ಸಂಪಾದಕೀಯ | ವ್ಯಾಪಕ ಸಿದ್ಧತೆ ಅಗತ್ಯ; ಪೆಟ್ರೋಲ್ ಪರ್ಯಾಯದತ್ತ ಸಚಿವರ ಚಿತ್ತ..

Editorial
Published on

ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆ ಪೂರ್ತಿ ನಿಲ್ಲಲಿದೆ. ಹೀಗೊಂದು ಕುತೂಹಲಕಾರಿ ಹೇಳಿಕೆಯನ್ನು ನೀಡಿದ್ದಾರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ. ಪೆಟ್ರೋಲ್ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಸಚಿವರ ಮಾತುಗಳು ಒಂದಿಷ್ಟು ಸಮಾಧಾನ ಮೂಡಿಸುವಂತಿದ್ದು, ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಜೈವಿಕ ಎಥೆನಾಲ್ ಉತ್ಪನ್ನವನ್ನು ವಾಹನಗಳಲ್ಲಿ ಈಗಾಗಲೇ ಬಳಸಲಾಗುತ್ತಿದೆ. ಆಳವಾದ ಬಾವಿಯ ನೀರಿನಿಂದ ಹಸಿರು ಹೈಡ್ರೋಜನ್ ತಯಾರಿಸಿ, ಕೆಜಿಗೆ 70 ರೂ.ಗೆ ಮಾರಾಟ ಮಾಡಬಹುದು. ಹೀಗಾಗಿ, ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಬಳಕೆ ಸ್ಥಗಿತಗೊಳ್ಳಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಭಾರತವು ಜಗತ್ತಿನ ಅತಿಹೆಚ್ಚು ತೈಲೋತ್ಪನ್ನ ಬಳಸುವ ಹಾಗೂ ಆಮದು ಮಾಡಿಕೊಳ್ಳುವ 3ನೇ ರಾಷ್ಟ್ರವಾಗಿದೆ. ಭಾರತಕ್ಕೆ ಬೇಕಾಗಿರುವ ತೈಲೋತ್ಪನ್ನಗಳಲ್ಲಿ ಶೇ. 14.5 ಮಾತ್ರ ದೇಶಿಯವಾಗಿ ಉತ್ಪಾದನೆಯಾಗುತ್ತಿದ್ದು, ಉಳಿದ ಶೇ. 85.5ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತವು 2021-22ನೇ ಹಣಕಾಸುವ ವರ್ಷದಲ್ಲಿ 119 ಬಿಲಿಯನ್ ಡಾಲರ್ (9,40,100 ಕೋಟಿ ರೂಪಾಯಿ) ವ್ಯಯಿಸಿದೆ. 2020-21ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು 62 ಬಿಲಿಯನ್ ಡಾಲರ್ (4,89,800 ಕೋಟಿ ರೂಪಾಯಿ) ಅಧಿಕವಾಗಿದೆ. ರಷ್ಯಾ- ಯೂಕ್ರೇನ್ ಯುದ್ಧ ಪರಿಣಾಮವಾಗಿ ತೈಲ ಬೆಲೆಗಳು ಸಾಕಷ್ಟು ಹೆಚ್ಚಳವಾಗಿದ್ದು ಇದಕ್ಕೆ ಪ್ರಮುಖ ಕಾರಣ. ಸಚಿವರು ಹೇಳಿದಂತೆ ತೈಲೋತ್ಪನ್ನದಲ್ಲಿ ಸ್ವಾವಲಂಬಿಯಾಗಿ 5 ವರ್ಷಗಳ ನಂತರ ಇಂಧನ ಆಮದು ಸ್ಥಗಿತಗೊಂಡರೆ ಭಾರತದ ಆರ್ಥಿಕತೆ ಆಗಸದತ್ತ ನೆಗೆಯುವುದು ನಿಸ್ಸಂಶಯ.

ಸಚಿವರ ಈ ಹೇಳಿಕೆ ವಾಸ್ತವದಲ್ಲಿ ಕಾರ್ಯಗತವಾಗಲು ಸಾಕಷ್ಟು ಸಿದ್ಧತೆ ಅಗತ್ಯ. ಪೆಟ್ರೋಲ್-ಡೀಸೆಲ್​ಗೆ ಹೈಡ್ರೋಜನ್, ಎಲ್​ಪಿಜಿ, ಸಿಎನ್​ಜಿ, ವಿದ್ಯುತ್ ಪರ್ಯಾಯ ಇಂಧನಗಳಾಗಿವೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಹೋಲಿಸಿದರೆ ಇವು ಪರಿಸರಕ್ಕೆ ಉಂಟು ಮಾಡುವ ಹಾನಿ ನಗಣ್ಯ. ಅದರಲ್ಲೂ ವಿದ್ಯುತ್ತನ್ನು ಭವಿಷ್ಯದ ಸಾರಿಗೆ ಇಂಧನ ಎಂದೇ ಪರಿಗಣಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುವ ಮೂಲಕ ಪ್ರೋತ್ಸಾಹಿಸುತ್ತಿವೆ. ಆದರೆ, ಈ ವಲಯದಲ್ಲಿರುವ ಒಂದಿಷ್ಟು ಅಡಚಣೆಗಳನ್ನು ನಿವಾರಿಸಬೇಕಿದೆ. ವಿದ್ಯುತ್ ವಾಹನಗಳ ಬ್ಯಾಟರಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು ವರದಿಯಾಗಿದ್ದು, ಈ ಅಪಾಯವನ್ನು ನಿವಾರಿಸಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ. ಹಾಗೇ ಚಾರ್ಜಿಂಗ್ ಸ್ಟೇಷನ್​ಗಳ ಸಂಖ್ಯೆ ಹೆಚ್ಚಬೇಕಿದೆ. ಇನ್ನು ಪ್ರಸ್ತುತದಲ್ಲಿಯೇ ಬಳಕೆಗೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆ ದೇಶದಲ್ಲಿ ಆಗುತ್ತಿಲ್ಲ. ಕಲ್ಲಿದ್ದಲು ಕೊರತೆ ಇರುವುದು ಇದಕ್ಕೆ ಪ್ರಮುಖ ಕಾರಣ. ಇನ್ನು ಜಲ ವಿದ್ಯುತ್ ಉತ್ಪಾದನೆಯು ಸುಲಭ ಹಾಗೂ ಮಿತವ್ಯಯಿ ಆಗಿ ಉಳಿದುಕೊಂಡಿಲ್ಲ. ಅಣು ವಿದ್ಯುತ್ ಉತ್ಪಾದನೆ ಅಪಾಯಕಾರಿ ಎಂಬ ಭಾವನೆ ಬೇರೂರಿದೆ. ಹೀಗಾಗಿ, ಪರಿಸರಸ್ನೇಹಿಯಾದ ಪವನ, ಸೌರ ವಿದ್ಯುತ್ ಉತ್ಪಾದನೆಗೆ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ, ಗಮನ ನೀಡಬೇಕಾಗಿದೆ. ಪೆಟ್ರೋಲ್- ಡೀಸೆಲ್​ಗೆ ಪರ್ಯಾಯವಾಗಿ ಭವಿಷ್ಯದಲ್ಲಿ ವಾಹನಗಳ ಸಂಚಾರಕ್ಕೆ ಬಳಸಲಾಗುವ ವಿದ್ಯುತ್ ಪೂರೈಸಲು ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಂಡು, ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸುವ ಅಗತ್ಯ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net