

ಡ್ರಗ್ಸ್ ಹಾವಳಿ ಮತ್ತೆ ಸದ್ದು ಮಾಡುತ್ತಿದೆ. ಮುಂಬೈ ಸಮುದ್ರದ ಐಷಾರಾಮಿ ಹಡಗಿನಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿದ ಎನ್ಸಿಬಿ ಅಧಿಕಾರಿಗಳು ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ. ಬಂಧಿತರು ಪ್ರತಿಷ್ಠಿತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಮಾದಕದ್ರವ್ಯದ ಸೇವನೆ ಹೇಗೆ ದೊಡ್ಡ ಪಿಡುಗಾಗಿ ಬೆಳೆದಿದೆ ಮತ್ತು ಅದು ಯುವಪೀಳಿಗೆಯನ್ನು ಹೇಗೆ ದಾರಿ ತಪ್ಪಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಬಾಲಿವುಡ್ಗೆ ಮಾದಕದ್ರವ್ಯಗಳ ನಂಟು ಹೊಸದೇನಲ್ಲ. ಈಗ ಖ್ಯಾತ ನಟನ ಪುತ್ರ ಬಂಧನಕ್ಕೆ ಒಳಗಾಗಿರುವುದರಿಂದ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಬೆಳಕಿಗೆ ಬಾರದ, ಅಮಲಿನ ಲೋಕದಲ್ಲಿ ಬದುಕು ಕಳೆದುಕೊಳ್ಳುತ್ತಿರುವ ಅಸಂಖ್ಯ ಪ್ರಕರಣಗಳೂ ಇವೆ ಎಂಬ ಕಟುಸತ್ಯವನ್ನು ಮರೆಯುವಂತಿಲ್ಲ. ಇದು ಬರೀ ವ್ಯಕ್ತಿಗತ ಆರೋಗ್ಯವನ್ನಷ್ಟೇ ಅಲ್ಲ ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಜೀವನದಲ್ಲಿ ಸಾಧನೆಯ ಮಜಲುಗಳನ್ನು ಏರಬೇಕಾದ ಯೌವನದಲ್ಲಿ ಹೀಗೆ ಬಹಳಷ್ಟು ಜನರು ದಾರಿ ತಪು್ಪತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ವ್ಯವಸ್ಥೆಯ ಲೋಪಗಳ ಜತೆಗೆ ಮನೆಯಲ್ಲಿ ಪಾಲಕರ ನಿರ್ಲಕ್ಷ್ಯವೂ ಅಷ್ಟೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಪಾಲಕರು ಮಕ್ಕಳ ಮೇಲೆ ಅತಿಯಾದ ಶಿಸ್ತು ಹೇರಬಾರದು ಎಂಬುದೇನೋ ನಿಜ. ಆದರೆ, ಅತಿಯಾದ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ಬಗೆಯ ಪ್ರಕರಣಗಳು ಸಾಕ್ಷಿ. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಉತ್ತಮ ಮೌಲ್ಯಗಳನ್ನು ಬಿತ್ತುವುದು, ಹದಿಹರೆಯ ವಯಸ್ಸಿನಲ್ಲಿ ಒಳ್ಳೆಯ ಸಂಸ್ಕಾರ ಕಲಿಸಿ, ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುವುದು, ಸರಿ-ತಪು್ಪಗಳ ಸ್ಪಷ್ಟವಾದ ಅರಿವು ತುಂಬಿ, ಆದರ್ಶದ ಜೀವನ ರೂಪಿಸಿಕೊಳ್ಳಲು ಸಹಕರಿಸುವುದೆಲ್ಲ ಪಾಲಕರ ಕರ್ತವ್ಯವೇ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಟ್ಟಲ್ಲಿ, ಸಣ್ಣ ತಪು್ಪ ಮಾಡಿದಾಗ ನಿರ್ಲಕ್ಷಿಸದೆ ಕೂಡಲೇ ಎಚ್ಚರಿಕೆ ನೀಡಿದ್ದಲ್ಲಿ ದೊಡ್ಡ ಪ್ರಮಾದಗಳನ್ನು ತಪ್ಪಿಸಬಹುದು. ಇದು ಬಡ ಕುಟುಂಬದ ಪಾಲಕರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಅನ್ವಯಿಸುವಂಥ ಸೂತ್ರ. ಇತ್ತೀಚಿನ ದಿನಗಳಲ್ಲಂತೂ ಡ್ರಗ್ಸ್ಗಳು ಸುಲಭವಾಗಿ ವಿದ್ಯಾರ್ಥಿಗಳ ಕೈಗೆಟಕುತ್ತಿರುವುದು ತೀರಾ ಆತಂಕದ ಸಂಗತಿ. ಕೆಲ ಶಾಲೆ, ಕಾಲೇಜುಗಳ ಸಮೀಪದಲ್ಲೇ ಮಾದಕದ್ರವ್ಯಗಳ ಮಾರಾಟ, ಸೇವನೆ ನಡೆಯುವುದು ರಹಸ್ಯವೇನಲ್ಲ. ಹೀಗೆ ರಾಜಾರೋಶವಾಗಿ ಮಾದಕದ್ರವ್ಯದ ಮಾರಾಟ ಮತ್ತು ಖರೀದಿ ನಡೆಯುವಲ್ಲಿ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ. ಓದಿನ ದಿನಗಳಲ್ಲೇ ಇಂಥ ದುಶ್ಚಟಕ್ಕೆ ತುತ್ತಾಗುವ ಯುವಕರು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಹೇಗೆ ಸಾಧ್ಯ? ಪಂಜಾಬಿನ ಬಹುತೇಕ ಹಳ್ಳಿಗಳು ಅಮಲಿನ ನಶೆಯಲ್ಲಿ ತೇಲುತ್ತಿವೆ. ಅಲ್ಲಿ ಯುವಕರನ್ನು ಡ್ರಗ್ಸ್ ದುಶ್ಚಟದಿಂದ ಹೊರತರಲು ಏನೆಲ್ಲ ಪ್ರಯತ್ನಗಳು ನಡೆಯುತ್ತಿವೆಯಾದರೂ, ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಈ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ತಳೆಯುವ ಮುನ್ನವೇ ಪಾಲಕರು ಮತ್ತು ವ್ಯವಸ್ಥೆ ಎಚ್ಚೆತ್ತುಕೊಳ್ಳುವುದು ಅಗತ್ಯ.