ಅಗತ್ಯ ಸೌಲಭ್ಯ ಕಲ್ಪಿಸಿ; ವೈದ್ಯಕೀಯ ಆಮ್ಲಜನಕದ ಪೂರೈಕೆ ಸಮರ್ಪಕವಾಗಿ ಆಗಲಿ

Edit
Published on

ವೈದ್ಯಕೀಯ ಸೌಕರ್ಯಗಳ ಕೊರತೆಯಿಂದ ಕಳೆದ ಕೆಲ ವಾರಗಳಲ್ಲೇ ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಹಲವು ದುರಂತಗಳು ಸಂಭವಿಸಿವೆ. ಆದರೆ, ಸೋಮವಾರ ರಾಜ್ಯದ ಚಾಮರಾಜನಗರ ಜಿಲ್ಲೆಯೇ ಇಂಥ ದುರಂತಕ್ಕೆ ಸಾಕ್ಷಿಯಾಗಿದ್ದು, 24 ಜನರು ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ಆಮ್ಲಜನಕ ಕೊರತೆಯಿಂದ ಈ ಸಾವುಗಳು ಸಂಭವಿಸಿವೆ ಎಂಬುದು ಸ್ಥಳೀಯರ ಆರೋಪವಾಗಿದೆ. ಆದರೆ, ‘ರೋಗಿಗಳು ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ. ಆಮ್ಲಜನಕ ಕೊರತೆಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಸರ್ಕಾರ ಹೇಳುತ್ತಿದೆ. ಅದೇನೇ ಇದ್ದರೂ, ಪ್ರಸಕ್ತ ಘಟನೆ ಭಾರಿ ಆಘಾತ ಮೂಡಿಸುವ ಜತೆಗೆ, ವ್ಯವಸ್ಥೆಯ ಲೋಪಗಳನ್ನು ಎತ್ತಿಹಿಡಿದಿದೆ. ಸರ್ಕಾರ ತನಿಖೆಗೆ ಆದೇಶಿಸಿದ್ದು, ಮೂರು ದಿನದಲ್ಲಿ ವರದಿ ಪಡೆಯಲಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಈ ದೊಡ್ಡ ದುರಂತ ರಾಜ್ಯದ ಆರೋಗ್ಯ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ.

ವೈದ್ಯಕೀಯ ಆಮ್ಲಜನಕ ಕೊರತೆಯ ಸಮಸ್ಯೆ ನಿವಾರಿಸಿಕೊಳ್ಳಬೇಕು, ಅಗತ್ಯ ಔಷಧಗಳ ದಾಸ್ತಾನು ಇರಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೂ, ಇಂಥ ಗಂಭೀರ ಲೋಪ ಸಂಭವಿಸಿರುವುದು ದುರದೃಷ್ಟಕರ. ಇದು ಬರೀ ಚಾಮರಾಜನಗರ ಜಿಲ್ಲೆಯ ಸಮಸ್ಯೆ ಅಲ್ಲ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ರೋಗಿಗಳು ಚಿಕಿತ್ಸೆ, ಹಾಸಿಗೆ ಲಭ್ಯತೆ ಮತ್ತು ಆಮ್ಲಜನಕಕ್ಕಾಗಿ ಪರದಾಡುವಂಥ ಸನ್ನಿವೇಶ ಸೃಷ್ಟಿಯಾಗಿದೆ. ಇಂಥ ಸಂದರ್ಭದಲ್ಲಿ ಅಗತ್ಯ ಸೌಲಭ್ಯಗಳನ್ನು ತುರ್ತಾಗಿ ಒದಗಿಸುವುದು ಸರ್ಕಾರದ ಕರ್ತವ್ಯ. ವಿಳಂಬಧೋರಣೆ ಅಥವಾ ಉದಾಸೀನ ಮಾಡಿದ್ದಲ್ಲಿ ಅದು ಅಮಾಯಕ ಜನರ ಪ್ರಾಣಕ್ಕೇ ಎರವಾಗುತ್ತದೆ ಮತ್ತು ಇಂಥ ಘಟನೆಗಳಿಂದ ವ್ಯವಸ್ಥೆ ಮೇಲಿನ ವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ ಎಂಬುದಕ್ಕೆ ಚಾಮರಾಜನಗರದ ಪ್ರಕರಣವೇ ಸಾಕ್ಷಿ.

ಇನ್ನಾದರೂ ಸಮಸ್ಯೆಯ ತೀವ್ರತೆ, ರೋಗಿಗಳ ಅಸಹಾಯಕತೆ, ಆಸ್ಪತ್ರೆಗಳು ಅನುಭವಿಸುತ್ತಿರುವ ಕೊರತೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಕೋವಿಡ್ ದೊಡ್ಡ ಮಾನವೀಯ ಸಂಕಷ್ಟವನ್ನು ಸೃಷ್ಟಿಸಿರುವುದರಿಂದ, ಆ ನಿಟ್ಟಿನಲ್ಲಿನ ಪರಿಹಾರ ಹಾಗೂ ಸ್ಪಂದನೆಯ ಹೆಜ್ಜೆಗಳು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಸಂವೇದನೆಯಿಂದ ಕೂಡಿರಬೇಕು. ಆರೋಗ್ಯ ಕ್ಷೇತ್ರದ ಮೇಲೆ ಅತೀವ ಒತ್ತಡವಿದ್ದು, ವೈದ್ಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಬಳಲಿ ಹೋಗುತ್ತಿದ್ದಾರೆ. ಈ ಒತ್ತಡವನ್ನು ಕಡಿಮೆ ಮಾಡಲು ಇತರ ಇಲಾಖೆಯ ನೌಕರರನ್ನು ಕೋವಿಡ್ ನಿರ್ವಹಣೆ ಕೆಲಸಗಳಿಗೆ ನಿಯೋಜಿಸುವ ಅಗತ್ಯವೂ ಇದೆ.

ಚಾಮರಾಜನಗರದಲ್ಲಿ ಸಂಭವಿಸಿರುವಂಥ ಘಟನೆ ಮತ್ತೆಂದೂ ಮರುಕಳಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತಕೊಂಡು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು, ಮುಖ್ಯವಾಗಿ ಆಮ್ಲಜನಕದ ಸಮರ್ಪಕ ಪೂರೈಕೆಗೆ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳುವುದು ಈಗಿನ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net