ಸಹಕಾರ, ಬಾಂಧವ್ಯ ಹೆಚ್ಚಳ; ಜಿ-20 ಶೃಂಗಸಭೆಯಲ್ಲಿ ಮಹತ್ವದ ವಿಷಯಗಳು ಚರ್ಚೆಗೆ

Editorial
Published on

ಕಳೆದ ಎರಡು ವರ್ಷಗಳಿಂದ ಕರೊನಾ ಸೋಂಕು ಜಾಗತಿಕವಾಗಿ ಕಾಡುತ್ತಿರುವುದರಿಂದ, ಈ ಮಹಾಮಾರಿ ವಿರುದ್ಧದ ಹೋರಾಟವೇ ಮೊದಲ ಆದ್ಯತೆಯಾಗಿತ್ತು. ಈಗಲೂ ಹಲವು ದೇಶಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿವೆಯಾದರೂ, ಪರಿಸ್ಥಿತಿ ಕ್ರಮೇಣ ನಿಯಂತ್ರಣಕ್ಕೆ ಬರುತ್ತಿದೆ. ಅಂತಾರಾಷ್ಟ್ರೀಯ ಶೃಂಗಸಭೆಗಳು, ಮಹತ್ವದ ಮಾತುಕತೆಗಳು, ಒಪ್ಪಂದಗಳೆಲ್ಲ ನನೆಗುದಿಗೆ ಬಿದ್ದಿದ್ದವು. ಈ ನಡುವೆ ಕೆಲ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಡಿಜಿಟಲ್ ವೇದಿಕೆಗಳಲ್ಲೇ ನಡೆಸಬೇಕಾಯಿತು. ಇಟಲಿಯ ರಾಜಧಾನಿ ರೋಮ್ಲ್ಲಿ ಅಕ್ಟೋಬರ್ 30 ಮತ್ತು 31 ರಂದು ಜಿ-20 ರಾಷ್ಟ್ರಗಳ ಶೃಂಗಸಭೆ ಜಾಗತಿಕ ನಾಯಕರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿರುವುದು ಗಮನಾರ್ಹ. ಈ ನಾಯಕರ ಸಮಾಗಮ ಮಹತ್ವದ ವಿಷಯಗಳ ಚರ್ಚೆಗೆ ನಾಂದಿಯಾಯಿತು. ಹವಾಮಾನ ಬದಲಾವಣೆ ಮತ್ತು ಇಂಧನ ವಿಷಯದ ಬಗೆಗಿನ ಚರ್ಚೆ ಗಮನ ಸೆಳೆದಿದೆ. ಇವೆರಡೂ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವುದೂ ಹೌದು.

ಕರೊನಾ ಸೃಷ್ಟಿಸಿರುವ ಹೊಸ ಸವಾಲುಗಳ ವಿರುದ್ಧ ಮತ್ತಷ್ಟು ಶಕ್ತಿಯುತವಾಗಿ ಹೋರಾಡುವ ಸಂಕಲ್ಪವೂ ಜಾಗತಿಕ ನಾಯಕರಿಂದ ವ್ಯಕ್ತವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಸಹಕಾರ ಹೆಚ್ಚಳ ಮತ್ತು ನೂತನ ಆವಿಷ್ಕಾರಗಳತ್ತ ಗಮನ ಹರಿಸಿರುವುದು ಉತ್ತಮ ಬೆಳವಣಿಗೆ. ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಒಮ್ಮತಕ್ಕೆ ಬರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವ ಜತೆಗೆ, ಹಲವು ದೇಶಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಿದ್ದಾರೆ. ‘ರೋಮ್ಲ್ಲಿ ನಡೆದ ಜಿ-20 ಶೃಂಗಸಭೆ ಫಲಪ್ರದವಾಗಿದೆ. ಆರೋಗ್ಯ, ಆರ್ಥಿಕತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಹವಾಮಾನ ಬದಲಾವಣೆ ವಿರುದ್ಧ ಹೋರಾಟಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ದೇಶದ ಜಿಡಿಪಿಯ ಶೇಕಡ 1ರಷ್ಟನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಪರಿಸರಸ್ನೇಹಿ ಯೋಜನೆಗಳಿಗೆ ನೀಡುವ ಕುರಿತು ಗುರಿ ನಿಗದಿಪಡಿಸಿಕೊಳ್ಳುವಂತೆ ಭಾರತ ಕರೆ ನೀಡಿದೆ.

ತಾಪಮಾನ ಹೆಚ್ಚಳದಿಂದ ಅಕಾಲಿಕ ಮಳೆ ಸೇರಿದಂತೆ ಇತರ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿದ್ದು, ಮುಂಬರುವ ವರ್ಷಗಳಲ್ಲಿ ಸ್ಥಿತಿ ಮತ್ತಷ್ಟು ಕಳವಳಕಾರಿಯಾಗುವ ಬಗ್ಗೆ ವಿಶ್ವಸಂಸ್ಥೆಯ ವರದಿ ಕೆಲ ದಿನಗಳ ಹಿಂದಷ್ಟೇ ಎಚ್ಚರಿಸಿದೆ. ಪರಿಸರ ಮತ್ತು ಅಭಿವೃದ್ಧಿ ಈ ಎರಡರಲ್ಲಿ ಸಮತೋಲನ ಸಾಧಿಸಬೇಕಿದೆ. ಪರಿಸರವನ್ನು ಶೋಷಿಸಿ ಮಾಡುವ ‘ಅಭಿವೃದ್ಧಿ’ ಎಲ್ಲ ದೃಷ್ಟಿಯಿಂದಲೂ ಮಾರಕವಾಗಿ ಪರಿಣಮಿಸುತ್ತಿದೆ. ಸುಸ್ಥಿರ ಅಭಿವೃದ್ಧಿಯ ಕುರಿತಂತೆ ಚರ್ಚೆಗಳು ಸಾಕಷ್ಟು ನಡೆದಿವೆಯಾದರೂ, ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳು ಈ ಮಾದರಿಯನ್ನೇ ಆಯ್ದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಅಂತಾರಾಷ್ಟ್ರೀಯ ಸವಾಲುಗಳನ್ನು ಏಕತೆ, ಸಮನ್ವಯ, ಸಹಕಾರದ ಬಲದಿಂದಲೇ ಪರಿಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜಿ-20 ಶೃಂಗಸಭೆ ಉತ್ತಮ ಸಂದೇಶವಂತೂ ರವಾನಿಸಿದ್ದು, ನಿರ್ಣಯಗಳು ಅನುಷ್ಠಾನದ ರೂಪಕ್ಕೆ ಬರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net