

ಆಡಳಿತ ವೀಕೇಂದ್ರಿಕರಣದ ಆಶಯ ಮತ್ತು ಗ್ರಾಮಗಳ ಅಭಿವೃದ್ಧಿಯ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯವಸ್ಥೆ ರೂಪುಗೊಂಡಿದೆ. ಅಲ್ಲದೆ, ಪ್ರಜಾಪ್ರಭುತ್ವದ ತಳಪಾಯ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಕೆಲವು ವರ್ಷಗಳ ಹಿಂದೆ ಗ್ರಾಪಂಗಳ ಕಾರ್ಯವ್ಯಾಪ್ತಿ ತುಂಬ ಸೀಮಿತವಾಗಿತ್ತು. ಈಗ ಸ್ಥಿತಿ ಮೊದಲಿನಂತಿಲ್ಲ. ಅನೇಕ ಹೊಣೆಗಾರಿಕೆಗಳು ಹೆಗಲಿಗೇರಿವೆ, ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದೆ. ಉತ್ತರದಾಯಿತ್ವ ಸಹ. ಈ ಹೊಸ ಕ್ರಮಗಳು ಯಶಸ್ವಿಯಾಗಿ ಅನುಷ್ಠಾನಕ್ಕೆ ಬರಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಗ್ರಾಪಂಗಳಿಗೆ ಭರಪೂರ ಅನುದಾನವನ್ನೂ ಕೊಡುತ್ತಿದೆ. ಕರ್ನಾಟಕದಲ್ಲಿಯೂ ಹೊಸ ಜವಾಬ್ದಾರಿಗಳನ್ನು ಗ್ರಾಪಂಗಳಿಗೆ ವಹಿಸಲಾಗಿದೆ. ಇದೆಲ್ಲವೂ ಸರಿಯೇ. ಆದರೆ, ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ, ಹಳ್ಳಿಯ ಅಭಿವೃದ್ಧಿಗೆ ಶ್ರಮಿಸುವ ಹೊಣೆಗಾರಿಕೆ ಹೊತ್ತಿರುವ ಗ್ರಾಪಂ ಸದಸ್ಯರೇ ಗೌರವಧನಕ್ಕಾಗಿ ಪರದಾಡುವಂಥ ಸ್ಥಿತಿ ಸೃಷ್ಟಿಯಾಗಿರುವುದು ವಿಪರ್ಯಾಸ. ಗೌರವಧನ ಪಾವತಿಗೆ ಸರ್ಕಾರ ಅನುದಾನ ನೀಡಿದ್ದರೂ ಮಧ್ಯವರ್ತಿ ಸಂಸ್ಥೆಗಳ ಹೊಣೆಗೇಡಿತನದಿಂದ ಗೌರವಧನ ಸಕಾಲಕ್ಕೆ ಸದಸ್ಯರ ಕೈಗೆ ಸೇರುತ್ತಿಲ್ಲ ಎಂಬುದು ಕಹಿಸತ್ಯ. ರಾಜ್ಯದಲ್ಲಿ ಒಟ್ಟಾರೆ 6012 ಗ್ರಾಮ ಪಂಚಾಯಿತಿಗಳಿದ್ದು, ಸುಮಾರು 99,537 ಸದಸ್ಯರಿದ್ದಾರೆ. ಈ ಪೈಕಿ 75 ಸಾವಿರಕ್ಕಿಂತ ಅಧಿಕ ಸದಸ್ಯರಿಗೆ ಕಳೆದ ಆರು ತಿಂಗಳಿಂದ ಗೌರವಧನ ಸಿಕ್ಕಿಲ್ಲ.
ರಾಜ್ಯದಲ್ಲಿ ಗೌರವಧನದ ಪರಿಷ್ಕರಣೆಯಾಗಿಲ್ಲ. ಸದಸ್ಯರಿಗೆ ತಿಂಗಳಿಗೆ ಸಿಗುವುದೇ ಕೇವಲ 1 ಸಾವಿರ ರೂ. ಅದು ಕೂಡ ಆರು ತಿಂಗಳುಗಳಿಂದ ನೀಡಿಲ್ಲ. ಅನೇಕ ಗ್ರಾಪಂಗಳಲ್ಲಂತೂ ಪಿಡಿಒಗಳ ಕಿರುಕುಳ, ಬೇಜವಾಬ್ದಾರಿತನ ಎಲ್ಲೆ ಮೀರಿದ್ದು, ಸದಸ್ಯರು ಗೌರವಧನಕ್ಕಾಗಿ ಈ ಪಿಡಿಒಗಳ ಮುಂದೆ ಕೈಕಟ್ಟಿ ನಿಲ್ಲುವಂಥ ಪರಿಸ್ಥಿತಿ ಇದೆ. ಇನ್ನು ಕೆಲವಡೆಯಂತೂ, ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಬಳಸಿಕೊಂಡು, ಸದಸ್ಯರ ಗೌರವಧನವನ್ನು ಮನಸ್ಸಿಗೆ ಬಂದಂತೆ ಯಾವಾಗಲೋ ನೀಡಲಾಗುತ್ತಿದೆ. ಇದೆಂಥ ನೀತಿ? ಗ್ರಾಪಂಗಳಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಗೆದ್ದು ಬಂದು ಸದಸ್ಯರಾದವರೂ ಇದ್ದಾರೆ. ಅವರೆಲ್ಲ ಬಡ ಕುಟುಂಬಗಳಿಂದ ಬಂದವರು. ನ್ಯಾಯಯುತವಾಗಿ ಸಿಗಬೇಕಾದ ಗೌರವಧನವೂ ಅವರಿಗೆ ದಕ್ಕದಿದ್ದಲ್ಲಿ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನು ಅವರಿಂದ ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ? ಅಷ್ಟಕ್ಕೂ, ಗೌರವಧನ ಪಾವತಿಗೆ ಇನ್ನೂ ಮಧ್ಯವರ್ತಿ ಸಂಸ್ಥೆಗಳನ್ನು ನಂಬಿಕೊಂಡಿರುವುದು ಏಕೆ? ಕಿಸಾನ್ ಸಮ್ಮಾನ್ ಯೋಜನೆ ಮೂಲಕ ದೇಶದಲ್ಲಿ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಸಹಾಯಧನ ತಲುಪಿಸಲಾಗುತ್ತಿದೆ. ಹೀಗೆ ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು ಹತ್ತಾರು ಯೋಜನೆಗಳಿಗೆ ಜೋಡಿಸಿ, ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಇಲ್ಲಿ ಯಾವುದೇ ಮಧ್ಯವರ್ತಿ ವ್ಯವಸ್ಥೆಗೆ ಆಸ್ಪದ ಇರದೆ, ಪಾರದರ್ಶಕತೆ ಕಾಪಾಡಲು ಸಾಧ್ಯವಾಗುತ್ತದೆ. ಈ ಎಲ್ಲ ಸಂಗತಿಗಳ ಅರಿವು ಇದ್ದರೂ ಪ್ರಸಕ್ತ ವಿಷಯದಲ್ಲಿ ಜಾಣಕುರುಡು ಏಕೆ? ಗ್ರಾಪಂಗಳಲ್ಲಿನ ಎಲ್ಲ ಸಮಸ್ಯೆಗಳನ್ನು ನಿವಾರಿಸುವುದು ಸರ್ಕಾರದ ಆದ್ಯತೆಯಾಗಬೇಕು. ಗೌರವಧನ ವಿತರಣೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ, ಅಪಸವ್ಯಗಳನ್ನು ಕೊನೆಗಾಣಿಸಬೇಕು.