

ನವದೆಹಲಿ; ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯಲ್ಲಿ 'ತೀವ್ರ' ಸುಧಾರಣೆಯನ್ನು ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.
ಸಂಶೋಧನಾ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿದ್ದು, ಭಾರತದ ಆರ್ಥಿಕತೆಗೆ ಭಾರಿ 'ಬೂಸ್ಟರ್ ಡೋಸ್' ಅಗತ್ಯವಿದೆ ಎಂದು ಹೇಳಿದ್ದಾರೆ.
ನುವಾಮ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಸಂಸ್ಥೆ ಬುಧವಾರ ಬಿಡುಗಡೆ ಮಾಡಿದ್ದ ಸಂಶೋಧನಾ ವರದಿ ಉಲ್ಲೇಖಿಸಿದ ಅವರು, ಭಾರತದ ಇಂದಿನ ಆರ್ಥಿಕ ಸ್ಥಿತಿಯ ಬಗ್ಗೆ ವರದಿಯಲ್ಲಿ ಕಳವಳ ವ್ಯಕ್ತವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ವರದಿಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.
(ಏಜೆನ್ಸೀಸ್)
ಸಾಲ ಮತ್ತು ರಫ್ತು, ಜಿಎಸ್ಟಿ ಸಂಗ್ರಹದಂತಹ ಹಲವು ಪ್ರಮುಖ ಆವರ್ತನ ಸೂಚಕಗಳು ನಿಧಾನಗತಿಗೆ ತಲುಪಿವೆ. ರಿಯಲ್ ಎಸ್ಟೇಟ್, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಮಾರಾಟ ಸೇರಿದಂತೆ ಖಾಸಗಿ ಬಳಕೆ ಪ್ರಮಾಣವೂ ನಿರೀಕ್ಷಿತ ವೇಗವನ್ನು ಪಡೆದುಕೊಳ್ಳುತ್ತಿಲ್ಲ ಎಂಬುದನ್ನು ವರದಿ ಎತ್ತಿ ತೋರಿಸಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಕೃಷಿ ಬೆಳೆಗಳ ಬೆಲೆ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಇದು ಅತಿ ದೊಡ್ಡ ಹೊಡೆತವಾಗಿ ಮಾರ್ಪಟ್ಟಿದೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹಣದ ಹರಿವಿಲ್ಲ. ಸಂಬಳ ಹಾಗೂ ಬಂಡವಾಳ ವೆಚ್ಚವನ್ನು ಕಡಿತ ಮಾಡುತ್ತಿವೆ. ಈಗಾಗಿ ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ಬೇಕು ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಜಿಎಸ್ಟಿಯ ಸುಧಾರಣೆ, ತೆರಿಗೆ ಭಯೋತ್ಪಾದನೆ, ಮುಕ್ತ ವಾತಾವರಣ ಸೃಷ್ಟಿ ಮತ್ತು ಕೆಲ ವ್ಯಕ್ತಿಗಳ ಉದ್ಯಮಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದಿದ್ದಾರೆ.