚೀನಾ ಹೀಗೆ ಆರ್ಥಿಕ ವಿಚಾರದಲ್ಲಿಯೂ ದಾಳ ಉರುಳಿಸುವುದು ಗಂಭೀರ ಸಂಗತಿ. ಹೀಗಾಗಿ ಡಿಜಿಟಲ್ ಸಾಲ ಆಪ್​ಗಳಿಗೆ ಆದಷ್ಟು ಬೇಗ ನೀತಿನಿಯಮ ತಂದು, ಜನರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net