ಕೆಐಡಿಬಿ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ

ED Raid
Published on

ಬೆಂಗಳೂರು: ಬಹುಕೋಟಿ ಅವ್ಯವಹಾರ ಆರೋಪದಡಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಬೆಂಗಳೂರು ಮತ್ತು ಧಾರವಾಡ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.

ಶುಕ್ರವಾರ ಏಕಕಾಲಕ್ಕೆ ಪ್ರತ್ಯೇಕ ತಂಡಗಳು ರೇಸ್‌ಕೋರ್ಸ್ ರಸ್ತೆ ಖನಿಜ ಭವನದಲ್ಲಿ ಇರುವ ಕೆಐಡಿಬಿ ಕಚೇರಿ ಹಾಗೂ ಧಾರವಾಡದಲ್ಲಿ ಇರುವ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು. ಅವ್ಯವಹಾರ ಸಂಬಂಧ ಕೆಲದಾಖಲೆ ಮತ್ತು ಡೇಟಾವನ್ನು ಸಂಗ್ರಹಿಸಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಭೂ ಸ್ವಾಧೀನ ಹೆಸರಲ್ಲಿ ನೂರಾರು ಕೋಟಿ ರೂಪಾಯಿಯನ್ನು ಅಧಿಕಾರಿಗಳು ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರ ಪಡೆದಿರುವುದು ಹಾಗೂ ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಲೂಟಿ, ಜತೆಗೆ ಐಡಿಬಿಐ ಬ್ಯಾಂಕ್‌ನ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆದಿರುವ ಆರೋಪ ಕೇಳಿಬಂದಿತ್ತು.

ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂಸ್ವಾಧೀನ ಹೆಸರಿನಲ್ಲಿ ಅಕ್ರಮ ಮತ್ತು ಧಾರವಾಡ ಕೆಲಗೇರಿ, ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿ ಅಕ್ರಮ ಎಸಗಿರುವ ಆರೋಪ ಕೆಐಡಿಬಿ ಮೇಲಿದೆ. ಈ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net