ಬಿಜೆಪಿ ಆಡಳಿತ ಇರುವ ರಾಜ್ಯಗಳ ಆರ್ಥಿಕ ಸ್ಥಿತಿ ಅಧೋಗತಿ

santosh lad
ಭದ್ರಾವತಿಯ ಉಜ್ಜನೀಪುರ ಬಳಿ ಕಾರ್ಮಿಕ ಭವನ ಲೋಕಾರ್ಪಣೆ ಕಾರ್ಯಕ್ರಮವನ್ನು ಶಾಸಕ ಸಂಗಮೇಶ್ವರ್ ಉದ್ಘಾಟಿಸಿದರು. ಸಂತೋಷ್ ಲಾಡ್, ಆಂಜನೇಯ, ಜೆ.ಸಿ.ಗೀತಾ ರಾಜಕುಮಾರ್, ಸೈಯದ್ ರಿಯಾಜ್ ಇತರರಿದ್ದರು.
Published on

ಭದ್ರಾವತಿ: ಅಲೆಮಾರಿ ಸಮುದಾಯಗಳು ಸೇರಿ 91 ಸಣ್ಣ ಸಣ್ಣ ವಲಯಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ಬಡವರ ಜೀವನ ಸುಧಾರಣೆ ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಕಾರ್ಮಿಕ ಇಲಾಖೆಯಿಂದ ಉಜ್ಜನೀಪುರ ಬೈಪಾಸ್ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರೃ ಬಂದಾಗಿನಿಂದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಜಾರಿಗೊಳಿಸಿದ ಜನಕಲ್ಯಾಣ ಕಾರ್ಯಕ್ರಮಗಳು ಇಂದಿಗೂ ಚಾಲ್ತಿಯಲ್ಲಿವೆ. ಅವುಗಳ ಉಪಯೋಗವನ್ನು ಜನಸಾಮಾನ್ಯರು, ಬಡವರು, ಹಿಂದುಳಿದವರು ಪಡೆಯುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ನೀಡುತ್ತಿರುವ ಸ್ಮಾರ್ಟ್‌ಕಾರ್ಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿದೆ ಎಂದರು.

ದೇಶದ 20 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಒಂದು ರಾಜ್ಯದಲ್ಲಿಯೂ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ಹಲವಾರು ಮಠ ಮಾನ್ಯಗಳು ನೀಡಿದ ಅಕ್ಷರ, ಅನ್ನ ದಾಸೋಹದಿಂದಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಬಲಿಷ್ಠವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಹೆಸರು ಬದಲಾಯಿಸಿಕೊಂಡು ಜಾರಿಗೆ ತರುವ ಪ್ರಯತ್ನ ಕೆಲವು ರಾಜ್ಯಗಳಲ್ಲಿ ನಡೆಯುತ್ತಿದೆ ಎಂದರು.

ಶಾಸಕ ಸಂಗಮೇಶ್ವರ್ ತಾಲೂಕಿನ ಅಭಿವೃದ್ಧಿಗಾಗಿ ಸದನದಲ್ಲಿ ಶ್ರಮಿಸಿದ ಕಾರಣ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಭವನ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ಕಾರದಿಂದ ಉದ್ಘಾಟನೆ ಮಾಡುತ್ತಿರುವುದು ಕಾಂಗ್ರೆಸಿಗರಲ್ಲಿ ಜಾತ್ಯತೀತ ಭಾವನೆ ಇರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.

ಕಾರ್ಮಿಕ ಕಲ್ಯಾಣ ಇಲಾಖೆ ಆಯುಕ್ತ ಆಂಜನೇಯ, ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯ ಬಿ.ಕೆ.ಮೋಹನ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಗಣೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಅಧಿಕಾರಿಗಳಾದ ಡಿ.ಭಾರತಿ, ಎನ್.ಹೇಮಂತ್, ಎಸ್.ಬಿ.ರವಿಕುಮಾರ್, ಎಚ್.ಎನ್.ಗೋಪಾಲಕಷ್ಣ, ಜಿ.ಎಂ.ರಕ್ಷಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net