

ಬಾಳೆಹೊನ್ನೂರು: ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯಲ್ಲಿ ಸದಸ್ಯರಾಗುವ ಮೂಲಕ ಮಹಿಳೆಯರು ಬ್ಯಾಂಕ್ ವ್ಯವಹಾರ ಇತರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆರ್ಥಿಕ ಸಬಲೀಕರಣ ಸಾಧಿಸುತ್ತಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ನಾರಾಯಣಗುರು ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯ ಬಿ.ಕಣಬೂರು ಮತ್ತು ಬಾಳೆಹೊನ್ನೂರು ವಲಯದ ಪ್ರಗತಿಬಂಧು ಸ್ವ ಸಹಾಯ ಸಂಘಗಳು ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಪುರುಷರೊಂದಿಗೆ ಸರಿಸಮಾನರಾಗಿ ವ್ಯವಹಾರ ನಡೆಸುತ್ತಿದ್ದಾರೆ. ಮಹಿಳೆಯರಿಂದ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ, ರಾಜ್ಯದ 20 ಸಾವಿರ ಹಳ್ಳಿಗಳಲ್ಲಿ 6.5 ಲಕ್ಷ ಸಂಘಗಳಿದ್ದು 54 ಲಕ್ಷ ಲಾನುಭವಿಗಳು ಯೋಜನೆಗೆ ಒಳಪಟ್ಟಿದ್ದಾರೆ. ಸದಸ್ಯರು ನೀಡಿದ ಶುಲ್ಕ 3 ಸಾವಿರ ಕೋಟಿ ರೂ. ಠೇವಣಿಯಾಗಿದೆ. ಬ್ಯಾಂಕಿನಿಂದ 1 ಲಕ್ಷ ಕೋಟಿ ಪ್ರಗತಿನಿಧಿ ಪಡೆದು ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಧ್ಯಾಪಕಿ ಮಧುರಾ ಮಂಜುನಾಥ್, ತಾಲೂಕು ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ, ಗ್ರಾಪಂ ಸದಸ್ಯ ಬಿ.ಕೆ.ಮಧುಸೂದನ್, ವಲಯ ಮೇಲ್ವಿಚಾರಕ ಮೋಹನ್, ಪ್ರಮುಖರಾದ ಕ್ಯಾಪ್ಟನ್ ಪ್ರದೀಪ್, ರಮೇಶ್ ಭಟ್, ದಿನೇಶ್ ಹೆಗ್ಡೆ, ಬಿ.ಸಿ.ಸಂತೋಷ್ ಕುಮಾರ್, ಕುಮಾರಚಂದ್ರ ನಾಯಕ್, ಶಕುಂತಲಾ, ಕಾರ್ತಿಕ್ ಕಾರ್‌ಗದ್ದೆ ಇದ್ದರು.