ಸಂಪಾದಕೀಯ | ಕಳವಳಕಾರಿ ಬೆಳವಣಿಗೆಗಳು; ಚೀನಾ ಮೇಲಿನ ಅತಿ ಅವಲಂಬನೆಯ ಫಲ

Editorial
Published on

ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಪ್ರಕ್ಷುಬ್ಧತೆ ನಡುವೆಯೇ ಪಾಕಿಸ್ತಾನ ಮತ್ತು ಶ್ರೀಲಂಕಾದ ಬೆಳವಣಿಗೆಗಳು ಕಳವಳಕ್ಕೆ ಕಾರಣವಾಗಿವೆ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವ ಮೌಲ್ಯಗಳ ಅವಗಣನೆ, ಒಂದೇ ದೇಶದ ಮೇಲಿನ ಅತಿಯಾದ ಅವಲಂಬನೆ ಹೇಗೆಲ್ಲ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಸಾಕ್ಷಿ. ಪಾಕಿಸ್ತಾನದಲ್ಲಿ ಈಗ ರಾಜಕೀಯ ಅಸ್ಥಿರತೆ. ಸೇನೆಯ ಸಹಕಾರ ಮತ್ತು ಆಡಳಿತಾರೂಢ ಪಕ್ಷದ ಕೆಲ ಸಂಸದರ ಬೆಂಬಲವನ್ನು ಕಳೆದುಕೊಂಡಿರುವ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಸಿಡಿದೆದ್ದಿವೆ. ಪಾಕ್ ಸಂಸತ್​ನಲ್ಲಿ ಭಾನುವಾರ ಅವಿಶ್ವಾಸ ಗೊತ್ತುವರಿ ತಿರಸ್ಕಾರಗೊಂಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಸಂಸತ್ ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸಲು ರಾಷ್ಟ್ರಪತಿ ಆದೇಶ ನೀಡಿದ್ದಾರೆ. ಪಾಕ್​ನಲ್ಲಿ ರಾಜಕೀಯ ಅಸ್ಥಿರತೆ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಅಲ್ಲಿನ ಯಾವುದೇ ಚುನಾಯಿತ ಸರ್ಕಾರ ಪೂರ್ಣಾವಧಿಯನ್ನು ಪೂರೈಸಿಲ್ಲ. ಈ ಸಾಲಿಗೆ ಈಗ ಹೊಸ ಸೇರ್ಪಡೆ ಇಮ್ರಾನ್ ಖಾನ್. ‘ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಅಮೆರಿಕ ಯತ್ನಿಸುತ್ತಿದೆ’ ಎಂದು ಇಮ್ರಾನ್ ಆರೋಪಿಸಿದ್ದಾರಾದರೂ, ಚೀನಾದ ಅಣತಿಯ ಮೇರೆಗೇ ಪ್ರತಿ ಹೆಜ್ಜೆ ಇರಿಸುವ ಪಾಕಿಸ್ತಾನ, ಮತ್ತೊಮ್ಮೆ ಮುಗ್ಗರಿಸಿದೆ ಎಂಬುದು ಸ್ಪಷ್ಟ.

ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಈಗ ತುರ್ತು ಪರಿಸ್ಥಿತಿ. ಜನಜೀವನ ದುರ್ಭರವಾಗಿದ್ದು, ವಿದೇಶಿ ವಿನಿಮಯ ತೀವ್ರ ಇಳಿದಿದ್ದರಿಂದಾಗಿ ಅಗತ್ಯ ಆಹಾರವಸ್ತುಗಳು ಮತ್ತು ಇಂಧನವನ್ನು ಆಮದು ಮಾಡಿಕೊಳ್ಳಲು ಸಹ ಆಗುತ್ತಿಲ್ಲ. ಪೆಟ್ರೋಲ್, ಡೀಸೆಲ್, ಅಕ್ಕಿ, ಬೇಳೆ, ಹಾಲು ಸೇರಿ ಜೀವನಾವಶ್ಯಕ ವಸ್ತುಗಳ ದರಗಳು ಗಗನಮುಖಿಯಾಗಿವೆ. ಸಾಲದ ದೊಡ್ಡ ಹೊರೆಯೂ ಅದರ ಮೇಲಿದೆ. ಶ್ರೀಲಂಕಾ ನಾಯಕತ್ವಕ್ಕೆ ಈ ಸಮಸ್ಯೆಯ ಅಂದಾಜು ಇದ್ದರೂ, ಪರಿಹಾರ ಹುಡುಕುವಲ್ಲಿ ಅದು ಸೋತಿದೆ. ಇದೇ ಸ್ಥಿತಿ ಮುಂದುವರಿದರೆ ದೊಡ್ಡ ಮಾನವೀಯ ಸಂಕಷ್ಟವನ್ನು ಈ ದ್ವೀಪರಾಷ್ಟ್ರ ಅನುಭವಿಸಬೇಕಾಗುತ್ತದೆ. ಚೀನಾ ತನ್ನ ವಿಸ್ತರಣಾನೀತಿಯ ಭಾಗವಾಗಿ, ಹಲವು ರಾಷ್ಟ್ರಗಳಿಗೆ ಸಹಾಯ ಮಾಡುವ ನೆಪದಲ್ಲಿ ಅವುಗಳನ್ನು ಸಾಲಗಾರ ರಾಷ್ಟ್ರಗಳಾಗಿ ಮಾಡಿರುವುದು ಗೊತ್ತಿರುವಂಥದ್ದೇ. ಅದರಲ್ಲೂ, ಭಾರತದ ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್​ನಲ್ಲಿ ಮೇಲುಗೈ ಸ್ಥಾಪಿಸಲು ಡ್ರಾ್ಯಗನ್ ರಾಷ್ಟ್ರ ಕೈಗೊಂಡ ಕ್ರಮಗಳು ಒಂದೆರಡಲ್ಲ. ನೇಪಾಳ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪ್ರಮಾದಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ. ಮತ್ತೊಂದೆಡೆ, ಜಾಗತಿಕವಾಗಿ ಭಾರತದ ಬಗ್ಗೆ ವಿಶ್ವಾಸ ಹೆಚ್ಚಿದೆ, ಭಾರತ ಭರವಸೆಯಾಗಿ ಕಾಣುತ್ತಿದೆ ಎಂಬುದಕ್ಕೆ ಕಳೆದ 15 ದಿನಗಳಲ್ಲಿ ದೇಶಕ್ಕೆ 10 ರಾಷ್ಟ್ರಗಳ ವಿದೇಶಾಂಗ ಸಚಿವರು ಭೇಟಿ ನೀಡಿರುವುದೇ ಸಾಕ್ಷಿ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮತ್ತು ಜನರ ಆಶಯಗಳಿಗೆ ಬದ್ಧವಾಗಿ ಆಡಳಿತಗಾರರು ನಡೆದುಕೊಂಡಾಗ, ಯಾವುದೇ ದೇಶ ನೆಮ್ಮದಿಯ ದಿನಗಳನ್ನು ಕಾಣಬಹುದು. ಅಧಿಕಾರಲಾಲಸೆ, ಅರಾಜಕತೆಯೇ ಉಸಿರಾಡುತ್ತಿದ್ದರೆ ಏನಾಗುತ್ತದೆ ಎಂಬುದಕ್ಕೆ ಪಾಕಿಸ್ತಾನ ಮತ್ತು ಶ್ರೀಲಂಕಾದ ಬೆಳವಣಿಗೆಗಳು ನಿದರ್ಶನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net