ಸಮಸ್ಯೆ ಬಗೆಹರಿಸಿ; ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿ...

Editorial
Published on

ಕರೊನಾದಿಂದ ಎಲ್ಲ ವಲಯಗಳಿಗೂ ಬಲವಾದ ಪೆಟ್ಟು ಬಿದ್ದು, ಆರ್ಥಿಕತೆಗೆ ಹಿನ್ನಡೆಯಾಗಿದೆ ಎಂಬುದು ಗೊತ್ತಿರುವಂಥದ್ದೇ. ಆದರೆ, ಕೆಲ ತಿಂಗಳಿಂದ ನಿಧಾನವಾಗಿ ಒಂದೊಂದೇ ರಂಗಗಳು ಚೇತರಿಕೆಯತ್ತ ಮುಖ ಮಾಡಿವೆ. ಆರ್ಥಿಕ ಚಟುವಟಿಕೆಗಳೂ ವೇಗ ಪಡೆದಿವೆ. ಅನಿರೀಕ್ಷಿತ ಸಂಕಷ್ಟಗಳು ಎರಗಿದಾಗ ಅದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುತ್ತದೆ. ಉಳಿದ ವಲಯಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದರೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಕಷ್ಟ ಮಾತ್ರ ಬಗೆಹರಿದಿಲ್ಲ. ಸಿಬ್ಬಂದಿ ವೇತನಕ್ಕೂ ಹಣವಿಲ್ಲದಂತೆ ಪರದಾಡುವ ಸ್ಥಿತಿ. ನಾಲ್ಕೂ ನಿಗಮಗಳು ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿವೆ. ‘ಸಿಬ್ಬಂದಿ ವೇತನ ಪಾವತಿಗೆ, ಬಸ್​ಗಳಿಗೆ ಇಂಧನ ಹಾಕಿಸಲು ನಮ್ಮ ಬಳಿ ಹಣವಿಲ್ಲ’ ಎಂದು ಸಾರಿಗೆ ಸಚಿವರೇ ಹೇಳಿಕೊಂಡಿರುವುದು ಹದಗೆಟ್ಟಿರುವ ಪರಿಸ್ಥಿತಿಗೆ ಸಾಕ್ಷಿ. ಬಸ್​ಗಳ ಸಂಚಾರ ಆರಂಭವಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕರೊನಾ ಆತಂಕ ತಗ್ಗಿರುವ ಹಿನ್ನೆಲೆಯಲ್ಲಿ ಎಲ್ಲ ಬಸ್​ಗಳ ಸಂಚಾರ ಪುನರಾರಂಭಿಸಬೇಕು. ಪ್ರಯಾಣಿಕರ ಹಾಗೂ ಸಿಬ್ಬಂದಿ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಸಕಾಲಕ್ಕೆ ಸಂಬಳ ಸಿಗದೆ ಸಿಬ್ಬಂದಿ ವರ್ಗ ಪರದಾಡುವಂತಾಗಿದ್ದು, ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಸಾರಿಗೆ ವ್ಯವಸ್ಥೆ ಅಭಿವೃದ್ಧಿಯ ಜೀವನಾಡಿ. ಸಣ್ಣ ಹಳ್ಳಿಗಳು, ದೊಡ್ಡ ನಗರಗಳನ್ನು ಪರಸ್ಪರ ಬೆಸೆಯುವ ಕೆಎಸ್​ಆರ್​ಟಿಸಿ ಸೂಕ್ತ ಸಿಬ್ಬಂದಿಯ ಬಲ ಹೊಂದಿಲ್ಲದಿದ್ದರೆ ಅದರ ವ್ಯವಸ್ಥೆಯೇ ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಅಗತ್ಯ. ಆದರೆ, ಇಲ್ಲಿ ಖಾಲಿ ಇರುವ 4671 ಹುದ್ದೆಗಳ ಭರ್ತಿ ಯಾವಾಗ ನಡೆಯಲಿದೆ ಎಂದು ಲಕ್ಷಾಂತರ ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ. 2018 ಮತ್ತು 2020ರಲ್ಲೇ ನೇಮಕಾತಿಗೆ ಅರ್ಜಿ ಆಹ್ವಾನಿಸಿ ನೇಮಕ ಪ್ರಕ್ರಿಯೆ ಆರಂಭವಾಗಿತ್ತು. 95,500 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷವೇ ಪೂರ್ಣಗೊಳ್ಳಬೇಕಿದ್ದ ನೇಮಕಾತಿ ಪ್ರಕ್ರಿಯೆಯನ್ನು ಕರೊನಾ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ. ಮತ್ತೆ ಯಾವಾಗ ಶುರುವಾಗುತ್ತೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. 8-10 ತಿಂಗಳುಗಳ ಕಾಲ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ನಷ್ಟ ಉಂಟಾಗಿರುವುದು ಹೌದು. ಆ ಹೊತ್ತಿನಲ್ಲಿ ಉಂಟಾದ ಸಂಬಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಈಗ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿ, ನಷ್ಟದಿಂದ ಹೊರಬರಲು ಯತ್ನಿಸಬೇಕಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಬೇಕಿದೆ. ಇಲ್ಲವಾದಲ್ಲಿ ಸಮಸ್ಯೆಗಳ ತೀವ್ರತೆ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net