

ಹೈದರಾಬಾದ್: ಫೆಬ್ರವರಿ 2023ರಲ್ಲಿ ಹೈದರಾಬಾದ್ನಲ್ಲಿ ನಡೆದ ಫಾರ್ಮುಲಾ-ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ಎಸ್ ನಾಯಕ ಕೆ.ಟಿ. ರಾಮ ರಾವ್(K T Rama Rao) ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ.
ತೆಲಂಗಾಣ ಪೊಲೀಸ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನೀಡಿದ ದೂರಿನನ್ವಯ ಕೇಂದ್ರೀಯ ಸಂಸ್ಥೆ ಕಳೆದ ವಾರ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. ಬಿಆರ್ಎಸ್ ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಜನವರಿ 7ರಂದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಮತ್ತು ನಿವೃತ್ತ ಅಧಿಕಾರಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಎಚ್ಎಂಡಿಎ) ಮಾಜಿ ಮುಖ್ಯ ಎಂಜಿನಿಯರ್ ಬಿಎಲ್ಎನ್ ರೆಡ್ಡಿ ಅವರಿಗೆ ಕ್ರಮವಾಗಿ ಜನವರಿ 2 ಮತ್ತು ಜನವರಿ 3 ರಂದು ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫೆಮಾ (FEMA) ಉಲ್ಲಂಘನೆಗಳ ಬಗ್ಗೆ ಪ್ರತ್ಯೇಕ ತನಿಖೆಯನ್ನು ಪ್ರಾರಂಭಿಸಲು ಇಡಿ ನಿರ್ಧರಿಸಿದೆ. ಈ ಹಣವನ್ನು ವಿದೇಶಕ್ಕೆ ವರ್ಗಾಯಿಸಲಾಗಿದೆಯೇ ಮತ್ತು ವಿದೇಶಿ ವಿನಿಮಯ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಜಾರಿ ಪ್ರಕರಣದ ಮಾಹಿತಿ ವರದಿಯಲ್ಲಿ ಇಡಿ ಕೆಟಿಆರ್, ಅರವಿಂದ್ ಮತ್ತು ರೆಡ್ಡಿ ಎಂದು ಹೆಸರಿಸಿದೆ.
ಒಪ್ಪಂದದ ಪ್ರಕಾರ, ಸರ್ಕಾರದ ಪಾತ್ರವು ಮೂಲಸೌಕರ್ಯ ಮತ್ತು ನಾಗರಿಕ ಸೌಕರ್ಯಗಳನ್ನು ಒದಗಿಸುವುದಕ್ಕೆ ಸೀಮಿತವಾಗಿರುತ್ತದೆ. ಎಚ್ಎಂಡಿಎ ನೇರ ಒಪ್ಪಂದದಲ್ಲಿ ಭಾಗಿಯಾಗದಿದ್ದರೂ ಹಣ ಬಿಡುಗಡೆ ಮಾಡಿದೆ ಎಂಬ ಆರೋಪವಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಕುಟುಂಬಕ್ಕೆ ಸಂಬಂಧಿಸಿದ ಎರಡನೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಕೆಟಿಆರ್ ಅವರ ಸಹೋದರಿ ಕೆ.ಕವಿತಾ ಅವರು ಈ ಹಿಂದೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದರು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಬಿಆರ್ಎಸ್ ಪಕ್ಷಕ್ಕೆ ಮತ್ತೊಂದು ರಾಜಕೀಯ ಮತ್ತು ಕಾನೂನು ಸವಾಲಾಗಿದೆ.
ಮತ್ತೊಂದೆಡೆ ಈ ಆರೋಪವನ್ನು ನಿರಾಕರಿಸಿದ ರಾಮ್ ರಾವ್, ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ? 55 ಕೋಟಿ ಪಾವತಿಸಿದ್ದೇವೆ. ಅವರು (ಫಾರ್ಮುಲಾ-ಇ) ಪಾವತಿಯನ್ನು ಸ್ವೀಕರಿಸಿದ್ದಾರೆ. ಇದು ನೇರ ಖಾತೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)