ಶಾಸಕ ನಂಜೇಗೌಡ ವಿರುದ್ಧ ಇಡಿ ಶೋಧ ಅಂತ್ಯ

raid
ಇಡಿ ದಾಳಿಯ ನಂತರ ಶಾಸಕ ಕೆ.ವೈ.ನಂಜೇಗೌಡ ಬೆಂಗಳಿಗರಿಗೆ ಕಾಣಿಸಿಕೊಂಡ ಕ್ಷಣ.
Published on

ಕೋಲಾರ: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡವು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮನೆ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದು, 2ನೇ ದಿನ ಮಂಗಳವಾರವೂ ಶೋಧ ಕಾರ್ಯ ಮುಂದುವರಿದು, ರಾತ್ರಿಗೆ ಅಂತ್ಯಗೊಂಡಿತು.

ಶಾಸಕ ಕೆ.ವೈ.ನಂಜೇಗೌಡ ಹಾಗೂ ಕುಟುಂಬ ಸದಸ್ಯರ ಅಸ್ತಿ ವಿವರ, ಶೋಧ ಕಾರ್ಯ ಸಮಯದಲ್ಲಿ ಸಿಕ್ಕ ನಗದು, ಚಿನ್ನಾಭರಣ, ಆಸ್ತಿ ದಾಖಲೆಗಳು ಜತೆಗೆ ಜಲ್ಲಿ ಕ್ರಷರ್​ಗಳ ಸಂಪೂರ್ಣ ಮಾಹಿತಿ, ಬ್ಯಾಂಕ್​ ಮಾಹಿತಿ, ಆಡಿಟ್​ಮಾಹಿತಿ ಹಾಗೂ ಸಹಿ ತೆಗೆದುಕೊಂಡಿದ್ದಾರೆ. ಕೋಚಿಮುಲ್​ನಲ್ಲಿ ಎಂಡಿ, ಆಡ್ಮಿನ್​ವಿಭಾಗದಲ್ಲಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ತೆರಳಿದ್ದಾರೆ. ನಿರ್ದೇಶಕರನ್ನೂ ಬೆಂಗಳೂರಿಗೆ ವಿಚಾರಣೆಗಾಗಿ ಕರೆಸಿಕೊಳ್ಳುವ ಸಾಧ್ಯತೆಗಳಿವೆ.

ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿರುವ ನಂಜೇಗೌಡ ಅವರ ನಿವಾಸಕ್ಕೆ ಸೋಮವಾರ ಬೆಳ್ಳಂಬೆಳಗ್ಗೆ 3 ಇನ್ನೋವಾ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ಪುತ್ರ ಹರೀಶ್​ ಮತ್ತು ಆಪ್ತ ಸಹಾಯಕ ಹರೀಶ್​ಗೌಡ ಅವರನ್ನು ಕಡತಗಳ ಸಮೇತ ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಮಂಗಳವಾರವೂ ಕಾರ್ಯಾಚರಣೆ ಮುಂದುವರಿಸಿದ್ದು ನಂಜೇಗೌಡ ಹಾಗೂ ಕುಟುಂಬದ ಸದಸ್ಯರು ಖಾತೆ ಹೊಂದಿರುವ ಬ್ಯಾಂಕ್​ಗಳಿಗೆ ತೆರಳಿ ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಪ್ರತ್ಯೇಕ ಕೊಠಡಿಗಳಲ್ಲಿ ವಿಚಾರಣೆ
ಕೋಚಿಮುಲ್​ನಲ್ಲಿ ಇತ್ತೀಚಿಗೆ ನಡೆದಿರುವ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಆರೋಪವು ಭಾರೀ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಒಕ್ಕೂಟದಲ್ಲಿ ಬೀಡುಬಿಟ್ಟಿದ್ದು, ಹಣಕಾಸು ವಿಭಾಗ, ಆಡ್ಮಿನ್​ ವಿಭಾಗವನ್ನು ಲಾಕ್​ ಮಾಡಿಕೊಂಡಿದ್ದಾರೆ. ಚಿಂತಾಮಣಿ ತಾಲೂಕಿನ ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣ ಅವರನ್ನು ವಿಚಾರಣೆಗಾಗಿ ಒಕ್ಕೂಟಕ್ಕೆ ಕರೆದಿದ್ದಾರೆ. ಜತೆಗೆ ಸೋಮವಾರ ರಾತ್ರಿಯೇ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್​ಮೂರ್ತಿ ಅವರನ್ನು ಒಕ್ಕೂಟಕ್ಕೆ ಕರೆ ತಂದು ಪ್ರತ್ಯೇಕ ಕೊಠಡಿಗಳಲ್ಲಿ ವಿಚಾರಣೆ ನಡೆಸಿದ್ದಾರೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕಾನೂನು ಪ್ರಕಾರ ಕೈಗೊಂಡಿರುವ ಪ್ರಕ್ರಿಯೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಬೇರೆ ನಿರ್ದೇಶಕರಲ್ಲಿ ತಳಮಳ ಶುರುವಾಗಿದೆ.
ಲ್ಯಾಪ್​ಟಾಪ್​ ವಶಕ್ಕೆ
ಗೋಪಾಲಮೂರ್ತಿ ಅವರನ್ನು ಸೋಮವಾರ ರಾತ್ರಿ 1 ಗಂಟೆ ಸುಮಾರಿನಲ್ಲಿ ಕರೆತರಲು ಹೋದ ಸಂದರ್ಭದಲ್ಲಿ ಅಧಿಕಾರಿಗಳು ಶೋಧ ನಡೆಸಿದಾಗ ಲ್ಯಾಪ್​ಟಾಪ್​ ಪತ್ತೆಯಾಗಿದ್ದು, ಮಹತ್ತರ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿ ತಿಳಿದುಬಂದಿದೆ. ಆಡ್ಮಿನ್​ ವಿಭಾಗದ ಕಂಪ್ಯೂಟರ್​ ಅಪರೇಟರ್​ಗಳನ್ನು ಕರೆದು ದಾಖಲು ಮಾಡಿರುವ ಮಾಹಿತಿ ಕುರಿತು ಕಲೆ ಹಾಕುತ್ತಿದ್ದಾರೆ. ಜತೆಗೆ ಹಣಕಾಸು ವಿಭಾಗದ ಅಧಿಕಾರಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಒಕ್ಕೂಟದ ಆಡ್ಮಿನ್​ ನಾಗೇಶ್​ ಅವರು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಭೇಟಿಗೆ ಅವಕಾಶ ನೀಡದ ಅಧಿಕಾರಿಗಳು
ಎಂಎಲ್​ಸಿ ಅನಿಲ್​ ಕುಮಾರ್​, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ ಹಾಗೂ ಬೆಂಬಲಿಗರು ಮಂಗಳವಾರ ಬೆಳಗ್ಗೆ ಶಾಸಕ ಕೆ.ವೈ.ನಂಜೇಗೌಡರನ್ನು ಭೇಟಿ ಮಾಡಲು ಹೋಗಿದ್ದರು. ಇದಕ್ಕೆ ಇಡಿ ಅಧಿಕಾರಿಗಳು ಅಕ್ಷೇಪ ವ್ಯಕ್ತಪಡಿಸಿ ನಮ್ಮ ಕೆಲಸ ಮುಗಿಯುವ ತನಕ ಯಾರನ್ನೂ ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿ ವಾಪಸ್​ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net