ಸಂಪಾದಕೀಯ | ಮರುವ್ಯಾಖ್ಯಾನ ಅಗತ್ಯ; ಕಾನೂನಿನ ದುರ್ಬಳಕೆಗೆ ತಡೆ ಹಾಕಬೇಕು

Editorial
Published on

ಕೇಂದ್ರ ಸರ್ಕಾರವು ಮರುಪರಿಶೀಲನೆ ಪೂರ್ಣಗೊಳಿಸುವವರೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸದಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬುಧವಾರ ಸೂಚನೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ. ದೇಶದ್ರೋಹ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿ ಇರುವವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೇಂದ್ರದಲ್ಲಿ

ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಳೆಯ ಹಾಗೂ ಅಪ್ರಸ್ತುತವಾದ ಕಾನೂನುಗಳನ್ನು ರದ್ದುಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿ, ಆ ನಿಟ್ಟಿನಲ್ಲಿ ಹಲವು ಹೆಜ್ಜೆಗಳನ್ನು ಕ್ರಮಿಸಿದೆ. ಆದರೆ, ಇದೇ ಸರ್ಕಾರದ ಅವಧಿಯಲ್ಲಿ ದೇಶದ್ರೋಹದ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದು ಮಾತ್ರವಲ್ಲದೆ ದುರ್ಬಳಕೆ ಪ್ರಮಾಣವೂ ಅಧಿಕಗೊಂಡಿರುವುದು ಕಳವಳಕಾರಿ. ಇತ್ತೀಚಿನ ಘಟನೆಯಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದ್ದಕ್ಕೂ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದ್ದು, ಇದರ ದುರ್ಬಳಕೆಗೆ ನಿದರ್ಶನ. ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಬ್ರಿಟಿಷ್ ಕಾಲದಲ್ಲಿ ರೂಪಿಸಲಾದ ಈ ಕಾನೂನಿಗೆ ಮರುವ್ಯಾಖ್ಯಾನ ಅಗತ್ಯವಾಗಿದ್ದು, ದುರ್ಬಳಕೆಗೂ ಕಡಿವಾಳ ಹಾಕಬೇಕಿದೆ. ಈ ಸಂಬಂಧ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿರುವುದು ಹೌದಾದರೂ, ಪ್ರಕರಣ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇರುವುದರಿಂದ ಇನ್ನಷ್ಟು ಜಿಜ್ಞಾಸೆ ಸೃಷ್ಟಿಸಿದೆ.

2018ರಲ್ಲಿ ಕಾನೂನು ಆಯೋಗದ ವರದಿ ಈ ಕುರಿತಂತೆ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂಬುದು ಗಮನಾರ್ಹ. ‘ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ ಅಭಿಪ್ರಾಯವನ್ನು ಹೊಂದಿರಬೇಕು ಎಂಬುದು ದೇಶಪ್ರೇಮದ ಮಾನದಂಡವಲ್ಲ. ಸರ್ಕಾರವನ್ನು ರಚನಾತ್ಮಕವಾಗಿ ಟೀಕಿಸುವ ಮೂಲಕ ಅಥವಾ ಸರ್ಕಾರದ ನೀತಿಯಲ್ಲಿರುವ ಲೋಪಗಳನ್ನು ಎತ್ತಿ ತೋರಿಸುವ ಮೂಲಕವೂ ದೇಶಪ್ರೇಮವನ್ನು ತೋರಬಹುದು. ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಗೆಡಹುವ ಅಥವಾ ಕಾನೂನುಬಾಹಿರ ಮಾರ್ಗದ ಮೂಲಕ ಸರ್ಕಾರ ಉರುಳಿಸುವ ಉದ್ದೇಶದ ಕೃತ್ಯಗಳಲ್ಲಿ ಮಾತ್ರ 124ಎ ಸೆಕ್ಷನ್ ಅನ್ವಯ ಮಾಡಬೇಕು’ ಎಂಬ ಮೌಲಿಕ ಎಚ್ಚರಿಕೆಯನ್ನೂ ವರದಿ ನೀಡಿದೆ. ಅನೇಕ ಹೋರಾಟಗಳಲ್ಲಿ ಭಾಗಿಯಾದವರು ಮತ್ತು ಆ ಹೋರಾಟಗಳನ್ನು ಬೆಂಬಲಿಸಿದವರ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಹೀಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಹೇಗೆ ಸಾಧ್ಯ?

2010-2021ರ ಅವಧಿಯಲ್ಲಿ 13,306 ಆರೋಪಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ಸ್ಪಷ್ಟ. ಈಗಿನ ಕಾಲಘಟ್ಟದಲ್ಲಿ ಈ ಕಾನೂನಿನ ಅಗತ್ಯವೇ ಇಲ್ಲ ಎಂಬುದು ಅರ್ಜಿದಾರರ ವಾದ. ಸೆಕ್ಷನ್ ರದ್ದುಪಡಿಸುವುದು ಪರಿಹಾರವಲ್ಲ, ಕಾನೂನಿನಲ್ಲಿರುವ ಕೊರತೆಗಳನ್ನು ಸರಿಪಡಿಸಲಾಗುವುದು ಎಂಬುದು ಸರ್ಕಾರದ ಸಮರ್ಥನೆ. ಅದೇನೆ ಇದ್ದರೂ, ಯಾವುದೇ ಕಾನೂನು ಜನಸಾಮಾನ್ಯರ ದನಿಯಾಗಬೇಕು, ಹಿತವನ್ನು ರಕ್ಷಿಸಬೇಕು. ದುರ್ಬಳಕೆಗೆ ಅವಕಾಶ ಇರಬಾರದು. ಈ ಹಿನ್ನೆಲೆಯಲ್ಲಿ ದೇಶದ್ರೋಹ ಕಾನೂನಿನ ಮರುವ್ಯಾಖ್ಯಾನ ಅಗತ್ಯವಿದ್ದು, ಪುನರ್ ಪರಿಶೀಲನೆಯ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತಾಗಬೇಕು. ನಿಗದಿತ ಕಾಲಾವಧಿಯಲ್ಲಿ ಕೇಂದ್ರ ಇದನ್ನು ಪೂರ್ಣಗೊಳಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net