ಸಂಪಾದಕೀಯ | ಭಾರತದ ಹಿತಾಸಕ್ತಿ ಮುಖ್ಯ; ನೆರೆದೇಶಗಳಲ್ಲಿ ಅಶಾಂತಿ, ಆಡಳಿತ ಅಸ್ತವ್ಯಸ್ತ

Editorial
Published on

ರಷ್ಯಾ ಮತ್ತು ಯೂಕ್ರೇನ್ ನಡುವಣ ಸಮರ ಒಂದೂವರೆ ತಿಂಗಳ ನಂತರವೂ ಮುಂದುವರಿದಿದ್ದು, ಜಾಗತಿಕ ವಲಯದಲ್ಲಿ ನಾನಾ ರೀತಿಯ ಪರಿಣಾಮ ಬೀರಿದೆ; ಭಾರತವೂ ಈ ಪರಿಣಾಮಗಳಿಗೆ ಹೊರತಲ್ಲ. ಈ ನಡುವೆ, ಭಾರತದ ನೆರೆದೇಶಗಳಾದ ಪಾಕಿಸ್ತಾನ ಹಾಗೂ ಶ್ರೀಲಂಕಾಗಳಲ್ಲಿ ಆಂತರಿಕ ಸಮಸ್ಯೆಗಳು ಭುಗಿಲೆದ್ದಿದ್ದು, ಭಾರತ ತನ್ನ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನಾಜೂಕಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ವಿವೇಚನೆಯನ್ನು ಪ್ರದರ್ಶಿಸಬೇಕಿದೆ. ರಷ್ಯಾ-ಯೂಕ್ರೇನ್ ವಿಷಯದಲ್ಲಿ ಭಾರತ ತಟಸ್ಥ ನಿಲುವನ್ನು ಹೊಂದುವ ಮೂಲಕ ತನ್ನ ವ್ಯಾಪಾರ ವಾಣಿಜ್ಯ ಮತ್ತು ರಕ್ಷಣಾ ಹಿತಾಸಕ್ತಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿದೆ. ಹೀಗಾಗಿ ಅಮೆರಿಕದಂತಹ ದೇಶಗಳು ಸಹ ಭಾರತದ ನಿಲುವನ್ನು ಪ್ರಶ್ನಿಸಲಾಗದ ಮತ್ತು ಕ್ರಮ ಕೈಗೊಳ್ಳಲಾಗದ ಸ್ಥಿತಿ ನಿರ್ವಣವಾಗಿದೆ.

ಈಗ ಪಾಕ್ ಹಾಗೂ ಶ್ರೀಲಂಕಾ ವಿಷಯದಲ್ಲಿ ಕೂಡ ಇದೇ ರೀತಿಯ ಸಂಯಮ ಹಾಗೂ ವಿವೇಕದ ನಡೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಭಾರತ ಮುಂದಡಿಯಿಟ್ಟಿದೆ. ಶ್ರೀಲಂಕಾ ವಿಚಾರವನ್ನೇ ತೆಗೆದುಕೊಂಡರೆ, ಹಿಂದೆ ಭಾರತಕ್ಕೆ ನಿಕಟವಾಗಿದ್ದ ಆ ದೇಶ ರಾಜಪಕ್ಸ ಕಾಲದಲ್ಲಿ ಚೀನಾಕ್ಕೆ ಹತ್ತಿರವಾಯಿತು. ಎಷ್ಟರಮಟ್ಟಿಗೆಂದರೆ, ಹಂಬನ್​ತೋಟ ಬಂದರನ್ನು 99 ವರ್ಷಗಳ ಅವಧಿಗೆ ಚೀನಾಕ್ಕೆ ಗುತ್ತಿಗೆಯಾಗಿ ನೀಡಲಾಯಿತು. ಇದಲ್ಲದೆ, ಚೀನಾವು ಶ್ರೀಲಂಕಾಗೆ ಅಗಾಧ ಪ್ರಮಾಣದ ಸಾಲವನ್ನು ನೀಡಿದ್ದು, ಅದನ್ನು ತೀರಿಸಲಾಗಿದೆ ಲಂಕಾ ಒದ್ದಾಡುತ್ತಿದೆ. ಶ್ರೀಲಂಕಾ ಈಗ ತೀವ್ರ ಆರ್ಥಿಕ ಸಂಕಟದಲ್ಲಿ ಮುಳುಗಿದ್ದು, ದೇಶದಲ್ಲಿ ಸಾಮಾಜಿಕ ಅಶಾಂತಿ ಉಂಟಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಜನರು ರೊಚ್ಚಿಗೆದ್ದಿದ್ದು, ಪ್ರತಿಭಟನೆಗಳು ವ್ಯಾಪಕವಾಗಿ ನಡೆಯುತ್ತಿವೆ. ಹೀಗಾಗಿ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಸಂಕಟದ ಸನ್ನಿವೇಶದಲ್ಲಿ ಭಾರತವು ಲಂಕೆಯ ಸಹಾಯಕ್ಕೆ ಮುಂದಾಗಿದ್ದು, ಸಾಲ ಮತ್ತಿತರ ನೆರವನ್ನು ಘೋಷಿಸಿದೆ; ಅಲ್ಲದೆ, ಪ್ರಮುಖ ಜಲವಿದ್ಯುತ್ ಯೋಜನೆಗಳನ್ನು ಅಲ್ಲಿ ನಿರ್ವಿುಸಿಕೊಡಲಿದೆ. ಇದರಿಂದ ಶ್ರೀಲಂಕಾದಲ್ಲಿ ಚೀನಾದ ಮೇಲುಗೈಗೆ ಭಾರತ ತಿರುಗೇಟು ನೀಡಿದಂತಾಗಿದೆ. ಇದರ ಜತೆಗೆ, ಲಂಕೆಯಲ್ಲಿ ಭಾರತದ ತಮಿಳರು ದೊಡ್ಡ ಪ್ರಮಾಣದಲ್ಲಿದ್ದು, ಈ ಬಿಕ್ಕಟ್ಟಿನಿಂದ ಅವರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕಿದೆ.

ಇನ್ನು, ಪಾಕಿಸ್ತಾನದ ವಿಷಯಕ್ಕೆ ಬರುವುದಾದರೆ, ಅಲ್ಲೀಗ ಏರ್ಪಟ್ಟಿರುವ ಸಾಂವಿಧಾನಿಕ ಬಿಕ್ಕಟ್ಟು ಆ ದೇಶದ ಆಂತರಿಕ ವಿಚಾರ ಎಂದುಕೊಂಡರೂ ಅದರ ಪರಿಣಾಮ ಅಷ್ಟಕ್ಕೇ ಸೀಮಿತ ಎಂದು ಭಾವಿಸಲಾಗದು. ಏಕೆಂದರೆ ಆ ದೇಶದ ಜಾಯಮಾನವೇ ಹಾಗೆ. ಪ್ರಧಾನಿ ಇಮ್ರಾನ್ ಖಾನ್ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾದಂತೆ ಕಂಡರೂ ಅವಿಶ್ವಾಸದ ತೂಗುಗತ್ತಿ ಇದ್ದೇ ಇದೆ. ಇನ್ನೊಂದೆಡೆ, ಸೇನೆ ಯಾವ ಹೆಜ್ಜೆಯಿಡುತ್ತದೆ ಎಂಬುದೂ ಮುಖ್ಯವಾಗುತ್ತದೆ. ಆ ದೇಶ ಅಣ್ವಸ್ತ್ರ ಹೊಂದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಎಚ್ಚರ ಬೇಕು. ಈ ಆಂತರಿಕ ಸಂಘರ್ಷದ ಸಂದರ್ಭವನ್ನು ಅಲ್ಲಿನ ಭಯೋತ್ಪಾದಕ ಸಂಘಟನೆಗಳು ಬಳಸಿಕೊಂಡು ಭಾರತದ ಮೇಲೆ ಕತ್ತಿ ಮಸೆಯದಂತೆ ನೋಡಿಕೊಳ್ಳುವ ಹೊಣೆ ಭಾರತ ಸರ್ಕಾರದ ವಿವಿಧ ಅಂಗಗಳ ಮೇಲೆ ಇದೆ. ಆ ಕಾರ್ಯವನ್ನು ಅವು ವಿವೇಚನೆಯಿಂದ, ಜಾಣ್ಮೆಯಿಂದ ನಿಭಾಯಿಸುತ್ತವೆ ಎಂದು ಭರವಸೆ ಇಡಬಹುದು. ಆದರೂ, ಪಾಕ್-ಚೀನಾ ದುಷ್ಟಕೂಟ ಈ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕಟ್ಟೆಚ್ಚರವಂತೂ ಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net