

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದ ನಂತರದಲ್ಲಿ, ವಿಧಾನಮಂಡಲದ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಚಾಲನೆ ದೊರೆಯಿತು. ಸಾಮಾನ್ಯವಾಗಿ, ರಾಜ್ಯಪಾಲರ ಭಾಷಣವು ಸರ್ಕಾರ ಮುಂದಿನ ದಿನಗಳಲ್ಲಿ ಸಾಗುವ ದಾರಿಯನ್ನು ತೆರೆದಿಡುತ್ತದೆ; ಆಡಳಿತದ ಬಗ್ಗೆ ಒಂದು ನೋಟವನ್ನು ಕಟ್ಟಿಕೊಡುತ್ತದೆ. ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರ ಭಾಷಣದಲ್ಲೂ ಇಂಥದೊಂದು ಸೆಳಕು ಸಹಜವಾಗಿ ಕಂಡುಬಂತು. ಸರ್ಕಾರದ ಐದು ಸಂಕಲ್ಪಗಳನ್ನು ರಾಜ್ಯಪಾಲರು ವಿವರಿಸಿದರು.
ಮುಂದಿನ ಐದು ವರ್ಷಗಳಲ್ಲಿ ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಪ್ರಾಮಾಣಿಕ ಪ್ರಯತ್ನ; ದ್ವೇಷರಹಿತ, ಪ್ರೀತಿಯುಕ್ತ ಸಮಾಜ ನಿರ್ಮಾಣ ಮಾಡಲು ಕ್ರಮ; ಎಲ್ಲಾ ಜಾತಿ, ಧರ್ಮ ಮತ್ತು ಪಂಗಡಗಳ ಜನರು ನ್ಯಾಯಯುತ ಪಾಲನ್ನು ಪಡೆಯುವಂತೆ ಮಾಡುವುದು; ಭ್ರಷ್ಟಾಚಾರ ಮೂಲೋತ್ಪಾಟನೆಗೆ ಆಡಳಿತಾತ್ಮಕ, ಶಾಸನಾತ್ಮಕ ಕ್ರಮ; ಶಾಂತಿಯುತ, ಸಮೃದ್ಧವಾದ, ಸೌಹಾರ್ದಯುತವಾದ ಸರ್ವಜನಾಂಗದ ಶಾಂತಿಯ ತೋಟ ನಿರ್ವಿುಸಲು ಬದ್ಧ- ಈ ಪಂಚ ಆಕಾಂಕ್ಷೆಗಳನ್ನು ಅನಾವರಣಗೊಳಿಸಿದರು. ಜತೆಗೆ, ನೀರಾವರಿ, ಕೃಷಿ, ಪ್ರವಾಸೋದ್ಯಮ, ಎಪಿಎಂಸಿ, ಶಿಕ್ಷಣ, ವಸತಿ ಇತ್ಯಾದಿ ರಂಗದಲ್ಲಿ ತರಬಯಸಿರುವ ಕೆಲವು ಹೊಸ ಯೋಜನೆಗಳ ಕುರಿತು ಸಹ ಉಲ್ಲೇಖ ಮಾಡಿದರು. ಒಟ್ಟಿನಲ್ಲಿ ಸರ್ಕಾರದ ಐದು ವರ್ಷಗಳ ಕಾರ್ಯನಿರ್ವಹಣೆ ಬಗ್ಗೆ ಒಂದು ಮುನ್ನೋಟವನ್ನು ಕಟ್ಟಿಕೊಟ್ಟರು. ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸಲು ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸದ್ದರ ಬಗ್ಗೆ ಟೀಕೆಯೂ ರಾಜ್ಯಪಾಲರ ಭಾಷಣದಲ್ಲಿ ವ್ಯಕ್ತವಾಯಿತು.
ಇನ್ನೊಂದೆಡೆ, ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕ ಯಾರೆಂಬ ಕಗ್ಗಂಟು ಸೋಮವಾರವೂ ಬಗೆಹರಿಯದೆ, ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನದ ಮೊದಲ ದಿನಕ್ಕೆ ಹೋಗುವಂತಾಯಿತು. ರಾಜ್ಯದ ಶಾಸನಸಭೆ ಇತಿಹಾಸದಲ್ಲಿ ಹೀಗಾದ ಉದಾಹರಣೆ ಇಲ್ಲ. ಚುನಾವಣೆಯಲ್ಲಿ ಸೋಲುಂಡಾಗ ಯಾವುದೇ ಪಕ್ಷ ಕಳಾಹೀನವಾಗುವುದು ಸಹಜ ವಿದ್ಯಮಾನ. ಜನತಂತ್ರದಲ್ಲಿ ಸೋಲುಗೆಲುವು ಇವೆಲ್ಲ ಸರ್ವೆಸಾಮಾನ್ಯ. ಬಿಜೆಪಿ ಈಗ ಅಂಥ ಘಟ್ಟದಲ್ಲಿದೆ. ಆದರೆ, ವಿಧಾನಸಭಾ ಚುನಾವಣೆ ಸೋಲಿನಿಂದ ಹೊರಬಂದು, ಮುಂದಿನ ದಿನಗಳಲ್ಲಿ ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಬಿಜೆಪಿ ಸಿದ್ಧವಾಗಬೇಕಾದುದು ಅನಿವಾರ್ಯ.
ಇನ್ನೇನು, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಕಾವು ನಿಧಾನಕ್ಕೆ ಏರತೊಡಗುತ್ತದೆ. ಆ ನಿಟ್ಟಿನಲ್ಲಿಯೂ ಪಕ್ಷಗಳು ಸಜ್ಜಾಗಬೇಕಾಗುತ್ತದೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನೀಡಿತ್ತು. ಅಧಿಕಾರಕ್ಕೆ ಬರುತ್ತಿದ್ದಂತೆ ಈ ವಾಗ್ದಾನಗಳನ್ನು ಈಡೇರಿಸಲು ಕ್ರಮಗಳನ್ನು ಕೈಗೊಂಡಿದೆ. ಆದರೆ ಇದಕ್ಕಾಗಿ ಬೃಹತ್ ಮೊತ್ತ ಹಣಕಾಸನ್ನು ಒದಗಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಆಲೋಚನೆಯೇನೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಮಂಡಿಸಲಿರುವ ಬಜೆಟ್ನಲ್ಲಿ ಬಹಿರಂಗವಾಗಲಿದೆ. ಆದರೆ ಗ್ಯಾರಂಟಿ ಅನುಷ್ಠಾನದ ಭರದಲ್ಲಿ ಉಳಿದ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸೂಕ್ಷ್ಮವಾಗಿ ನಿಭಾಯಿಸುವ ಅನಿವಾರ್ಯತೆಯೂ ಇದೆ. ಹಣಕಾಸು ನಿರ್ವಹಣೆಯಲ್ಲಿ ಅನುಭವ ಇರುವ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಒಟ್ಟಾರೆಯಾಗಿ ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲಾಗಿದೆಯೆಂಬುದಂತೂ ಖಚಿತ; ನಾಡು ಸರ್ಕಾರದ ಹೆಜ್ಜೆಯನ್ನು ನಿಕಟವಾಗಿ ಗಮನಿಸುವುದು ನಿಶ್ಚಿತ.