ಸಹಕಾರಿ ತತ್ತ್ವಕ್ಕೆ ಧಕ್ಕೆಯಾಗದಿರಲಿ: ಮಾರ್ಗಸೂಚಿ, ನಿಯಮಗಳ ಪಾಲನೆ ಅಗತ್ಯ

Editorial
Published on

ಸಹಕಾರಿ ತತ್ತ್ವ ನಮ್ಮ ದೇಶದ ಆರ್ಥಿಕ ಜೀವನಾಡಿ ಎಂಬುದು ಗೊತ್ತಿರುವಂಥದ್ದೇ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆಯ ಒಳಗೊಳ್ಳುವಿಕೆ, ವ್ಯಾಪ್ತಿ ವಿಸ್ತರಣೆ, ಸಣ್ಣ ಉಳಿತಾಯಕ್ಕೆ ಉತ್ತೇಜನ ಹೀಗೆ ಹಲವು ವಿಷಯಗಳಲ್ಲಿ ಮಾದರಿಯಾಗಿದೆ ಸಹಕಾರಿ ಕ್ಷೇತ್ರ. ಸಣ್ಣ ಸಣ್ಣ ಮೊತ್ತದ ಸಾಲ ನೀಡುವ ಮೂಲಕ ಹೆಚ್ಚೆಚ್ಚು ಫಲಾನುಭವಿಗಳನ್ನು ತಲುಪುತ್ತಿದ್ದ ಸಹಕಾರಿ ಸಂಘಗಳು ವಿಶ್ವಾಸಾರ್ಹತೆ, ಶೀಘ್ರ ಪ್ರಕ್ರಿಯೆಯ ಕಾರ್ಯವಿಧಾನದಿಂದ ಗ್ರಾಮೀಣ ಭಾಗದವರನ್ನು ಸೆಳೆದಿದ್ದು ಹೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಪಲ್ಲಟಗಳು ಈ ರಂಗದ ಬಲವನ್ನೇ ಕಿತ್ತುಕೊಳ್ಳುತ್ತಿವೆ ಎಂಬುದು ಕಳವಳದ ವಿಚಾರ. ಅದೆಷ್ಟೋ ಸಹಕಾರಿ ಸಂಘಗಳು ನಷ್ಟದ ಸುಳಿಗೆ ಸಿಲುಕಿದ್ದು, ಅದರಿಂದ ಹೊರಬರಲು ಮಾರ್ಗ ಸಿಗದೆ ಒದ್ದಾಡುತ್ತಿವೆ. ನಿಯಮಬಾಹಿರವಾಗಿ ಪ್ರಭಾವಿಗಳಿಗೆ, ತಮ್ಮ ಸಂಬಂಧಿಕರಿಗೆ ಕೋಟಿಗಟ್ಟಲೆ ಸಾಲ ವಿತರಿಸಿದ ಆಡಳಿತ ಮಂಡಳಿ ಸದಸ್ಯರ ಧೋರಣೆಯಿಂದಾಗಿ ರಾಜ್ಯದಲ್ಲಿ ಸಾವಿರಾರು ಸಹಕಾರಿ ಸಂಘಗಳು ದಿವಾಳಿಯಾಗಿರುವ ಬಗ್ಗೆ ಇತ್ತೀಚೆಗಷ್ಟೇ ‘ವಿಜಯವಾಣಿ’ ವಿವರವಾಗಿ ವರದಿ ಮಾಡಿ, ವ್ಯವಸ್ಥೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು.

ಉತ್ತಮ ಉದ್ದೇಶ ಹೊಂದಿದ ಯೋಜನೆಯಲ್ಲಿ ಸ್ವಹಿತಾಸಕ್ತಿ, ಪ್ರತಿಷ್ಠೆ ಪ್ರವೇಶಿಸಿದರೆ ಹೇಗೆ ಮೂಲ ಆಶಯಕ್ಕೆ ಧಕ್ಕೆ ಒದಗುತ್ತದೆ ಎಂಬುದಕ್ಕೆ ರಾಜ್ಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪ್ಯಾಕ್ಸ್)ಗಳನ್ನು ಆತುರಾತುರವಾಗಿ ಸ್ಥಾಪಿಸುತ್ತಿರುವುದೇ ಸಾಕ್ಷಿ. ಸಹಕಾರಿ ತತ್ತ್ವದಡಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದ ಈ ಪತ್ತಿನ ಸಹಕಾರ ಸಂಘಗಳು ಪ್ರಭಾವಿಗಳ ಒತ್ತಡ ತಂತ್ರಗಳಿಂದ ದುರ್ಬಲಗೊಳ್ಳುತ್ತಿವೆ. ರಾಜ್ಯದಲ್ಲಿ ಒಟ್ಟು 6,022 ಗ್ರಾಮ ಪಂಚಾಯಿತಿಗಳಿದ್ದರೆ, 5,463 ಪ್ಯಾಕ್ಸ್​ಗಳು ಸಹಕಾರ ಇಲಾಖೆಯಲ್ಲಿ ನೋಂದಣಿಯಾಗಿವೆ. ಈ ಪೈಕಿ 5,230ಕ್ಕೂ ಹೆಚ್ಚು ಸಂಘಗಳು ಕಾರ್ಯನಿರತವಾಗಿವೆ. ಪ್ರತಿ ಗ್ರಾಪಂನಲ್ಲೂ ಒಂದು ಸಂಘ ಸ್ಥಾಪಿಸುವ ನಿರ್ಧಾರ ಉತ್ತಮವಾಗಿದೆಯಾದರೂ, ಸ್ವಹಿತಾಸಕ್ತಿಯ ಸಂಘರ್ಷ ಅನುಕೂಲಕ್ಕಿಂತ ಸಮಸ್ಯೆಯೇ ಸೃಷ್ಟಿಸುವ ಆತಂಕ ಎದುರಾಗಿದೆ. ನಿಯಮಗಳು ಮತ್ತು ನಬಾರ್ಡ್​ನ ಮಾರ್ಗಸೂಚಿಯನ್ನು ಉಲ್ಲಂಘಿಸಿ ಹತ್ತಾರು ಪ್ಯಾಕ್ಸ್​ಗಳು ತೆರೆದಿರುವುದು ಬಯಲಾಗಿದೆ.

ಅಷ್ಟಕ್ಕೂ, ಹೊಸ ಸಂಘಗಳನ್ನು ಸ್ಥಾಪಿಸುವ ಮೊದಲು ಈಗಿರುವ ಪ್ಯಾಕ್ಸ್​ಗಳನ್ನು ಸದೃಢಗೊಳಿಸುವುದು ಮೊದಲ ಆದ್ಯತೆಯಾಗಬೇಕು. ಅಲ್ಲಿರುವ ಸಮಸ್ಯೆಗಳು ನಿವಾರಣೆಯಾಗಿ, ನೈಜ ರೈತ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುವಂತಾಗಬೇಕು. ಆದರೆ, ಈ ವಿಷಯದಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿದ್ದು, ಹೊಸ ಸಂಘಗಳ ಸ್ಥಾಪನೆಗೆ ಅತ್ಯುತ್ಸಾಹ ತೋರಲಾಗುತ್ತಿದೆ. ಇದರ ಹಿಂದೆ ಮತಬ್ಯಾಂಕ್​ನ್ನು ಸೃಷ್ಟಿಸಿಕೊಳ್ಳುವ ತಂತ್ರ ಅಡಗಿದೆಯೇ ಎಂಬ ಅನುಮಾನ ಬಾರದಿರದು. ಗ್ರಾ.ಪಂ.ವಾರು ಪ್ಯಾಕ್ಸ್​ಗಳ ಸ್ಥಾಪನೆಯಿಂದ ಹೆಚ್ಚೆಚ್ಚು ರೈತರಿಗೆ ಅನುಕೂಲವಾಗುತ್ತದೆ. ಹೊಸಬರಿಗೆ ಸಾಲ ಇನ್ನಿತರ ಸವಲತ್ತುಗಳು ಸಿಗುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಂತ, ನಬಾರ್ಡ್ ಮಾರ್ಗಸೂಚಿ, ಅರ್ಹತೆಗೆ ವಿಧಿಸಿದ ಮಾನದಂಡ, ನಿಬಂಧಕರ ಪೂರ್ವಾನುಮತಿ ಇತ್ಯಾದಿ ಉಲ್ಲಂಘಿಸಿ ಗಡಿಬಿಡಿಯಲ್ಲಿ ಸಂಘ ಸ್ಥಾಪಿಸಿದರೆ, ನೈಜ ಉದ್ದೇಶ ಈಡೇರುವುದಿಲ್ಲ. ಸಹಕಾರಿ ತತ್ತ್ವವೂ ಬಲ ಕಳೆದುಕೊಳ್ಳುತ್ತದೆ. ಹಾಗಾಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ಸೂಕ್ತ ಕ್ರಮಕ್ಕೆ ಮುಂದಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net