

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಮಂಡಿಸುತ್ತಿರುವುದು ಅವರ ಐದನೇ ಮತ್ತು ಈ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಲಿದೆ. 2024ರಲ್ಲಿ ಲೋಕಸಭೆ ಚುನಾವಣೆಗೆ ಮೊದಲು ಮುಂದಿನ ವರ್ಷದ ಬಜೆಟ್ನಲ್ಲಿ ಕೆಲವು ಘೋಷಣೆಗಳನ್ನು ಮಾಡಲು ಅವಕಾಶ ಇದೆಯಾದರೂ ಅದು ಮಧ್ಯಂತರ ಬಜೆಟ್ ಆಗಿರುತ್ತದೆ. ಅಲ್ಲದೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2023ರಲ್ಲಿ ನಿಗದಿಯಾಗಿರುವ ರಾಜ್ಯ ಚುನಾವಣೆಗಳತ್ತಲೂ ಗಮನಹರಿಸಬೇಕಾಗಿದೆ. ಜಾಗತಿಕವಾಗಿ ಪ್ರತಿಕೂಲ ಪರಿಸ್ಥಿತಿ, ಮತದಾರರ ಒಲವು ಗಳಿಸುವ ಸವಾಲು, ವಿತ್ತೀಯ ಕೊರತೆ ನಡುವೆಯೇ ಹಣಕಾಸಿನ ಸಂಪನ್ಮೂಲಗಳ ಮೇಲಿನ ಎಳೆತ ಮತ್ತು ಒತ್ತಡಗಳನ್ನು ಸಮತೋಲನದಿಂದ ನಿರ್ವಹಿಸಿ ನಿರೀಕ್ಷಿತ ಆರ್ಥಿಕ ಬೆಳವಣಿಗೆ ಸಾಧಿಸುವ ಸವಾಲಿನ ಕಾರ್ಯವನ್ನು ಹಣಕಾಸು ಸಚಿವರು ನಿರ್ವಹಿಸಬೇಕಾಗಿದೆ. ಬಜೆಟ್ ಮುನ್ನ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಕಿ-ಅಂಶಗಳು ತುಸು ಸಮಾಧಾನ ಮೂಡಿಸುವಂತಿವೆ.
ಮುಂದಿನ 2023-24ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ. 6.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದ್ದು, ಜಾಗತಿಕವಾಗಿ ಪ್ರತಿಕೂಲವಾಗಿರುವ ಪರಿಸ್ಥಿತಿಯಲ್ಲಿ ಇದು ಆಶಾವಾದ ಮೂಡಿಸುವಂತಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಎರಡು ವರ್ಷದ ಸಂಕಷ್ಟದ ನಂತರ ಜಾಗತಿಕ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ 2022ರ ವರ್ಷಾರಂಭದಲ್ಲಿ ರಷ್ಯಾ- ಯೂಕ್ರೇನ್ ಯುದ್ಧ ಶುರುವಾಯಿತು. ಇನ್ನೂ ಅಂತ್ಯ ಕಾಣದ ಈ ಸಮರವು ವಿಶ್ವದಾದ್ಯಂತ ಆರ್ಥಿಕ ಹಿನ್ನಡೆಯ ವಾತಾವರಣ ಸೃಷ್ಟಿಸಿದೆ. ಈ ನಡುವೆಯೂ ಭಾರತವು ಉತ್ತಮ ಎನ್ನಬಹುದಾದ ಆರ್ಥಿಕ ಬೆಳವಣಿಗೆ ಸಾಧಿಸುತ್ತ ಮುಂದುವರಿದಿರುವುದು ತುಲನಾತ್ಮಕ ಅಂಕಿ-ಅಂಶಗಳಿಂದ ವೇದ್ಯವಾಗುತ್ತದೆ. ಜಾಗತಿಕವಾಗಿ ಆರ್ಥಿಕ ಬೆಳವಣಿಗೆ ದರವು 2021ರಲ್ಲಿ ಶೇ. 6 ಇದ್ದುದು, 2022ರಲ್ಲಿ ಶೇ. 2.9 ಹಾಗೂ 2023ರಲ್ಲಿ ಶೇ. 2.7ಕ್ಕೆ ಕುಸಿದಿದೆ. ಇದಕ್ಕೆ ಹೋಲಿಸಿದರೆ ಭಾರತ 2021-22 ರಲ್ಲಿ ಶೇ. 8.7 ಬೆಳವಣಿಯನ್ನು ದಾಖಲಿಸಿದೆ. 2022-23ರಲ್ಲಿ ಶೇ. 7ಕ್ಕೆ ತಲುಪುವ ನಿರೀಕ್ಷೆ ಇದೆ.
ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿದ್ದರೂ ಕೆಲವೊಂದು ಅಡಚಣೆ, ಆತಂಕ, ಸವಾಲುಗಳೂ ಕಂಡುಬರುತ್ತಿವೆ. ಈ ವರ್ಷದ ಎರಡನೇ ತ್ರೖೆಮಾಸಿಕದಲ್ಲಿ ಸರಕುಗಳ ವ್ಯಾಪಾರ ಕೊರತೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ರಫ್ತು ವಲಯ ಈ ವರ್ಷ ತತ್ತರಿಸುತ್ತಿರುವುದು ಹಾಗೂ ಚಾಲ್ತಿ ಖಾತೆ ಕೊರತೆ ಅಧಿಕವಾಗುತ್ತಿರುವುದನ್ನು ಆರ್ಥಿಕ ಸಮೀಕ್ಷೆಯಲ್ಲೇ ಸೂಕ್ಷ್ಮವಾಗಿ ಪ್ರಸ್ತಾಪಿಸಲಾಗಿದೆ. ಬೆಲೆಯೇರಿಕೆ ಬಿಸಿ ಸಹ ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮುಂದಿನ ವರ್ಷ ಆರ್ಥಿಕ ಬೆಳವಣಿಗೆ ದರ ಕುಸಿತವಾದರೂ ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ, ಸಾಮಾಜಿಕ ಕಲ್ಯಾಣ, ಮಿಲಿಟರಿ ಮುಂತಾದ ಆದ್ಯತೆಯ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಅಗತ್ಯ ಸಂಪನ್ಮೂಲ ಒದಗಿಸಲೇಬೇಕಾಗತ್ತದೆ. ಜಾಗತಿಕವಾಗಿ ಬೇಡಿಕೆ ಕಡಿಮೆಯಾಗುವುದನ್ನು ನಿಭಾಯಿಸಬೇಕಾದರೆ ಸ್ಥಳೀಯವಾಗಿ ಉತ್ಪನ್ನಗಳ ಬಳಕೆ ಪ್ರೋತ್ಸಾಹಿಸಬೇಕಾಗುತ್ತದೆ. ಜನರ ಖರೀದಿ ಸಾಮರ್ಥ್ಯ ವರ್ಧನೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮುಂತಾದ ಕ್ರಮಗಳ ಮೂಲಕ ಆರ್ಥಿಕತೆ ಹಳಿ ತಪ್ಪದಂತೆ ಸಮತೋಲನ ಕಾಯ್ದುಕೊಳ್ಳುವ ಸವಾಲು ಸರ್ಕಾರದ ಮುಂದಿದೆ.