ಅಕ್ರಮಕ್ಕೆ ಕಡಿವಾಣ ಬೀಳಲಿ: ನೇಮಕಾತಿಗಾಗಿ ಸಹಕಾರ ಪರೀಕ್ಷಾ ಪ್ರಾಧಿಕಾರ ರಚನೆಗೆ ಚಿಂತನೆ..

Editorial
Published on

ಸಹಕಾರ ಇಲಾಖೆಯ ಅಧೀನದ ಸಂಸ್ಥೆಗಳಲ್ಲಿ ನೇಮಕಾತಿಗಾಗಿ ಸಹಕಾರ ಪರೀಕ್ಷಾ ಪ್ರಾಧಿಕಾರ ರಚನೆಗೆ ಸರ್ಕಾರ ಒಲವು ತೋರಿರುವುದು ಮಹತ್ವದ ಸಂಗತಿ. ಹಾಗೂ ಇಂಥ ನಡೆ ಅಗತ್ಯವೂ ಆಗಿತ್ತು. ಸಹಕಾರ ಸಂಸ್ಥೆಗಳಲ್ಲಿ ಪ್ರತಿವರ್ಷವೂ ನಿರಂತರವಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿಗಳು ನಡೆಯುತ್ತಲೇ ಇರುತ್ತವೆ. ಈ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ನೇಮಕಾತಿ ಅಕ್ರಮದ ಕೆಲವು ಪ್ರಕರಣಗಳು ಬೆಳಕಿಗೆ ಬಂದಿರುವುದು ಈ ಆರೋಪಗಳಿಗೆ ಪುಷ್ಪಿ ಒದಗಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸುವ ಮೂಲಕ ನೇಮಕಾತಿ ಅಕ್ರಮಗಳಿಗೆ ಕಡಿವಾಣ ಹಾಕಲು ಆಲೋಚಿಸಿದೆ.

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್), ವಿವಿಧ ಜಿಲ್ಲೆಗಳಲ್ಲಿರುವ ಹಾಲು ಒಕ್ಕೂಟಗಳು, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್), ಕೋ ಆಪರೇಟಿವ್ ಸೊಸೈಟಿಗಳು ಸೇರಿದಂತೆ ರಾಜ್ಯದ ಸಹಕಾರ ಸಂಸ್ಥೆಗಳಲ್ಲಿ ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ನೇಮಕಾತಿಗಳು ನಡೆಯುತ್ತವೆ. ಈ ಸಂಸ್ಥೆಗಳಲ್ಲಿ ಅಂದಾಜು 2.5 ಲಕ್ಷ ಕಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇಲ್ಲಿನ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತ, ಅವ್ಯವಹಾರ, ಭ್ರಷ್ಟಾಚಾರ ನಡೆಯುತ್ತಿದ್ದು, ಒಂದೊಂದು ಹುದ್ದೆಗೆ ಹತ್ತಾರು ಲಕ್ಷ ರೂಪಾಯಿ ಲಂಚದ ವ್ಯವಹಾರ ನಡೆಯುತ್ತದೆಯೆಂಬ ಆರೋಪಗಳಿವೆ. ಈ ರೀತಿ ನೇಮಕ ಆಗುವ ಸಿಬ್ಬಂದಿ ಕೂಡ ಅಕ್ರಮ, ಭ್ರಷ್ಟಾಚಾರಗಳಲ್ಲಿ ತೊಡಗುವ ಸಾಧ್ಯತೆ ಇದ್ದು, ಇದರಿಂದ ಸಹಕಾರ ಕ್ಷೇತ್ರಕ್ಕೆ ಹಿನ್ನಡೆ ಉಂಟಾಗಬಹುದಾಗಿದೆ ಎಂಬುದು ಪ್ರಜ್ಞಾವಂತರ ಕಳವಳ. ಈ ಎಲ್ಲ ಕಾರಣಕ್ಕೆ ನೇಮಕಾತಿ ಪ್ರಾಧಿಕಾರ ರಚಿಸುವ ಬೇಡಿಕೆ ಕೇಳಿಬಂದಿದೆ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿಗಳನ್ನು ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಪ್ರಾಧಿಕಾರ ರಚಿಸಿ ಸಹಕಾರ ಸಂಸ್ಥೆಗಳ ಎಲ್ಲ ನೇಮಕಾತಿಗಳನ್ನು ಒಂದೇ ವೇದಿಕೆಯಡಿ ತರುವ ಉದ್ದೇಶ ಸರ್ಕಾರದ್ದಾಗಿದೆ.

ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಕೆಎಎಸ್, ಕೆಪಿಎಸ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿಗೆ ಈ ಆಯೋಗವು ನೇಮಕಾತಿ ಪರೀಕ್ಷೆಗಳನ್ನು ಸಂಘಟಿಸುತ್ತದೆ. ಇಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ನೇಮಕಾತಿ ಅಕ್ರಮಗಳು ಬೆಳಕಿಗೆ ಬಂದಿವೆ; ಎಷ್ಟೋ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದೂ ಉಂಟು. ಸರ್ಕಾರಿ ನೇಮಕಾತಿಗಳಿಗೂ ವಿವಾದಕ್ಕೂ ನಂಟು. ಈ ಹಿನ್ನೆಲೆಯಲ್ಲಿ ಸರ್ಕಾರವು ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸುವಾಗ ಅಕ್ರಮಕ್ಕೆ ಆಸ್ಪದ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಉದ್ದೇಶಿತ ಪ್ರಾಧಿಕಾರದಲ್ಲಿ ಅನುಭವಿಗಳು, ಪ್ರಾಮಾಣಿಕರು ಇರುವಂತೆ ನೋಡಿಕೊಳ್ಳಬೇಕಾದುದು ಬಹುಮುಖ್ಯ. ನೇಮಕಾತಿ ಪರೀಕ್ಷೆಗಳನ್ನು ಯಾವುದೇ ಅಕ್ರಮ ಎಸಗದಂತೆ ನಡೆಸುವ ನಿಟ್ಟಿನಲ್ಲಿ ಪ್ರಶ್ನೆಪತ್ರಿಕೆ ತಯಾರಿಕೆ, ಮೌಲ್ಯಮಾಪನದಲ್ಲಿ ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಆಗ ಮಾತ್ರ ಪ್ರಾಧಿಕಾರ ರಚನೆ ಉದ್ದೇಶ ಸಾರ್ಥಕವಾಗುತ್ತದೆ; ಪ್ರತಿಭಾವಂತ ಯೋಗ್ಯ ಅಭ್ಯರ್ಥಿಗಳಿಗೆ ಉದ್ಯೋಗ ದೊರೆತು ಸಹಕಾರ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಸಹಕಾರ ರಂಗವು ವಿಶೇಷವಾಗಿ ಗ್ರಾಮೀಣ ಭಾಗದ ಜೀವನಾಡಿಯಾಗಿದ್ದು, ಜನರಿಗೆ ಸೇವೆಸವಲತ್ತುಗಳು ಸರಿಯಾಗಿ ದೊರೆಯುವಂತಾಗಲು ಈ ಕ್ಷೇತ್ರ ಸದೃಢವಾಗಿರಬೇಕಾದುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net