

ಒಂದೆಡೆ ಕರೊನಾ ಸೃಷ್ಟಿಸಿದ ಸಂಕಷ್ಟ, ಮತ್ತೊಂದೆಡೆ ಬೆಲೆ ಏರಿಕೆಯ ಭಾರದಿಂದ ಜನಸಾಮಾನ್ಯರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಆರ್ಥಿಕ ಚೇತರಿಕೆಯ ದಾರಿಗಳನ್ನು ಶೋಧಿಸುತ್ತಿದ್ದಾರೆ. ಈಗಿನ ಬೆಳವಣಿಗೆಗಳು, ಅಂತಾರಾಷ್ಟ್ರೀಯ ವಲಯದ ವಿಪ್ಲವಗಳನ್ನು ಅವಲೋಕಿಸಿದರೆ ಬೆಲೆ ಏರಿಕೆ ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣಗಳಿಲ್ಲ. ಆದಾಯ ಹೆಚ್ಚಳವಾಗದೆ, ವೆಚ್ಚ ತೀವ್ರವಾಗಿ ಏರಿಕೆ ಕಾಣುತ್ತಿರುವಾಗ ಜನಸಾಮಾನ್ಯರಿಗೆ ತುಸು ನಿರಾಳತೆ ಒದಗಿಸುವ ನಿರ್ಣಯಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಕಟಿಸಿರುವುದು ಸಮಾಧಾನದ ಸಂಗತಿ.
ಆರ್ಬಿಐನ ಹಣಕಾಸು ನೀತಿ ಸಮಿತಿ ಶುಕ್ರವಾರ ಸಭೆ ನಡೆಸಿದ್ದು, ರೆಪೋ ದರವನ್ನು ಶೇಕಡ 4ರ ದರದಲ್ಲಿ ಸ್ಥಿರವಾಗಿ ಇಡುವುದಕ್ಕೆ ಅವಿರೋಧವಾಗಿ ನಿರ್ಣಯ ಕೈಗೊಂಡಿದೆ. ರೆಪೋ ದರಗಳು ಏರದೆ ಇರುವುದರಿಂದ ಸಾಲದ ಮೇಲಿನ ಬಡ್ಡಿದರಗಳು ಕೂಡ ಯಥಾಸ್ಥಿತಿಯಲ್ಲಿ ಇರಲಿವೆ. ಪರಿಣಾಮ, ಜನಸಾಮಾನ್ಯರಿಗೆ ಈಗಿನ ಸ್ಥಿತಿಯಲ್ಲಿ ಹೆಚ್ಚಿನ ಹೊರೆಯಂತೂ ಬೀಳುವುದಿಲ್ಲ. ಇಎಂಐಗಳು ಯಥಾಸ್ಥಿತಿ ಇರಲಿವೆ. ಆದರೆ, 2022-23ರ ಈ ಆರ್ಥಿಕ ವರ್ಷಕ್ಕೆ ಹಣದುಬ್ಬರ ಮುನ್ನೋಟವನ್ನು ಈ ಹಿಂದಿನ ಶೇಕಡ 4.5ರಿಂದ 5.7ಕ್ಕೆ ಏರಿಸಲಾಗಿದ್ದರೆ, ಜಿಡಿಪಿ ಮುನ್ನೋಟವನ್ನು ಈ ಹಿಂದಿನ ಶೇಕಡ 7.8ರಿಂದ 7.2ಕ್ಕೆ ಇಳಿಸಲಾಗಿದೆ. ಆರ್ಥಿಕತೆ ನಿಟ್ಟಿನಲ್ಲಿ ಇವು ಶುಭಸಂಕೇತಗಳೇನಲ್ಲ ಎಂಬುದನ್ನು ಮರೆಯುವಂತಿಲ್ಲ. ಹಣದುಬ್ಬರದ ನಿಯಂತ್ರಣ ಆದ್ಯತೆಯಾಗಬೇಕು, ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯಬೇಕು. ಈ ನಿಟ್ಟಿನಲ್ಲಿ ಆರ್ಬಿಐ ಮತ್ತು ಕೇಂದ್ರ ಸರ್ಕಾರ ಅವಶ್ಯ ಹೆಜ್ಜೆಗಳನ್ನು ಇರಿಸಬೇಕು.
ಮತ್ತೊಂದು ಹೊಸ ಸುಧಾರಣೆಯ ಭಾಗವಾಗಿ, ದೇಶಾದ್ಯಂತ ಎಲ್ಲ ಬ್ಯಾಂಕುಗಳ ಎಲ್ಲ ಎಟಿಎಂಗಳಲ್ಲೂ ಶೀಘ್ರ ಕಾರ್ಡ್ಲೆಸ್ ಕ್ಯಾಶ್ ಸೇವೆ ಲಭ್ಯವಾಗಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದ್ದಾರೆ. ಈ ಹಣಕಾಸು ಸೇವೆಯು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತವಾಗಿ ಇರಲಿದೆ. ಇದರೊಂದಿಗೆ ಕಾರ್ಡ್ ಬಳಕೆ ಸಂಪೂರ್ಣ ಕೊನೆಗೊಳ್ಳಲಿದೆ ಎಂಬುದು ಗಮನಾರ್ಹ. ವಹಿವಾಟು ಸರಳಗೊಳಿಸಲು ಇದು ಪೂರಕವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಈ ರೀತಿಯ ಸೌಲಭ್ಯಗಳೇನೋ ವಿಸ್ತರಣೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಜನರಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆಯನ್ನು ಬೆಳೆಸದೆ ಯಾವುದೇ ಸುಧಾರಣೆಗಳು ಯಶಸ್ವಿಯಾಗಲು ಸಾಧ್ಯವಿಲ್ಲ.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅವಧಿ ಮುಗಿದಿದೆಯೆಂದೋ, ಕೆವೈಸಿ ನೋಂದಾಯಿಸಬೇಕಾಗಿದೆಯೆಂದೋ ಇಲ್ಲವೆ ಒಟಿಪಿ ಪಡೆದುಕೊಳ್ಳುವ ಮುಖಾಂತರ ಹಲವು ಬಗೆಯ ವಂಚನೆಗಳು ನಡೆಯುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ಬ್ಯಾಂಕುಗಳು ಈ ಕುರಿತು ಅರಿವು ಮೂಡಿಸುತ್ತಿವೆ. ಯಾವುದೇ ಶಾಖೆ ನಿಮ್ಮ ಒಟಿಪಿ, ಪಿನ್ ಕೇಳುವುದಿಲ್ಲ ಎಂದು ಖಾತೆದಾರರಿಗೆ ತಿಳಿಸುತ್ತಿವೆ. ಆದರೂ, ವಂಚನೆಯ ಹೊಸ ಹೊಸ ಮುಖಗಳು ಬೆಳಕಿಗೆ ಬರುತ್ತಿವೆ. ಹಣ ಕಳೆದುಕೊಂಡವರು ಗೋಳಿಡುವ ಘಟನೆಗಳು ನಡೆಯುತ್ತಿವೆ. ಸೈಬರ್ ಕಳ್ಳರು ಇಂಥ ಕೃತ್ಯಗಳನ್ನು ಎಲ್ಲೋ ಹೊರದೇಶದಲ್ಲಿ ಕುಳಿತು ಮಾಡುವುದರಿಂದ, ಆರೋಪಿಗಳನ್ನು ಪತ್ತೆಹಚ್ಚುವುದು ಕೂಡ ಸುಲಭದ ಕೆಲಸವಲ್ಲ. ಕಾರ್ಡ್ಲೆಸ್ ಕ್ಯಾಶ್ ವ್ಯವಸ್ಥೆ ಹೆಸರಲ್ಲಿ ಅಥವಾ ಆ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಹೊಸ ಬಗೆಯ ವಂಚನೆಗಳು ನಡೆಯುವಂತಾಗಬಾರದು. ಈ ನಿಟ್ಟಿನಲ್ಲಿ ಕಾಳಜಿ ವಹಿಸುವ ಜತೆಗೆ ಅರಿವು ವಿಸ್ತರಿಸುವುದು ಅಗತ್ಯ.