

ಕರೊನಾ ಸೋಂಕಿನ ಎರಡನೇ ಅಲೆಯ ತೀವ್ರ ಅಬ್ಬರ, ಅದು ಸೃಷ್ಟಿಸಿದ ಪ್ರಾಣಹಾನಿ, ಆರೋಗ್ಯ ಸಮಸ್ಯೆ ಜನಜೀವನವನ್ನು ಆತಂಕಕ್ಕೆ ದೂಡಿದ್ದು ಮಾತ್ರವಲ್ಲ, ಹಲವು ರೀತಿಯ ಹಿನ್ನಡೆಯನ್ನು ತಂದಿತು. ಸೋಂಕು ಪ್ರಸರಣ ನಿಯಂತ್ರಣಕ್ಕಾಗಿ ಲಾಕ್ಡೌನ್ ಅನಿವಾರ್ಯವಾಗಿದ್ದರಿಂದ ಮತ್ತೆ ಉದ್ಯಮಗಳು ಸೇರಿ ಎಲ್ಲ ವಲಯಗಳು ನಲುಗಬೇಕಾಯಿತು. ಆರ್ಥಿಕ ಚಟುವಟಿಕೆಗಳು ಕೂಡ ಸ್ತಬ್ಧಗೊಂಡವು. ಅದೆಷ್ಟೋ ವಲಯಗಳಿಗೆ ಕಳೆದ ವರ್ಷದ ಲಾಕ್ಡೌನ್ನ ಹಾನಿಯಿಂದಲೇ ಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇನ್ನೇನು ಪರಿಸ್ಥಿತಿ ಸಹಜತೆಗೆ ಬರುತ್ತಿದೆ ಎನ್ನುವಾಗಲೇ ಎರಡನೇ ಅಲೆ ವ್ಯಾಪಿಸಿಕೊಂಡಿತು. ಕಳೆದ ಕೆಲವು ವಾರಗಳಿಂದ ಕರ್ನಾಟಕದಲ್ಲಿ ಸೋಂಕು ಪ್ರಕರಣ ಸಂಖ್ಯೆ ಇಳಿಮುಖ ಕಾಣುತ್ತಿರುವುದು ಸಮಾಧಾನಕರ ಬೆಳವಣಿಗೆ. ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇರುವುದು, ಪರಿಸ್ಥಿತಿ ಸಾಮಾನ್ಯಕ್ಕೆ ಬರುತ್ತಿರುವುದಕ್ಕೆ ಸಾಕ್ಷಿ.
ಎರಡು ಹಂತದ ಅನ್ಲಾಕ್ ಪ್ರಕ್ರಿಯೆಯಲ್ಲಿ ಹಲವು ವಿನಾಯಿತಿಗಳನ್ನು ಘೋಷಿಸಿದ್ದ ಸರ್ಕಾರ ಇಂದಿನಿಂದ (ಸೋಮವಾರ) ಜಾರಿಯಾಗಲಿರುವ ಮೂರನೇ ಹಂತದ ಅನ್ಲಾಕ್ನಲ್ಲಿ ಮತ್ತಷ್ಟು ವಿನಾಯಿತಿಗಳನ್ನು ನೀಡಿದೆ. ರಾತ್ರಿ 9 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದ್ದು, ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಲಾಗಿದೆ. ಮಾಲ್ ಮತ್ತು ದೇಗುಲಗಳು ತೆರೆಯಲಿವೆ. ಅಂದರೆ, ಕನಿಷ್ಠ ನಿರ್ಬಂಧಗಳು ಮುಂದುವರಿಯಲಿದ್ದು, ಸಿನಿಮಾ ಥಿಯೇಟರ್ ಮತ್ತು ಶಾಲೆಗಳ ಆರಂಭ ಸದ್ಯಕ್ಕಂತೂ ಇಲ್ಲ. ಆದರೆ, ಇತರ ವ್ಯಾಪಾರ ವಹಿವಾಟಿನ ಸಮಯ ವಿಸ್ತರಣೆ ಆಗಿರುವುದರಿಂದ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳಲಿವೆ. ಕರೊನಾ ಸೃಷ್ಟಿಸಿರುವ ಸಂದಿಗ್ಧತೆಯೇ ವಿಚಿತ್ರ. ಇಲ್ಲಿ ಜೀವ ಉಳಿಸಲು ಆದ್ಯತೆ ನೀಡಬೇಕು, ಜೀವನ ಸಾಗಿಸಲೂ ಅನುವು ಮಾಡಿಕೊಡಬೇಕು. ಇದೆರಡರ ಸಮತೋಲನ ಅಗತ್ಯ. ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ದೀರ್ಘಾವಧಿಗೆ ಜನಜೀವನವನ್ನು, ಆರ್ಥಿಕ ಚಟುವಟಿಕೆಗಳನ್ನು ಸ್ತಬ್ಧಗೊಳಿಸುವುದು ಸಾಧ್ಯವಿಲ್ಲ. ಹಂತ-ಹಂತವಾಗಿ ಸ್ಥಿತಿ ಸಾಮಾನ್ಯಕ್ಕೆ ಬರಲೇಬೇಕು. ಹಾಗಾಗಿಯೇ, ತಜ್ಞರ ಅಭಿಪ್ರಾಯ, ಸಲಹೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸುತ್ತ ಬಂದಿದೆ.
ಮೂರನೇ ಅಲೆ ಬಂದೆರಗುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ, ಕೈಗೊಳ್ಳಬೇಕಿರುವ ಪೂರ್ವಸಿದ್ಧತೆ ಮತ್ತು ಸುರಕ್ಷಾ ಕ್ರಮಗಳ ಬಗ್ಗೆಯೂ ತಿಳಿಸಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದು, ಚಿಂತೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆಯಾದರೂ, ಎಚ್ಚರ ತಪ್ಪವಂತಿಲ್ಲ. ಇಲ್ಲಿ ಸರ್ಕಾರ ಆರೋಗ್ಯ ವ್ಯವಸ್ಥೆ ಕಡೆಗೆ ಹೆಚ್ಚಿನ ಗಮನ ವಹಿಸಿದರೆ ಜನಸಾಮಾನ್ಯರು ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ತಪ್ಪದೇ ಲಸಿಕೆ ಹಾಕಿಸಿಕೊಳ್ಳುವುದು ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಆಗ ಮಾತ್ರ ಕರೊನಾದೊಂದಿಗೇ ಜನಜೀವನದ ಗತಿ ವೇಗ ಪಡೆಯಬಹುದು.