ಸಂಪಾದಕೀಯ | ನಿರೀಕ್ಷೆಗಳ ಭಾರ: ವೇಗ ಪಡೆಯಲಿದೆಯೇ ಆರ್ಥಿಕ ಬೆಳವಣಿಗೆ?

Editorial
Published on

ದೇಶದ ಎಲ್ಲ ವಲಯ, ರಂಗಗಳ ದೃಷ್ಟಿ ಇಂದು (ಫೆಬ್ರವರಿ 1) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್​ನತ್ತ ನೆಟ್ಟಿದೆ. ಸ್ವಾತಂತ್ರೊ್ಯೕತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತ ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆಗಳನ್ನು ಇರಿಸಬೇಕು ಎಂಬ ಆಶಯ ಒಂದೆಡೆಯಾದರೆ, ಕಳೆದ ಎರಡು ವರ್ಷಗಳಿಂದ ಕರೊನಾ ಮಹಾಮಾರಿ ವಿತ್ತವ್ಯವಸ್ಥೆಗೆ ಬಲವಾದ ಪೆಟ್ಟು ನೀಡಿರುವ ಕಹಿವಾಸ್ತವ ಮತ್ತೊಂದೆಡೆ. ಆರ್ಥಿಕತೆ ಇತ್ತೀಚಿನ ದಿನಗಳಲ್ಲಿ ಕೊಂಚ ಚೇತರಿಕೆಯ ಹಾದಿ ಹಿಡಿದಿದೆಯಾದರೂ, ಇನ್ನಷ್ಟು ವೇಗ ಕಂಡುಕೊಳ್ಳಬೇಕಿದೆ.

ಈ ನಡುವೆ ವಿತ್ತ ಸಚಿವರು ತೆರಿಗೆ ಸಂಗ್ರಹದ ಕೊರತೆಯನ್ನು ಹೇಗೆ ನಿಭಾಯಿಸಲಿದ್ದಾರೆ, ಕರೊನಾ ಹೊಡೆತದಿಂದ ಸೊರಗಿರುವ ಹಲವು ವಲಯಗಳಿಗೆ ಹೇಗೆ ಚೈತನ್ಯ ತುಂಬಲಿದ್ದಾರೆ, ಈ ಬಜೆಟ್ ಜನಸಾಮಾನ್ಯರಿಗೆ ಹೊರೆ ಆಗಲಿದೆಯೋ ಅಥವಾ ನಿರಾಳವಾಗಿಸಲಿದೆಯೋ ಹೀಗೆ ಹಲವು ಕುತೂಹಲಭರಿತ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಆದರೆ, ನಿರೀಕ್ಷೆಗಳ ಭಾರ ಹೆಚ್ಚಿರುವ ಜಟಿಲ ಬಜೆಟ್ ಇದಾಗಿದೆ ಎಂಬುದಂತೂ ವಾಸ್ತವ. ಪಂಚರಾಜ್ಯಗಳ ಚುನಾವಣೆಯೂ ಸಮೀಪಿಸಿರುವುದರಿಂದ ಸರ್ಕಾರ ಸಮತೋಲಿತ ಮಾರ್ಗ ಅನುಸರಿಸಲಿದೆ ಎಂಬುದು ತಜ್ಞರ ಅನಿಸಿಕೆ. ಪ್ರತಿ ಬಜೆಟ್ ಹೊತ್ತಲ್ಲೂ ಒಂದಷ್ಟು ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ, ಕ್ಲಿಷ್ಟವಾಗಿದೆ. ಹಾಗಾಗಿ, ಸರ್ಕಾರದ ಘೋಷಣೆಗಳು, ಮುಂದಿನ ಹಾದಿ ಭಾರಿ ಕುತೂಹಲ ಮೂಡಿಸಿರುವುದಂತೂ ಹೌದು. ರಫ್ತುಕೇಂದ್ರಿತ ಆರ್ಥಿಕತೆಗೆ ಉತ್ತೇಜನ, ಆತ್ಮನಿರ್ಭರ ಭಾರತದಂಥ ಸ್ವಾವಲಂಬಿ ಯೋಜನೆಗಳು ಮತ್ತು ಸಾಮಾಜಿಕ ಸುರಕ್ಷತೆ ಒದಗಿಸುವ ಯೋಜನೆಗಳ ಅಗತ್ಯವಿದೆ. ಮೂಲಸೌಕರ್ಯ, ಕೃಷಿ ವಲಯಗಳಲ್ಲಿ ಹೆಚ್ಚಿನ ಹೂಡಿಕೆಗೆ ದಾರಿ ಕಂಡುಕೊಳ್ಳಬೇಕಿದೆ.

ಈ ಮಧ್ಯೆ, ಬಜೆಟ್ ಮುನ್ನಾದಿನ ವಾಡಿಕೆಯಂತೆ ರಾಷ್ಟ್ರಪತಿಗಳ ಭಾಷಣದ ಬಳಿಕ ವಿತ್ತ ಸಚಿವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಏಪ್ರಿಲ್​ನಿಂದ ಆರಂಭವಾಗುವ ಹೊಸ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಶೇಕಡ 8ರಿಂದ 8.5ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. ಕೃಷಿ ಮತ್ತು ಉತ್ಪಾದನಾ ವಲಯದಲ್ಲಿನ ಬೆಳವಣಿಗೆಗಳಿಂದಾಗಿ ಆರ್ಥಿಕತೆ ಸವಾಲು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿರುವುದು ಸಮಾಧಾನ ಮೂಡಿಸುವ ಸಂಗತಿ. ಹಾಗಾಗಿಯೇ, ಸೋಮವಾರ ಷೇರುಪೇಟೆಯೂ ಕೊಂಚ ಏರಿಕೆಯಾಗಿ, ಉತ್ಸಾಹ ತೋರಿದೆ. ಅದೇನಿದ್ದರೂ, ಉದ್ಯೋಗಸೃಷ್ಟಿ ನಿಟ್ಟಿನಲ್ಲಂತೂ ವಿಶೇಷ ಪ್ರಯತ್ನಗಳು ಅಗತ್ಯ. ಹಲವು ವಲಯಗಳಲ್ಲಿ ಉದ್ಯೋಗ ಕಡಿತ ಸಾಮಾನ್ಯ ಎಂಬಂತಾಗಿದೆ. ‘5 ವರ್ಷಗಳಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು’ ಎಂದು 2020ರಲ್ಲೇ ಭರವಸೆ ನೀಡಿದ್ದ ಸರ್ಕಾರ, ಈ ಹಾದಿಯಲ್ಲಿ ಸಾಧಿಸಿರುವ ಪ್ರಗತಿ ಅತ್ಯಲ್ಪ. ಎಲ್ಲ ರಂಗಗಳ ಮೂಲಸೌಕರ್ಯ ವೃದ್ಧಿಯಾಗದೆ ಆರ್ಥಿಕತೆ ಬಲಗೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರಿತಿರುವ ಸರ್ಕಾರ ಉಳಿದ ನಿರೀಕ್ಷೆ, ಸವಾಲುಗಳಿಗೆ ಬಜೆಟ್ ಮೂಲಕ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net