

ಅಭಿವೃದ್ಧಿಯ ಹೊಸ ಕನಸುಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಬಿತ್ತುತ್ತಲೇ ಇರುತ್ತವೆ. ಚುನಾವಣೆ ಬಂದಾಗಲಂತೂ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು ಜಿದ್ದಿಗೆ ಬಿದ್ದವರಂತೆ ‘ಜನರ ಜೀವನಮಟ್ಟ ಎತ್ತರಿಸಲು ಹಲವು ಯೋಜನೆ ತರುತ್ತೇವೆ’ ಎಂದು ಆಶ್ವಾಸನೆ ನೀಡುವುದುಂಟು. ಆದರೆ, ವಸ್ತುಸ್ಥಿತಿಯನ್ನು ಪರಾಮಶಿಸಿದಾಗ ಹೊರಬರುವ ವಾಸ್ತವ ಮಾತ್ರ ಆಘಾತಕಾರಿ. ದೇಶ ಕಳೆದ ಹದಿನೆಂಟು ತಿಂಗಳುಗಳಿಂದ ಕರೊನಾ ಹೊಡೆತಕ್ಕೆ ಸಿಲುಕಿ, ನಷ್ಟ ಅನುಭವಿಸಿದೆ. ಲಾಕ್ಡೌನ್ ಹೇರಿದಾಗಲಂತೂ ಹಲವು ಕ್ಷೇತ್ರಗಳು ನಲುಗಿ ಹೋದವು. ಕರೊನಾ ಆಘಾತದಿಂದ ಸೃಷ್ಟಿಯಾಗುವ ವಿಷಮ ಸ್ಥಿತಿಯನ್ನು, ಅದು ಜನಸಾಮಾನ್ಯರ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮವನ್ನು ಒಂದಿಷ್ಟಾದರೂ ಅಂದಾಜು ಮಾಡಿ, ಸೂಕ್ತ ಕ್ರಮಕ್ಕೆ ಸರ್ಕಾರ ಮುಂದಾಗಿದ್ದರೆ ಪ್ರಸಕ್ತ ಬೆಲೆಯೇರಿಕೆಯ ಭಾರ ಇಷ್ಟೊಂದು ಹೆಚ್ಚುತ್ತಿರಲಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತಲೇ ಸಾಗಿದ್ದು, ಈಗಾಗಲೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಬಡ, ಕೆಳಮಧ್ಯಮ, ಮಧ್ಯಮವರ್ಗದ ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಂಡಿದೆ. ಕರೊನಾ ದೊಡ್ಡ ಹೊಡೆತ ನೀಡಿದ ಬೆನ್ನಲ್ಲೇ ಬೆಲೆಯೇರಿಕೆ ಶ್ರೀಸಾಮಾನ್ಯರ ಬದುಕನ್ನು ಮತ್ತಷ್ಟು ತ್ರಾಸದಾಯಕವಾಗಿಸಿದೆ.
ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಿಲಿಂಡರ್, ಅಡುಗೆ ಎಣ್ಣೆ, ಒಲೆಗಳು, ಸ್ಟೇನ್ಲೆಸ್ ಸ್ಟೀಲ್, ಹಿತ್ತಾಳೆ ಪಾತ್ರೆಗಳು ಎಲ್ಲವೂ ದುಬಾರಿಯಾಗಿವೆ. ಪೆಟ್ರೋಲ್ ಬೆಲೆ ಲೀಟರಿಗೆ 100ರ ಗಡಿ ದಾಟಿದ್ದರೆ ಅಡುಗೆಎಣ್ಣೆ ಬೆಲೆ 160 ರೂ.ಗೂ ಹೆಚ್ಚು. ಎಲ್ಪಿಜಿ ಸಿಲಿಂಡರ್ ಬೆಲೆಯಂತೂ ಒಂದೇ ವರ್ಷದಲ್ಲಿ 250 ರೂ.ನಷ್ಟು (650 ರೂ.ನಿಂದ 900 ರೂ.) ಹೆಚ್ಚಿದೆ. ಪರಿಣಾಮ, ಮನೆ ಬಜೆಟ್ನ ಲೆಕ್ಕಾಚಾರವೇ ಏರುಪೇರಾಗಿದೆ. ಅಷ್ಟೇ ಅಲ್ಲ, ಕಟ್ಟಡ ನಿರ್ಮಾಣ ದರವೂ ಶೇಕಡ
40ರಷ್ಟು ಹೆಚ್ಚಿರುವುದರಿಂದ ಸ್ವಂತ ಮನೆಯ ಆಸೆ ಹೊತ್ತು, ಯೋಜನೆ ರೂಪಿಸಿಕೊಂಡವರು ಪರದಾಡುವಂತಾಗಿದೆ. ಕೋವಿಡ್ ಸೋಂಕು ಕಾಣಿಸಿಕೊಳ್ಳುವ ಮುಂಚೆ ರಾಜ್ಯದಲ್ಲಿ 4.45 ಲಕ್ಷ ರೂ. ವೆಚ್ಚದಲ್ಲಿ 1 ಸಾವಿರ ಚದರ ಅಡಿ ಗಾತ್ರದ ಕಟ್ಟಡ ನಿರ್ಮಾಣ ಕಾರ್ಯವನ್ನು ಮಾಡಬಹುದಿತ್ತು. ಆದರೆ, ಕಟ್ಟಡ ನಿರ್ವಣದ ಎಲ್ಲ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಿಂದ ಪ್ರಸ್ತುತ ದರ 7.30 ಲಕ್ಷ ರೂ.ಗೆ ಏರಿಕೆಯಾಗಿದೆ ಎಂಬುದನ್ನು ತಜ್ಞರೇ ಸ್ಪಷ್ಟಪಡಿಸಿದ್ದಾರೆ. ಬೆಲೆಯೇರಿಕೆ ಒಂದೆರಡು ವಲಯಕ್ಕೆ ಸೀಮಿತವಲ್ಲ. ಹತ್ತಿ ಬಟ್ಟೆ, ಕಬ್ಬಿಣ, ತಾಮ್ರ, ಅಲ್ಯೂಮಿನಿಯಂ ಕೂಡ ದುಬಾರಿಯಾಗಿವೆ.
ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಸರ್ಕಾರ ಮೌನಕ್ಕೆ ಶರಣಾದರೆ ಅಥವಾ ಯಾವುದೋ ಸಬೂಬುಗಳನ್ನು ನೀಡಿದರೆ ಏನರ್ಥ? ಜನಸಾಮಾನ್ಯರು ಬದುಕುವುದು ಬೇಡವೇ? ಜೀವನಾವಶ್ಯಕ ಬೆಲೆಗಳ ನಿಯಂತ್ರಣ ಆಗದಿದ್ದಲ್ಲಿ ಮತ್ತಷ್ಟು ಜನರು ವೇಗವಾಗಿ ಬಡತನದ ಕೂಪಕ್ಕೆ ಸಿಲುಕಿಕೊಳ್ಳುತ್ತಾರೆ. ಜನರ ಆರ್ಥಿಕ ಚೈತನ್ಯ ಕಡಿಮೆಯಾದರೆ, ಅದರಿಂದ ಇಡೀ ವ್ಯವಸ್ಥೆ ಮೇಲೆ ಪರಿಣಾಮವಾಗುತ್ತದೆ. ಹೀಗಾಗಿ, ಸರ್ಕಾರ ಈ ವಿಷಯದ ಗಂಭೀರತೆ ಅರ್ಥ ಮಾಡಿಕೊಂಡು ಬೆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈರುಳ್ಳಿ ಬೆಲೆಯೇರಿಕೆ ದೆಹಲಿ ಸರ್ಕಾರವನ್ನೇ ಕೆಡವಿದ್ದನ್ನು ಅಧಿಕಾರದಲ್ಲಿ ಇರುವವರು ಮರೆಯಬಾರದು.