ಧರ್ಮಸ್ಥಳ ಯೋಜನೆಯಿಂದ ಆರ್ಥಿಕ ಚೈತನ್ಯ

tth sdm
ತೀರ್ಥಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ರಾಘವೇಂದ್ರ, ರಹಮತ್ ಉಲ್ಲಾ ಅಸಾದಿ, ಡಾ. ಜೀವಂಧರ ಜೈನ್ ಇತರರಿದ್ದರು.
Published on

ತೀರ್ಥಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ತುಂಬಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮದ್ಯವರ್ಜನೆ ಶಿಬಿರಗಳ ಮೂಲಕ ವ್ಯಸನಿಗಳ ಬದುಕಿನಲ್ಲಿ ಹೊಸ ಚೈತನ್ಯ ತುಂಬುವ ಕಾರ್ಯ ಮಹಾತ್ಮ ಗಾಂಧಿ ಅವರ ದಿವ್ಯಾತ್ಮಕ್ಕೆ ಶಾಂತಿ ನೀಡುವಂತಿದೆ. ಈ ಸಂಘಟನೆಯ ಕಾರ್ಯ ಸಾರ್ವಜನಿಕ ಕ್ಷೇತ್ರದಲ್ಲಿರುವ ನನ್ನಂಥವರಿಗೂ ಪ್ರೇರಣೆ ನೀಡುವಂತಿದೆ ಎಂದರು.

ಮದ್ಯವರ್ಜನ ಶಿಬಿರ, ಮಹಿಳಾ ಸಬಲೀಕರಣ ಮುಂತಾದ ಯೋಜನೆಗಳು ಮಹಾತ್ಮ ಗಾಂಧಿ ಅವರ ಆಶಯಗಳನ್ನು ಅನುಷ್ಠಾನಗೊಳಿಸುವ ಚಿಂತನೆಯನ್ನು ಒಳಗೊಂಡಿವೆ. ಸಮಾಜದ ಕಟ್ಟಕಡೆಯ ಕುಟುಂಬಗಳಲ್ಲಿ ಆರ್ಥಿಕ ಚೈತನ್ಯ ತುಂಬುತ್ತಿರುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ. ಒಂದು ಸರ್ಕಾರ ಮಾಡಲಾಗದ ಕೆಲಸ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುತ್ತಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ನಂತರ ವಿಶೇಷವಾಗಿ ಗ್ರಾಮೀಣ ಜನರಲ್ಲಿ ಪ್ರಜ್ಞಾವಂತಿಕೆ ಮೂಡುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಲ್ಲೂ ಆರ್ಥಿಕ ಚೈತನ್ಯ ತುಂಬುವ ಮೂಲಕ ಸಾಮಾಜಿಕ ವ್ಯವಸ್ಥೆಯೇ ಬದಲಾಗಿದೆ. ಆರೋಗ್ಯ ವಿಮೆ ಯೋಜನೆಯಡಿ 4710 ಕುಟುಂಬಗಳ 11 ಸಾವಿರಕ್ಕೂ ಅಧಿಕ ಜನರನ್ನು ಒಳಪಡಿಸಿರುವ ಕಾರ್ಯ ಅನುಕರಣೀಯ. ಭಜನಾ ಮಂಡಳಿಗಳಿಗೆ ಉತ್ತೇಜನ ನೀಡಿ ಆಧ್ಯಾತ್ಮಿಕ ಚಿಂತನೆ ಮೂಡಿಸುತ್ತಿರುವುದು ಪ್ರಶಂಸನೀಯ ಎಂದರು.

ಮದ್ಯವರ್ಜನ ಶಿಬಿರಾರ್ಥಿಗಳಾದ ಯೋಗೀಶ್ ಹಾಗೂ ಧನೇಂದ್ರ ಮಾತನಾಡಿ, ಸಮಾಜ ಮಾತ್ರವಲ್ಲದೆ ಕುಟುಂಬದ ಎಲ್ಲ ಸದಸ್ಯರಿಂದಲೂ ಅವಗಣನೆಗೆ ಒಳಗಾಗಿದ್ದ ನಮಗೆ ಮದ್ಯವರ್ಜನ ಶಿಬಿರ ಹೊಸ ಜೀವನ ನೀಡಿದೆ ಎಂದು ಅಭಿಪ್ರಾಯಪಟ್ಟರು..

ಪಟ್ಟಣದ ಕುಶಾವತಿಯಿಂದ ಜನಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಡಾ. ಜೀವಂಧರ ಜೈನ್, ಗ್ರಾಮಾಭಿವೃದ್ಧಿ ಯೋಜನೆಯ ಮುರುಳೀಧರ ಶೆಟ್ಟಿ ಹಾಗೂ ಮಾಲತಿ ದಿನೇಶ್, ಅಶೋಕಮೂರ್ತಿ, ಮುದ್ದಣ್ಣ, ವಿನುತಾ ಮುರುಳೀಧರ್, ಶಶಿಧರ ಹಂದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net